More

    ಮೀನುಗಾರರ ಸಮಸ್ಯೆಗಳಿಗೆ ಧ್ವನಿ, ಮೋಗವೀರರ ಕುಂದುಕೊರತೆ ಆಲಿಸಿ ಡಿ.ಕೆ ಶಿವಕುಮಾರ್ ಭರವಸೆ

    ಮಂಗಳೂರು: ಮೀನುಗಾರರ ಬಹಳಷ್ಟು ಸಮಸ್ಯೆಗಳು ಈಗಾಗಲೆ ಅರಿವಿಗೆ ಬಂದಿದ್ದು, ಅವುಗಳಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಸದನದ ಒಳಗೂ ಹೊರಗೂ ಮೊಗವೀರರ ಧ್ವನಿಯಾಗಿ ಹೋರಾಟ ಮಾಡುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.

    ಸುಲ್ತಾನ್ ಬತ್ತೇರಿಯ ಬೋಳೂರು ಮೊಗವೀರ ಮಹಾಸಭಾ ಸಭಾಭವನದಲ್ಲಿ ಸೋಮವಾರ ಆಯೋಜನೆಗೊಂಡ ಕಾರ್ಯಕ್ರಮ ಹಾಗೂ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಮೀನುಗಾರರ ಬೆಂಬಲವನ್ನೂ ದೊಡ್ಡಮಟ್ಟದಲ್ಲಿ ಪಡೆದು ಬಿಜೆಪಿ ಸರ್ಕಾರ ರಚಿಸಿದೆ. ಆದರೆ ಅವರಿಗೆ ಬೇಕಾದ ಸವಲತ್ತುಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದರು.

    ಈಗಾಗಲೇ ವಿವಿಧ ಮೂಲಗಳಿಂದ ಮಾಹಿತಿ ಪಡೆದಿದ್ದೇನೆ. ಸಂಸದ ಡಿ.ಕೆ.ಸುರೇಶ್ ಈಗಾಗಲೇ ಎರಡು ದಿನ ಮೀನುಗಾರರೊಂದಿಗೆ ಇದ್ದು, ವಿವಿಧ ಸಮಸ್ಯೆಗಳ ಕುರಿತು ಪ್ರತ್ಯಕ್ಷವಾಗಿ ಕಂಡಿದ್ದಾರೆ. ಸಮುದ್ರದ ಜತೆಗಿನ ಬದುಕಿನಲ್ಲಿ ತಮ್ಮ ಜೀವವನ್ನೇ ಒತ್ತೆ ಇಟ್ಟು ಬದುಕುತ್ತಿರುವ ಸಮುದಾಯಕ್ಕೆ ಯಾವ ರೀತಿ ನೆರವಾಗಬಹುದು ಎಂದು ತಿಳಿಯಲು ಸ್ವತಃ ಬಂದಿದ್ದೇನೆ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಆಗ ಮೊಗವೀರರ ವಿವಿಧ ಸಾಲಗಳಿಗೆ ಸರ್ಕಾರವೇ ಗ್ಯಾರಂಟಿ ನೀಡಲಿದೆ. ಈಗ ಸರ್ಕಾರ ನಡೆಸುತ್ತಿರುವವರಿಗೆ ನೋವು ಗೊತ್ತಿಲ್ಲ, ಅದಕ್ಕೆ 2-3 ಸಾವಿರ ರೂ. ಪರಿಹಾರ ನೀಡುತ್ತಿದೆ. ಇಲ್ಲಿನ ಶಾಸಕರೂ ಗೆದ್ದ ಮತ್ತಿನಲ್ಲಿ ಎಲ್ಲರನ್ನೂ ಮರೆತಿದ್ದಾರೆ ಎಂದು ಆರೋಪಿಸಿದರು.

    ಕೇರಳ-ಗೋವಾ ಮಾದರಿಯಲ್ಲಿ ಸಿಆರ್‌ಜಡ್ ಕಾನೂನು ಜಾರಿಗೆ ತರಬೇಕು. ಸಮುದ್ರ ತೀರದಿಂದ 150 ಮೀ. ಬಿಟ್ಟು ಮನೆ ಕಟ್ಟಬೇಕು ಎನ್ನುವುದು ಸರಿಯಲ್ಲ. ಇದನ್ನು 50 ಮೀ.ಗೆ ಇಳಿಸಬೇಕು. ಈ ಎಲ್ಲ ವಿಚಾರವನ್ನು ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲೂ ಸೇರಿಸಲಾಗುವುದು. ಮಲ್ಪೆ, ಕುಂದಾಪುರದಲ್ಲೂ ಮೀನುಗಾರರ ಜತೆಗೆ ಸಭೆ ನಡೆಸಿ, ಸಂಪೂರ್ಣ ವರದಿ ಸಿದ್ಧಪಡಿಸಿ, ಸರ್ಕಾರದ ಗಮನ ಸೆಳೆಯಲಾಗುವುದು. ಮೀನುಗಾರರ ಬದುಕಿನ ಜತೆಗೆ ನಮ್ಮ ಬದುಕು ಇರಲಿದೆ ಎಂದರು. ನಮ್ಮದು ರಾಜಕೀಯ ಕಾರ್ಯಕ್ರಮ ಅಲ್ಲ, ಮೀನುಗಾರರ ಸಮಸ್ಯೆ ಆಲಿಸುವುದಕ್ಕೆ ಬಂದಿದ್ದೇನೆ ಎಂದೂ ತಿಳಿಸಿದರು.

    ಮೀನುಗಾರರ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಮೀನುಗಾರ ಮುಖಂಡರಾದ ರಾಜಶೇಖರ ಕರ್ಕೇರ, ಯಶವಂತ ಮೆಂಡನ್, ದೇವದಾಸ ಬೊಳೂರು, ಸರಳಾ ಕಾಂಚನ್ ಉಪಸ್ಥಿತರಿದ್ದರು. ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವಾ, ಶಕುಂತಳಾ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಮುಖಂಡ ಮಿಥುನ್ ರೈ ಮೊದಲಾದವರು ಭಾಗವಹಿಸಿದ್ದರು.

    ಮೀನುಗಾರ ಪ್ರಮುಖರಾದ ಮೋಹನ್ ಬೆಂಗ್ರೆ, ಎಚ್.ಗಂಗಾಧರ್, ಸುಭಾಷ್ ಕುಂದರ್, ಚೇತನ್ ಬೆಂಗ್ರೆ, ಶರತ್ ಸಾಲ್ಯಾನ್, ಮಹಿಳೆಯರಾದ ಸ್ವರ್ಣಾ, ಸರಿತಾ ಪುತ್ರನ್, ಪ್ರವಿತಾ ತಮ್ಮ ಸಮಸ್ಯೆ ವಿವರಿಸಿದರು.

    ಬೇಡಿಕೆಗಳು ಏನೇನು?: ಜನವರಿಯಿಂದ ಇಲ್ಲಿಯವರೆಗೆ ಬಾಕಿ ಇರುವ ಡೀಸೆಲ್ ಸಬ್ಸಿಡಿ ತಕ್ಷಣ ಜಮಾ ಮಾಡಬೇಕು. ವಾರ್ಷಿಕವಾಗಿ ದೊರೆಯುವ 1.5 ಲಕ್ಷ ಕಿ.ಲೀ. ಡೀಸೆಲನ್ನು 2 ಲಕ್ಷ ಲೀ.ಗೆ ಹೆಚ್ಚಿಸಬೇಕು. ಆಂಧ್ರ ಮಾದರಿಯಲ್ಲಿ ನಿರ್ದಿಷ್ಟ ದರ ನಿಗದಿಪಡಿಸಬೇಕು. ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳಿಗೆ ಹಾಗೂ ಬೋಟ್‌ಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನು ನೀಡುವಲ್ಲಿ ಏಕಗವಾಕ್ಷಿ ಸೇವೆ ಆರಂಭಿಸಬೇಕು. ಸರ್ಕಾರ ಘೋಷಿಸಿದ್ದ ಮೀನುಗಾರ ಮಹಿಳೆಯರ 65 ಕೋಟಿ ರೂ. ಸಾಲಮನ್ನಾ ಇನ್ನೂ ಆಗಿಲ್ಲ. ತಕ್ಷಣ ಮನ್ನಾ ಮಾಡಬೇಕು. 18 ಸಾವಿರ ಮೀನುಗಾರರಿಗೆ ಮಾತ್ರ ಘೋಷಣೆ ಮಾಡಿರುವ ಕರೊನಾ ಸಹಾಯಧನ ಸಿಗುತ್ತಿದ್ದು, ಎಲ್ಲರಿಗೂ ವಿಸ್ತರಿಸಬೇಕು. ಮರೈನ್ ಕಾಲೇಜು ತೆರೆಯಬೇಕು ಮತ್ತು ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಬೇಕು. ಮೊಗವೀರ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಬೇಕು, ಮೀನುಗಾರ ಮಹಿಳೆಯರಿಗೆ ಸುಲಭದಲ್ಲಿ ಸಾಲ ಸಿಗಬೇಕು.

    ಹೂಳುನಲ್ಲಿ ಸಿಲುಕಿದ ಬೋಟ್: ಮೀನುಗಾರ ಮುಖಂಡರ ಜತೆ ಸಭೆ ನಡೆಸಿದ ಶಿವಕುಮಾರ್ ಬಳಿಕ ಬೋಟ್‌ನಲ್ಲಿ ಸುಲ್ತಾನ್ ಬತ್ತೇರಿಯಿಂದ ಅಳಿವೆ ಬಾಗಿಲು ವರೆಗೆ ಸಾಗಿ ಸ್ಥಳ ವೀಕ್ಷಣೆ ಮಾಡಿ ಮಾಹಿತಿ ಪಡೆದರು. ಅಳಿವೆಯಿಂದ ಹಿಂದಕ್ಕೆ ಬರುವಾಗ ಬಂದರಿನಲ್ಲಿ ನದಿಯಲ್ಲಿ ಹೂಳು ಇದ್ದುದರಿಂದ ಶಿವಕುಮಾರ್ ಅವರಿದ್ದ ಬೋಟ್ ಅದರಲ್ಲಿ ಸಿಲುಕಿತು. ಕೆಲಹೊತ್ತು ಬಾಕಿಯಾದ ಬೋಟ್ ಬಳಿಕ ಪ್ರಯಾಸಪಟ್ಟು ಮುಂದಕ್ಕೆ ಹೋಯಿತು. ಅದರ ಹಿಂದೆ ಇದ್ದ ಇನ್ನೊಂದು ಬೋಟ್ ಕೂಡ ಹೂಳಿನಲ್ಲಿ ಸಿಲುಕಿತು.

    ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಯುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಿದೆ. ಮುಂದೆ ಯುವಕರಿಗೆ ಆದ್ಯತೆ ನೀಡುವುದು ನಮ್ಮ ಇಚ್ಛೆಯೂ ಆಗಿದೆ, ನೀವು ಅದನ್ನು ಮುಂದೆ ನೋಡಲಿದ್ದೀರಿ.

    ಡಿ.ಕೆ.ಶಿವಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts