More

    ಸೈಕ್ಲಿಂಗ್ ಚಾಂಪಿಯನ್​ಶಿಪ್ ಸ್ಪರ್ಧೆ ಇಂದಿನಿಂದ

    ಗದಗ: 17ನೇ ರಾಷ್ಟ್ರೀಯ ಮೌಂಟೇನ್ ಬೈಕ್ ಸೀನಿಯರ್, ಜೂನಿಯರ್ ಮತ್ತು ಸಬ್ ಜೂನಿಯರ್ ಸೈಕ್ಲಿಂಗ್ ಚಾಂಪಿಯನ್​ಶಿಪ್ ಸ್ಪರ್ಧೆ ತಾಲೂಕಿನ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಗುರುವಾರ ಆರಂಭವಾಗಲಿವೆ.

    ಫೆ. 21ರವರೆಗೆ ನಡೆಯಲಿರುವ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 435 ಸೈಕ್ಲಿಸ್ಟ್​ಗಳು ಭಾಗವಹಿಸಲಿದ್ದಾರೆ. ಗದಗ ಜಿಲ್ಲೆಯ 7 ಸೇರಿ 34 ಸ್ಪರ್ಧಿಗಳು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಸ್ಪರ್ಧೆಗೆ ಸಂಬಂಧಿಸಿದಂತೆ ಈಗಾಗಲೇ ರೈಡ್ ಸೈಕಲ್ ಸ್ಟೇ ಹೆಲ್ದಿ ಎಂಬ ಪರಿಸರ ಹಾಗೂ ಆರೋಗ್ಯ ಸಂದೇಶವುಳ್ಳ ಲಾಂಛನವನ್ನು (ಲೋಗೋ) ಲೋಕಾರ್ಪಣೆಗೊಳಿಸಲಾಗಿದೆ.

    ಫೆ. 18ರಂದು ಬೆಳಗ್ಗೆ 8 ಗಂಟೆಗೆ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೈಕಲ್ ಜಾಥಾ ಆರಂಭವಾಗಿ ಅಸುಂಡಿಯ ಕುವೆಂಪು ಮಾದರಿ ಶಾಲೆಯಲ್ಲಿ ಮುಕ್ತಾಯಗೊಳ್ಳಲಿದೆ. ಸಂಜೆ 5 ಗಂಟೆಗೆ ನಗರದ ಕಳಸಾಪುರ ರಸ್ತೆಯ ಒಳಕ್ರೀಡಾಂಣಗದಲ್ಲಿ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ. ಫೆ. 19ರಿಂದ 21ರವರೆಗೆ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಬಿಂಕದಕಟ್ಟೆ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಸೈಕ್ಲಿಂಗ್ ಸ್ಪರ್ಧೆಗಳು ನಡೆಯಲಿವೆ.

    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಸಾಂಖ್ಯಿಕ ಸಚಿವ ಕೆ.ಸಿ. ನಾರಾಯಣಗೌಡ ಉದ್ಘಾಟಿಸುವರು. ಶಾಸಕ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ, ಸಂಸದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ ಮಾನೆ, ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್, ರಾಜ್ಯ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ವಿ. ಪುರುಷೋತ್ತಮ, ವಿಶೇಷ ಆಹ್ವಾನಿತರಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಪಿ.ಎನ್. ರವೀಂದ್ರ, ಜಿಲ್ಲಾಧಿಕಾರಿ ಸುಂದರೇಶಬಾಬು, ಏಷಿಯನ್ ಸೈಕ್ಲಿಂಗ್ ಫೆಡರೇಷನ್ ಸೆಕ್ರೆಟರಿ ಓಂಕಾರ ಸಿಂಗ್, ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಸೆಕ್ರೆಟರಿ ಜನರಲ್ ಮನಿಂದರಪಾಲ್ ಸಿಂಗ್ ಭಾಗವಹಿಸುವರು.

    ರಾಜ್ಯ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷ ಶ್ರೀಧರ ಗೋರೆ, ಸಂಸ್ಥೆಯ ಉಪಾಧ್ಯಕ್ಷರಾದ ಚನ್ನಪ್ಪ ಜಗಲಿ, ಜಿ.ವಿ. ಪಾಟೀಲ, ಗೌರವ ಕಾರ್ಯದರ್ಶಿ ಎಸ್.ಎಂ. ಕುರಣಿ, ಜಿಲ್ಲಾ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷ ರವಿಕುಮಾರ ಮರಲಿಂಗಣ್ಣವರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಬಿ. ವಿಶ್ವನಾಥ ಉಪಸ್ಥಿತರಿರುವರು.

    ಊಟದ ಮೆನು: ಸೈಕ್ಲಿಸ್ಟ್​ಗಳಿಗೆ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟದ ಮೆನು ಸಿದ್ಧಪಡಿಸಲಾಗುತ್ತಿದೆ. ನಾಲ್ಕು ದಿನಗಳ ಕಾಲ ನಿತ್ಯ ಬಗೆಬಗೆಯ ಉಪಾಹಾರ, ಊಟವನ್ನು ನೀಡಲಾಗುತ್ತಿದೆ. ಬೆಳಗ್ಗೆ 8ಕ್ಕೆ ಉಪಾಹಾರಕ್ಕೆ ಶಿರಾ, ಉಪ್ಪಿಟ್ಟು, ಕಾಫಿ, ಇಡ್ಲಿ, ವಡಾ, ಹಾಲು, ಅವಲಕ್ಕಿ, ಆಮ್ಲೇಟ್, ಬ್ರೆಡ್, ಜಾಮ್ ಮೊಟ್ಟೆ, ಫ್ರೂಟ್ ಸಲಾಡ್. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಚಪಾತಿ, ರೊಟ್ಟಿ, ಪಲ್ಯ, ಅನ್ನ, ಸಾಂಬಾರ, ಹಪ್ಪಳ, ಉಪ್ಪಿನಕಾಯಿ, ಚಟ್ನಿ, ಬಾಳೆಹಣ್ಣು, ಕುರ್ವ, ಬಾಜಿ, ಶೇಂಗಾ ಹೋಳಿಗೆ, ಹೂರಣದ ಹೋಳಿಗೆ, ಮೊಟ್ಟೆ, ಎಗ್ ಕರಿ, ಮಜ್ಜಿಗೆ, ಎಣ್ಣೆ ಹೋಳಿಗೆ, ಆಮ್ಲೇಟ್ ನೀಡಲಾಗುತ್ತಿದೆ.

    ವಸತಿ ಸೌಲಭ್ಯ: ದೇಶದ ವಿವಿಧೆಡೆಯಿಂದ ಆಗಮಿಸುವ ಸೈಕ್ಲಿಸ್ಟ್​ಗಳಿಗೆ ನಗರದ ಐದು ವಸತಿ ನಿಲಯಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ನಗರದ ಸಿಡಿಒ ಜೈನ್ ಶಾಲೆ ಬಳಿ ಇರುವ ಬಿಸಿಎಂ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ 100 ಸ್ಪರ್ಧಿಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ 120 ಸ್ಪರ್ಧಿಗಳಿಗೆ (ಬಾಲಕಿಯರು) ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಮಲ್ಲಸಮುದ್ರ ಅಲ್ಪಸಂಖ್ಯಾತರ ಇಲಾಖೆಯ ಮುರಾರ್ಜಿ ಬಾಲಕರ ವಸತಿ ಶಾಲೆಯಲ್ಲಿ 150, ಬಾಲಕಿಯರ ವಸತಿ ಶಾಲೆಯಲ್ಲಿ 150 ಹಾಗೂ ಪಿಯು ಕಾಲೇಜ್ ವಸತಿ ಶಾಲೆಯಲ್ಲಿ 150 ಸ್ಪರ್ಧಿಗಳಿಗೆ (ಬಾಲಕರು) ವಸತಿ ಸೌಲಭ್ಯ ಕಲ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts