More

    ಹಂಪಿಯಲ್ಲಿ ಸಿಲಿಂಡರ್ ಸ್ಫೋಟ: ಹೋಟೆಲ್ ಸೇರಿ ೩ ಗುಡಿಸಲು ಭಸ್ಮ

    ಹೊಸಪೇಟೆ: ಇಲ್ಲಿನ ಐತಿಹಾಸಿಕ ಹಂಪಿಯಲ್ಲಿ ಗುರುವಾರ ತಡ ರಾತ್ರಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡು ಮ್ಯಾಂಗೋ ಟ್ರೀ ಹೋಟೆಲ್ ಸೇರಿದಂತೆ ಮೂರು ಗುಡಿಸಲು ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
    ಇಲ್ಲಿನ ವಿರೂಪಾಕ್ಷೇಶ್ವರ ದೇವಸ್ಥಾನ ಸಮೀಪದ ಜನತಾ ಪ್ಲಾಟ್ ನಲ್ಲಿರುವ ರಾತ್ರಿ ೧೧.೩೦ರ ಸುಮಾರಿಗೆ ಬಟ್ಟೆ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಅನ್ನಪೂರ್ಣೇಶ್ವರಿ ಛತ್ರ, ಮ್ಯಾಂಗೋ ಟ್ರೀ ಹೋಟೆಲ್‌ಗೆ ವ್ಯಾಪಿಸಿದ್ದು, ಗುಡಿಸಲುಗಳು ಸಂಪೂರ್ಣ ಸುಟ್ಟು ಹೋಗಿವೆ.
    ಬಳಿಕ ಹೋಟೆಲ್‌ನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಅದರಿಂದ ಹೊರಹೊಮ್ಮಿದ ಭಾರೀ ಶಬ್ಧದಿಂದ ಹಂಪಿ ಜನರು ಬೆಚ್ಚಿಬಿದ್ದರು. ಮುಗಿಲೆತ್ತರಕ್ಕೆ ಬೆಂಕಿ ಧಗಧಗನೆ ಹೊತ್ತಿ ಉರಿಯುತ್ತಿತ್ತು. ಹೀಗಾಗಿ ಜನರು ಆತಂಕದಿಂದಲೇ ಸ್ಥಳಕ್ಕೆ ದಾವಿಸಿದರು. ಬಳಿಕ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸಲು ಹರಸಾಹಸ ನಡೆಸಿದರು. ಬೆಂಕಿ ನಿಯಂತ್ರಣಕ್ಕೆ ಬರುತ್ತಿದ್ದಂತೆ ಹೋಟೆಲ್‌ನಲ್ಲಿದ್ದ ನಾಲ್ಕು ಸಿಲಿಂಡರ್‌ಗಳನ್ನು ಸುರಕ್ಷಿತವಾಗಿ ಬಯಲಿಗೆ ಸ್ಥಳಾಂತರಿಸಲಾಯಿತು.
    ಇದಕ್ಕೂ ಮುನ್ನ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಮ್ಯಾಂಗೋ ಟ್ರೀ ಹೋಟೆಲ್‌ನಲ್ಲಿದ್ದ ನಾಲ್ವರು ಕಾರ್ಮಿಕರು ತಕ್ಷಣ ಹೊರಗೆ ಓಡಿ ಬಂದಿದ್ದಾರೆ. ಇದರಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನಕರ ಸಂಗತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts