More

    ಸಂಪಾದಕೀಯ | ಗುರುತರ ಆರ್ಥಿಕ ಸಾಧನೆ; ಸ್ಮಾರ್ಟ್​ಫೋನ್ ರಫ್ತು ಪ್ರಮಾಣ ದುಪ್ಪಟ್ಟು

    ಭಾರತೀಯ ಸ್ಮಾರ್ಟ್​ಫೋನ್ ರಫ್ತು ಪ್ರಮಾಣವು ಇದೇ ಮೊದಲ ಬಾರಿಗೆ 11.2 ಶತಕೋಟಿ ಡಾಲರ್ (90 ಸಾವಿರ ಕೋಟಿ ರೂ.) ತಲುಪಿರುವುದು ಹಲವು ಆಯಾಮಗಳಲ್ಲಿ ಗಮನಾರ್ಹ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2022-23ನೇ ಹಣಕಾಸು ವರ್ಷದಲ್ಲಿ ಸ್ಮಾರ್ಟ್​ಫೋನ್ ರಫ್ತು ಪ್ರಮಾಣವು ದುಪ್ಪಟ್ಟು ಆಗಿರುವುದು ಗುರುತರ ಆರ್ಥಿಕ ಸಾಧನೆಯೇ ಆಗಿದೆ.

    2021-22ನೇ ಹಣಕಾಸು ವರ್ಷದಲ್ಲಿ ಸ್ಮಾರ್ಟ್​ಫೋನ್​ಗಳ ರಫ್ತು ಮೊತ್ತವು 45 ಸಾವಿರ ಕೋಟಿ ರೂಪಾಯಿ ಆಗಿತ್ತು. 2022-23ನೇ ಹಣಕಾಸು ವರ್ಷದಲ್ಲಿ ಸ್ಮಾರ್ಟ್​ಫೋನ್ ರಫ್ತು ಗುರಿಯನ್ನು 75 ಸಾವಿರ ಕೋಟಿ ರೂಪಾಯಿಗೆ ನಿಗದಿಪಡಿಸಲಾಗಿತ್ತು. ಆದರೆ, ಈಗ ಗುರಿ ಮೀರಿ ಸಾಧನೆಯಾಗಿದೆ. ಕೇಂದ್ರ ಸರ್ಕಾರದ ಪೊ›ಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (ಉತ್ಪಾದನೆ ಆಧರಿತ ಪ್ರೋತ್ಸಾಹಕ- ಪಿಎಲ್​ಐ) ಯೋಜನೆಯಿಂದ ಒದಗಿಸಲಾದ ಬೆಂಬಲವು ಈ ಆರ್ಥಿಕ ಸಾಧನೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ.

    ಸ್ಮಾರ್ಟ್​ಫೋನ್ ರಫ್ತಿನಲ್ಲಿ ಆಪಲ್, ಸ್ಯಾಮಸಂಗ್ ಕಂಪನಿಗಳೇ ಮುಂಚೂಣಿಯಲ್ಲಿವೆ. ಅದರಲ್ಲೂ ಆಪಲ್ ಕಂಪನಿಯ ಪಾಲು ಅರ್ಧದಷ್ಟಿದೆ. ಆಪಲ್ ತನ್ನ ಉತ್ಪನ್ನ ತಯಾರಕರಾದ ಫಾಕ್ಸ್​ಕಾನ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಕಂಪನಿಗಳನ್ನು ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ವಿಸ್ತರಿಸಲು ಪ್ರೇರೇಪಿಸಿದ್ದು ರಫ್ತು ಸಾಧನೆಗೆ ಮಹತ್ವದ ಕೊಡುಗೆ ನೀಡಿದೆ. ರಫ್ತು ವೃದ್ಧಿಯಿಂದಾಗಿ ಭಾರತಕ್ಕೆ ಅಪಾರ ಪ್ರಮಾಣದ ವಿದೇಶಿ ವಿನಿಮಯ ಲಭ್ಯವಾಗಿದೆ. ಅಲ್ಲದೆ, ಈ ಕಂಪನಿಗಳು ಭಾರತದಲ್ಲಿ ಹೂಡಿಕೆ, ಉತ್ಪಾದನೆಯನ್ನು ಹೆಚ್ಚಿಸಿರುವುದು ವ್ಯಾಪಕ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೂ ಕಾರಣವಾಗಿದೆ.

    ಈ ರಫ್ತು ಸಾಧನೆಯಲ್ಲಿ ಗಮನಸೆಳೆಯುವ ಸಂಗತಿಯೆಂದರೆ ಚೀನಾದ ಕಂಪನಿಗಳ ಕೊಡುಗೆ ನಗಣ್ಯವಾಗಿರುವುದು. ನೆರೆ ರಾಷ್ಟ್ರವಾದ ಚೀನಾದ ಕ್ಸಿಯೊಮಿ, ಒಪ್ಪೊ, ವಿವೊ, ರಿಯಲ್​ವಿು, ಒನ್​ಪ್ಲಸ್ ಮೊದಲಾದ ಕಂಪನಿಗಳು ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಶೇ. 75ರಷ್ಟು ಪಾಲನ್ನು ಹೊಂದಿದ್ದರೂ ರಫ್ತು ಮಾಡುವಲ್ಲಿ ಮಾತ್ರ ಈ ಚೀನೀ ಕಂಪನಿಗಳ ಕೊಡುಗೆ ಇಲ್ಲವಾಗಿದೆ. ಭಾರತದಿಂದ ರಫ್ತು ಹೆಚ್ಚಿಸುವಂತೆ ಚೀನಾ ಕಂಪನಿಗಳಿಗೆ ಸರ್ಕಾರ ಸೂಚಿಸುತ್ತಲೇ ಬಂದಿದ್ದರೂ ಪ್ರಯೋಜನವಾಗಿಲ್ಲ. ಏಕೆಂದರೆ, ಚೀನಾದಲ್ಲಿನ ತಮ್ಮ ಪ್ರಧಾನ ಕಚೇರಿ ಹಾಗೂ ಕಾರ್ಖಾನೆಗಳಿಂದ ವಿದೇಶಗಳಿಗೆ ಈ ಕಂಪನಿಗಳು ರಫ್ತು ಮಾಡುತ್ತಿವೆ. ಅನೇಕ ವರ್ಷಗಳಿಂದಲೂ ಈ ಚೀನೀ ಕಂಪನಿಗಳು ಇದೇ ರೀತಿಯ ಧೋರಣೆ ಮುಂದುವರಿಸಿವೆ ಎಂಬುದು ಕಳವಳಕಾರಿ ಸಂಗತಿಯಾಗಿದೆ.

    ಭಾರತದಿಂದ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದ್ದರೂ ಭಾರತದ ರಫ್ತಿಗೆ ಕೊಡುಗೆ ನೀಡಲು ಮಾತ್ರ ಆಸಕ್ತಿ ತೋರದಿರುವ ಚೀನಾ ಕಂಪನಿಗಳನ್ನು ನಿಯಂತ್ರಿಸಲು ಹಾಗೂ ಪಾಠ ಕಲಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ. ಇಷ್ಟೇ ಅಲ್ಲ, ಚೀನೀ ಕಂಪನಿಗಳ ನಡೆ ಕೂಡ ಸಂಶಯಗಳಿಗೆ ಕಾರಣವಾದದ್ದಿದೆ. ಸೈನಿಕರು ಹಾಗೂ ಅವರ ಕುಟುಂಬದ ಸದಸ್ಯರು ಚೀನೀ ಕಂಪನಿಯ ಮೊಬೈಲ್​ಫೋನ್​ಗಳನ್ನು ಬಳಸಬಾರದೆಂದು ಬೇಹುಗಾರಿಕೆ ಸಂಸ್ಥೆಗಳು ಇತ್ತೀಚೆಗೆ ಎಚ್ಚರಿಕೆ ನೀಡಿದ್ದವು. ಗೂಢಚರ್ಯುಗೆ ಬಳಸುವ ಮಾಲ್​ವೇರ್, ಸ್ಪೈವೇರ್​ಗಳು ಚೀನೀ ಮೊಬೈಲ್​ಫೋನ್​ಗಳಲ್ಲಿ ಇರಬಹುದಾದ ಸಾಧ್ಯತೆಯತ್ತ ಅವು ಗಮನಸೆಳೆದಿದ್ದವು. ಗಡಿ ವಿಷಯದಲ್ಲಿ ಕ್ಯಾತೆ ತೆಗೆಯುವ ಚೀನಾ, ವಾಣಿಜ್ಯಿಕವಾಗಿ ಭಾರತದಿಂದ ಅಪಾರ ಆದಾಯ ಗಳಿಸುತ್ತಿದ್ದು, ಜನರು ಸಹ ಖರೀದಿಯಲ್ಲಿ ವಿವೇಚನೆ ತೋರಿದರೆ, ಇದಕ್ಕೆ ಸ್ವಲ್ಪ ಕಡಿವಾಣ ಸಾಧ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts