More

    ಬೇರ್ಪಟ್ಟ ಜೋಡೆತ್ತು ಬದಲಾದ ರಾಜಕೀಯ:ರಾಮನಗರದಲ್ಲಿ ಮತ್ತೆ ಕಳೆಗಟ್ಟಿದ ರಾಜಕಾರಣ

    ರಾಮನಗರ: ಲೋಕಸಭೆ ಚುನಾವಣೆಯಲ್ಲಿ ಜೋಡೆತ್ತುಗಳಾಗಿ ಮೆರೆದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜಕೀಯ ಬಂಧುತ್ವದಿಂದ ದೂರ ಸರಿದಿದ್ದಾರೆ.

    ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ಗೊಂಡ ನಂತರವೂ ಆರೋಪ – ಪ್ರತ್ಯಾರೋಪ ಮಾಡುವ ಮಟ್ಟಕ್ಕೆ ರಾಜಕೀಯ ಸಂಬಂಧವನ್ನು ಅವರಿಬ್ಬರೂ ಕಳೆದು ಕೊಂಡಿರಲಿಲ್ಲ. ಆದರೆ ಬಿಡದಿಯಲ್ಲಿ ಎಚ್​ಡಿಕೆ ಅವರು ಡಿಕೆಶಿ ಹೆಸರು ಪ್ರಸ್ತಾಪ ಮಾಡದೆ ವಾಗ್ದಾಳಿ ನಡೆಸಿ ತಮ್ಮ ನಡುವೆ ಏನೂ ಉಳಿದಿಲ್ಲ ಎನ್ನುವುದನ್ನು ಸೂಚ್ಯವಾಗಿ ತಿಳಿಸುವ ಮೂಲಕ ಜೋಡೆತ್ತು ಬೇರ್ಪಟ್ಟಿರುವುದನ್ನು ಜಗಜ್ಜಾಹೀರು ಮಾಡಿದ್ದಾರೆ.

    ಇನ್ನೇನಿದ್ದರೂ ಪ್ರತಿಷ್ಠೆ?: ಇತ್ತೀಚಿನವರೆಗೂ ರಾಜ್ಯ ರಾಜಕಾರಣ ಏನೆಲ್ಲ ಬದಲಾವಣೆಗಳನ್ನು ಕಾಣುತ್ತಿದ್ದರೂ ಡಿಕೆಶಿ ಮತ್ತು ಎಚ್​ಡಿಕೆ ಪರಸ್ಪರ ನಿಂದಿಸುವ ಮಟ್ಟಕ್ಕೆ ಇಳಿದಿರಲಿಲ್ಲ. ಇದು ಜಿಲ್ಲೆಯ ರಾಜಕಾರಣದ ಮೇಲೂ ಪರಿಣಾಮ ಬೀರಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ತಮ್ಮ ಜಿದ್ದನ್ನು ಬದಿಗಿಟ್ಟು ನಾಯಕರ ಹಿತ ಕಾಯುತ್ತಿದ್ದರು. ಇದೀಗ ಇಬ್ಬರೂ ನಾಯಕರು ಮಾತಿನ ಸಮರಕ್ಕೆ ಇಳಿದಿರುವುದು ಉಭಯ ಪಕ್ಷಗಳ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದೆ. ಒಂದೆಡೆ ಎಚ್​ಡಿಕೆ ತಾವೇ ಖುದ್ದು ಗ್ರಾಪಂನಿಂದ ವಿಧಾನಸಭೆ ಚುನಾವಣೆವರೆಗೂ ಉಸ್ತುವಾರಿ ವಹಿಸಿಕೊಳ್ಳುತ್ತೇನೆ ಎಂದಿರುವುದು ಜೆಡಿಎಸ್ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಕಳೆದ ಎರಡು ವರ್ಷಗಳಿಂದಲೂ ತಮ್ಮ ನಾಯಕರಿಗಾಗಿ ಬದಿಗಿಟ್ಟಿದ್ದ ಪ್ರತಿಷ್ಠೆಯನ್ನು ಮರಳಿ ಪಡೆಯಲು ಕಾರ್ಯಕರ್ತರ ಪಡೆ ಸಜ್ಜಾಗಿದೆ.

    ಡಿಕೆಶಿಗೆ ಪ್ರಾಬಲ್ಯ ಸಾಧಿಸಬೇಕು: ಒಂದೆಡೆ ಎಚ್​ಡಿಕೆ ಏಕಾಏಕಿ ರಾಮನಗರ ರಾಜಕಾರಣದಲ್ಲಿ ಸಕ್ರಿಯವಾಗಿರುವುದು ಶಿವಕುಮಾರ್ ಅವರಿಗೂ ಬಿಸಿತುಪ್ಪವಾಗಿದೆ. ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಶಿವಕುಮಾರ್ ಅವರಿಗೆ ಪ್ರತಿ ಕ್ಷೇತ್ರದ ಗೆಲುವೂ ಮುಖ್ಯ. ಅದರಲ್ಲೂ ತವರು ಜಿಲ್ಲೆಯಲ್ಲಿ ಕನಿಷ್ಠ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ತಾವೊಬ್ಬ ಪವರ್​ಫುಲ್ ನಾಯಕ ಎನ್ನುವುದನ್ನು ಸಾಬೀತು ಮಾಡಬೇಕಿದೆ. ಆದರೆ, ಎಚ್​ಡಿಕೆ ಉತ್ಸಾಹ ಡಿಕೆಶಿ ಆಸೆಗೆ ತಣ್ಣೀರೆರಚಬಹುದು. ಕನಕಪುರ ಹೊರತುಪಡಿಸಿ ಉಳಿದ ಮೂರು ಕ್ಷೇತ್ರಗಳಲ್ಲಿ ಜೆೆಡಿಎಸ್ ಪ್ರಾಬಲ್ಯವಿದೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಪವರ್ ಸಹ ಕಡಿಮೆ ಇಲ್ಲ. ಈಗ ಇಬ್ಬರ ನಡುವೆ ಡಿಕೆಶಿ ತಮ್ಮ ಶಕ್ತಿಯನ್ನು ಸಾಬೀತು ಮಾಡಬೇಕಾದ ಅನಿವಾರ್ಯತೆ ಇದ್ದು, ಇದಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ಉತ್ತರ ನೀಡಲಿದೆ.

    ಪರಿಷತ್ ಮೇಲೂ ಕಣ್ಣು

    ಇದರ ನಡುವೆ ಎಚ್​ಡಿಕೆ ವಿಧಾನಪರಿಷತ್ ಚುನಾವಣೆ ಮೇಲೆ ಕಣ್ಣಿಟ್ಟಿದ್ದು ಪಕ್ಷದ ಅಭ್ಯರ್ಥಿ ಎ.ಪಿ.ರಂಗನಾಥ್ ಪರವಾಗಿ ಚುನಾವಣೆ ನಡೆಸುವಂತೆಯೂ ಕಾರ್ಯಕರ್ತರು ಮತ್ತು ಮುಖಂಡರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಒಂದು ಕಾಲದಲ್ಲಿ ತಮ್ಮ ಆಪ್ತರಾಗಿದ್ದ ಈಗಿನ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಅವರನ್ನು ಪರಾಭವಗೊಳಿಸಲು ಪಕ್ಷದ ಆಡಳಿತದ ಅವಧಿಯಲ್ಲಿ ಶಿಕ್ಷಕ ಸಮುದಾಯಕ್ಕಾಗಿ ಕೈಗೊಂಡ ಸಾಧನೆಗಳನ್ನು ಮತದಾರರಿಗೆ ತಲುಪಿಸಿ ಮತ ಯಾಚನೆ ಮಾಡುವಂತೆಯೂ ನಿರ್ದೇಶನ ನೀಡಿದ್ದಾರೆ.

    ಕಾರ್ಯಕರ್ತರ ಸಮಾಧಾನ

    ಕಾರ್ಯದೊತ್ತಡ, ಕರೊನಾ… ಹೀಗೆ ನಾನಾ ಕಾರಣಗಳಿಂದ ತಮ್ಮ ಬಳಿ ಬಂದಾಗ ಸರಿಯಾಗಿ ಸ್ಪಂದಿಸದಿದ್ದರಿಂದ ಬೇಸರಗೊಂಡಿದ್ದ ಕಾರ್ಯಕರ್ತರನ್ನು ಕಳೆದ ಮೂರು ದಿನಗಳಿಂದ ಎಚ್​ಡಿಕೆ ಸಮಾಧಾನ ಪಡಿಸುತ್ತಿದ್ದಾರೆ. ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯ ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದು, ಅವರ ಸಮಸ್ಯೆಗಳನ್ನು ಅರಿಯುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಏನೂ ಮಾಡಲು ಆಗಲಿಲ್ಲ ಎನ್ನುವ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟುವ ಮೂಲಕ ಮತ್ತೆ ಅಧಿಕಾರ ಹಿಡಿಯುವ ಮಾತುಗಳನ್ನು ಆಡಿ ಕಾರ್ಯಕರ್ತರನ್ನು ಟ್ರ್ಯಾಕ್​ಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

    ಗಂಗಾಧರ್ ಬೈರಾಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts