More

    ದಡಾರ ಮತ್ತು ರುಬೆಲ್ಲಾ ಲಸಿಕಾಕರಣ ಯಶಸ್ವಿಗೊಳಿಸಿ: ವೈಶಾಲಿ ಎಂ.ಎಲ್.  

    ಗದಗ:

    ಜಿಲ್ಲಾದ್ಯಂತ ದಡಾರ ಮತ್ತು ರುಬೆಲ್ಲಾ ರೋಗ ಮಕ್ಕಳಿಗೆ ಹರಡದಂತೆ  ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕಾಕರಣ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಗುರುವಾರದಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ  ದಡಾರ ಮತ್ತು ರುಬೆಲ್ಲಾ ರೋಗ  ನಿರ್ಮೂಲನೆ ಕಾರ್ಯಕ್ರಮದ ಕುರಿತು ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಗ್ರಾಮೀಣ ಹಾಗೂ ನಗರ  ಪ್ರದೇಶಗಳಲ್ಲಿ  ದಡಾರ ಮತ್ತು ರುಬೆಲ್ಲಾ  ರೋಗ  ಹರಡದಂತೆ  ತಡೆಗಟ್ಟಲು ಸಮೀಕ್ಷೆ ಕಾರ್ಯ ಹಾಗೂ ಲಸಿಕಾಕರಣ ಚುರುಕುಗೊಳಿಸಬೇಕು. ದಡಾರ ಮತ್ತು ರುಬೆಲ್ಲಾ  ಲಸಿಕೆ ಕೊಡಿಸುವಲ್ಲಿ ಯಾರೂ ಹಿಂಜರಿಯದಂತೆ  ಸಾರ್ವಜನಿಕರಿಗೆ ರೋಗದ  ಹಾಗೂ ಲಸಿಕಾಕರಣ  ಕುರಿತು ತಿಳುವಳಿಕೆ ನೀಡುವ  ಕಾರ್ಯಕ್ರಮ ಕೈಗೊಳ್ಳಬೇಕು.  ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಕೇಂದ್ರಗಳಲ್ಲಿ  5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕಾಕರಣದ ಮಾಹಿತಿ ಪರಿಶೀಲಿಸಿ ಲಸಿಕೆ ಪಡೆಯದೇ ಇರುವ ಮಕ್ಕಳಿಗೆ ಲಸಿಕಾ ಅಭಿಯಾನ ಹಮ್ಮಿಕೊಳ್ಳಬೇಕೆಂದು ಸೂಚಿಸಿದರು. ಪ್ರಸಕ್ತ ವಿಧಾನಸಭೆ ಚುನಾವಣೆಯ ಮತದಾನದ ದಿನದಂದು ಎಲ್ಲ ಮತಗಟ್ಟೆಗಳಲ್ಲಿ ಮತದಾರರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಮುಂಜಾಗ್ರತೆಯಾಗಿ  ಆರೋಗ್ಯ ಇಲಾಖೆಯಿಂದ  ವೈದ್ಯಕೀಯ ಚಿಕಿತ್ಸೆ ಕಿಟ್       ( ಮೆಡಿಕಲ್ ಕಿಟ್ ) ಲಭ್ಯವಿರುವ ಹಾಗೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ ಬಿ, ಮಾತನಾಡಿ ಜಿಲ್ಲೆಯಲ್ಲಿನ ಹೈರಿಸ್ಕ್ ( ಅಪಾಯಕಾರಿ ಪ್ರದೇಶ ) ಹಾಗೂ ಉದ್ಯೋಗದ ನಿಮಿತ್ತ ವಲಸೆ ಹೋಗುವವರ ಹಾಗೂ ವಲಸೆ ಬರುವವರ  ಮಾಹಿತಿ ಸಂಗ್ರಹಿಸಿ ಲಸಿಕೆಯಿಂದ ವಂಚಿತವಾದ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ನೀಡಿ ಶೇ 100 ರಷ್ಟು ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು.    

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಜಗದೀಶ ನುಚ್ಚಿನ ಮಾತನಾಡಿ, ಮಕ್ಕಳ  ಮೈಮೇಲೆ ಕಲೆಗಳು ಅಥವಾ ಗುಳ್ಳೆಗಳು ಕಂಡು ಬಂದಲ್ಲಿ ಮತ್ತು ಮಕ್ಕಳಲ್ಲಿ  ಅತಿಸಾರ ಬೇಧಿ  ಕಂಡುಬಂದಲ್ಲಿ  ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ಚಿಕಿತ್ಸೆ ಪಡೆಯಲು ತಿಳಿಸಲಾಗುತ್ತಿದೆ ಎಂದರು.

    ವಿಶ್ವ ಆರೋಗ್ಯ ಸಂಸ್ಥೆಯ ಡಾ. ಮುಕುಂದ ಗಲಗಲಿ ಮಾತನಾಡಿ, ಲಸಿಕೆಗಳಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ವಿರುದ್ಧ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದಡಿ ಅನೇಕ ಲಸಿಕೆಗಳನ್ನು ನೀಡಲಾಗುತ್ತಿದೆ.  ಕೇಂದ್ರ ಸರ್ಕಾರವು 2023 ರ ಅಂತ್ಯದ ವೇಳೆ ದಡಾರ ಮತ್ತು ರುಬೆಲ್ಲಾ ನಿರ್ಮೂಲನೆಗಾಗಿ ಬದ್ಧವಾಗಿದ್ದು ದಡಾರ ಮತ್ತು ರುಬೆಲ್ಲಾ ನಿರ್ಮೂಲನಾ ಮಾರ್ಗ ನಕ್ಷೆ ಅಡಿಯಲ್ಲಿ ಶಿಫಾರಸ್ಸು ಮಾಡಲಾದ ಚಟುವಟಿಕೆಗಳನ್ನು  ತೀವ್ರಗೊಳಿಸಲು ಶಿಫಾರಸು ಮಾಡಲಾಗಿದೆ. ಅರ್ಹ ಮಕ್ಕಳಿಗೆ  ದಡಾರ ಮತ್ತು ರುಬೆಲ್ಲಾದ ಎರಡು ಡೋಸ್‍ಗಳ ಲಸಿಕಾಕರಣ ಜಿಲ್ಲೆಯಲ್ಲಿ ಶೇ .96 ರಷ್ಟು ಪ್ರಗತಿಯಾಗಿದ್ದು ಇನ್ನೂ ಹೆಚ್ಚಿನ ಪ್ರಗತಿ ಸಾಧಸಬೇಕಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

    ಸಭೆಯಲ್ಲಿ  ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಲ್ಲೇದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟಪ್ಪನವರ, ತಾಲೂಕಾ ಆರೋಗ್ಯಾಧಿಕಾರಿಗಳು, ಕಾರ್ಯಕ್ರಮ ಅನುಷ್ಟಾನಾದಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts