More

    ರಾಮ ಮಂದಿರದಲ್ಲಿ ನಿತ್ಯ 6 ಹೋಮಗಳು: ಪೇಜಾವರ ಶ್ರೀ

    ಉಡುಪಿ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ಬಳಿಕ ಜ.23ರಿಂದ ಮಾ.10ರವರೆಗೆ 48 ದಿನ ಮಂಡಲೋತ್ಸವ ನಡೆಯಲಿದೆ. ಪ್ರತಿನಿತ್ಯ 6 ಹೋಮಗಳು ನೆರರವೇರಲಿವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ವಿಜಯವಾಣಿ ಜತೆ ಮಾತನಾಡಿದ ಅವರು, 20ರಿಂದ 30 ಋತ್ವಿಜರಿಂದ ರಾಮರಕ್ಷಾ ಮಂತ್ರ, ನಾರಾಯಣಾಷ್ಟಾಕ್ಷರ ಮಂತ್ರ ಸಹಿತ ವಿವಿಧ ಹೋಮ-ಹವನಗಳು ನಡೆಯುತ್ತಿವೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮೊದಲಾದ ಕಡೆಗಳಿಂದ ಋತ್ವಿಜರು ಆಗಮಿಸಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಯಜ್ಞ ಶಾಲೆ ನಿರ್ವಿುಸಲಾಗಿದೆ. ಕಲಶಾಭಿಷೇಕದ ಬಳಿಕ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನೆರವೇರಿಸಲಾಗುತ್ತಿದೆ. ಸಾಯಂಕಾಲ 8 ಗಂಟೆಗೆ ರಾತ್ರಿ ಪೂಜೆ ನಡೆಯುತ್ತಿದೆ ಎಂದರು.

    ಅಯೋಧ್ಯೆಯಲ್ಲಿ ತತ್ವನ್ಯಾಸ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಮಂಡಲೋತ್ಸವ ಅಂಗವಾಗಿ ಬುಧವಾರ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ತತ್ವ ಹೋಮ, ರಾಮ ತಾರಕ ಮಂತ್ರಯಜ್ಞ, ಕೂಷ್ಮಾಂಡ ಹೋಮ, ರಾಕ್ಷೋಘ್ನ ಹೋಮ, ರಾಮಾಯಣ, ವೇದ ಪಾರಾಯಣಗಳು ಕಲಶಾರಾಧನೆ ಕಲಶಾಭಿಷೇಕ ಸಹಿತ ಪ್ರಸನ್ನ ಪೂಜೆ ನೆರವೇರಿತು. ವಿವಿಧ ಜಪ ಹೋಮ-ಹವನಾದಿಗಳ ಬಳಿಕ ರಜತ ಕಲಶಗಳನ್ನು ಶ್ರೀರಾಮನ ಅಭಿಷೇಕಕ್ಕಾಗಿ ಮಂದಿರಕ್ಕೆ ವಾದ್ಯಘೋಷಗಳೊಂದಿಗೆ ತರಲಾಯಿತು. ಧರ್ಮಸ್ಥಳದ ವತಿಯಿಂದ ಧರ್ಮಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಶ್ರೀಗಳ ಮೂಲಕ ಸಲ್ಲಿಸಿದ್ದ ಬೆಳ್ಳಿಯ ಪೂಜಾ ಪರಿಕರಗಳನ್ನು ಟ್ರಸ್ಟಿಗೆ ಹಸ್ತಾಂತರಿಸಲಾಯಿತು.

    ಮೈಕ್ ಹಿಡಿದ ಯೋಗಿ…: ಪ್ರಾಣ ಪ್ರತಿಷ್ಠೆಯ ಮರುದಿನ ಅಯೋಧ್ಯೆಗೆ ಸಾಗರ ದೋಪಾದಿಯಲ್ಲಿ ಬಂದ ಭಕ್ತರನ್ನು ನಿಯಂತ್ರಿಸಲು ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೇ ಮುಂದಾಗಿದ್ದು ವಿಶೇಷವಾಗಿದೆ. ಭಕ್ತರು ತಾಳ್ಮೆ ಕಳೆದುಕೊಳ್ಳದೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಯೋಗಿ ಧ್ವನಿವರ್ಧಕದ ಮೂಲಕ ಮನವಿ ಮಾಡಿಕೊಂಡರು. ‘ಬಾಲರಾಮ ಎಲ್ಲರಿಗೂ ದರ್ಶನ ನೀಡುತ್ತಾನೆ’ ಎಂದು ಆಶ್ವಾಸನೆ ನೀಡಿದ ಸಿಎಂ ಯೋಗಿ, ಸುಗಮ ದರ್ಶನಕ್ಕಾಗಿ ಸರ್ಕಾರ, ದೇವಸ್ಥಾನ ಟ್ರಸ್ಟ್ ಮತ್ತು ಆಡಳಿತ ದಣಿವರಿಯದೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.

    ಗರ್ಭ ಗುಡಿಯೊಳಗೆ ವಾನರ!: ಮಂಗಳವಾರ ಸಂಜೆ ಕೋತಿಯೊಂದು ಮಂದಿರದ ಗರ್ಭ ಗುಡಿ ಪ್ರವೇಶಿಸಿದ್ದರಿಂದ ಆತಂಕ ಉಂಟಾಗಿತ್ತು. ಬಾಲಕ ರಾಮನ ಮೂರ್ತಿಗೆ ಹಾನಿ ಮಾಡಬಹುದೆಂಬ ಭೀತಿಯಿಂದ ಭದ್ರತಾ ಸಿಬ್ಬಂದಿ ಕೋತಿಯತ್ತ ತೆರಳಿ ಅದನ್ನು ಹೊರ ಹಾಕಲು ಯತ್ನಿಸಿದರು. ದಕ್ಷಿಣ ದ್ವಾರದಿಂದ ಪ್ರವೇಶಿಸಿದ ಮಂಗ, ಶ್ರೀ ರಾಮನ ಉತ್ಸವ ಮೂರ್ತಿಯತ್ತ ತೆರಳಿತು. ಜನಜಂಗುಳಿ ಹಾಗೂ ಗದ್ದಲದಿಂದ ಒಂದಿಷ್ಟೂ ವಿಚಲಿತವಾಗದ ಕೋತಿ ಗರ್ಭ ಗುಡಿಯೊಳಗೆ ಯಾವುದೇ ತೊಂದರೆ ಮಾಡದೆ ಶಾಂತವಾಗಿ ಹೊರಗೆ ಹೋಯಿತು.

    ಮಾರ್ಚ್​ವರೆಗೆ ಭೇಟಿ ಬೇಡ: ಸಾರ್ವಜನಿಕರಿಗೆ ಅನಾನುಕೂಲ ಆಗುವುದನ್ನು ತಪ್ಪಿಸಲು ಮಾರ್ಚ್ ವರೆಗೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡದಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಚಿವ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ.

    ಬಸ್ ಸೇವೆ ರದ್ದು: ಅಯೋಧ್ಯೆಯಲ್ಲಿ ಜನಜಂಗುಳಿ ಜಾಸ್ತಿಯಾಗಿರುವ ಕಾರಣ ಲಖನೌ ನಿಂದ ಅಲ್ಲಿಗೆ ತೆರಳುವ ಬಸ್​ಗಳ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೆ ಈ ಮಾರ್ಗದಲ್ಲಿ ಬಸ್ ಸಂಚಾರ ಇರುವುದಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ.

    ಮೂರ್ತಿ ವಿಶೇಷತೆ

    • ಅಯೋಧ್ಯೆಯ ನೂತನ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಮಾಡಲಾಗಿರುವ ನೂತನ ಬಾಲರಾಮ ಮೂರ್ತಿಯ ವಿಶೇಷಗಳ ಬಗ್ಗೆ ಕೇಂದ್ರ ಸರ್ಕಾರ ಬುಧವಾರ ಟ್ವೀಟ್ ಮಾಡಿದೆ.
    • ಪ್ರತಿ ರಾಮ ನವಮಿ ದಿನ ಮೂರ್ತಿಯ ಹಣೆಯ ಮೇಲೆ ಸೂರ್ಯನ ಬೆಳಕು ಬೀಳುವಂತೆ ವ್ಯವಸ್ಥೆ. ವಿದ್ಯುತ್, ಬ್ಯಾಟರಿಯ ಅಗತ್ಯವಿಲ್ಲದೆ ಮೂರ್ತಿ ಪ್ರಕಾಶಮಾನ ಆಗುವಂತೆ ನೈಸರ್ಗಿಕ ಬೆಳಕಿನ ಸಂಯೋಜನೆ.
    • ರಾಮ ಲಲ್ಲಾ ಮೂರ್ತಿ ಶ್ರೀ ವಿಷ್ಣುವಿನ ಹತ್ತು ಅವತಾರಗಳಲ್ಲೊಂದು. 2.5 ಶತಕೋಟಿ ವರ್ಷ ಹಳೆಯ ಕಪು್ಪ ಗ್ರಾನೈಟ್ ಶಿಲೆಯಲ್ಲಿ ಕೆತ್ತನೆ.
    • ವಿಷ್ಣುವಿನ ದಶಾವತಾರದ ಪ್ರದರ್ಶನ. ಜತೆಯಲ್ಲಿ ಹನುಮಾನ್ ಮತ್ತು ಗರುಡ.
    • ಹಣೆ ಮೇಲಿನ ತಿಲಕ 3-ಕ್ಯಾರಟ್ ನೈಸರ್ಗಿಕ ವಜ್ರದ್ದಾಗಿದೆ. ಸುತ್ತಲೂ ಚಿಕ್ಕ ಚಿಕ್ಕ ವಜ್ರಗಳಿದ್ದು ಒಟ್ಟು 10 ಕ್ಯಾರೆಟ್ ಆಗುತ್ತದೆ.
    • ಶಿಲ್ಪಕಲೆಯಲ್ಲಿ ಐದು ತಲೆಮಾರಿನ ಕುಟುಂಬದ ಕೆತ್ತನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts