More

    ಇನ್ನೂ ಬಾರದ ಸೈಕಲ್: ಕಾಯುತ್ತಿದ್ದಾರೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳು

    ಗಂಗಾಧರ್ ಬೈರಾಪಟ್ಟಣ

    ರಾಮನಗರ: ಕರೊನಾ ಭಯದಿಂದಾಗಿ ಶಾಲೆಗಳ ಪುನರಾರಂಭದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಇದರ ನಡುವೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿದ್ಯಾಗಮದ ಮೂಲಕ ಪಾಠ ಆರಂಭಿಸಲಾಗಿದ್ದು, ಅಧಿಕೃತವಾಗಷ್ಟೇ ಶಾಲೆಗಳು ಬಾಗಿಲು ತೆರೆಯಬೇಕಿದೆ. ಆದರೆ, ಇದರ ನಡುವೆಯೇ ಬೈಸಿಕಲ್ ವಿತರಣೆ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆಯೂ ಈಗ ಪಾಲಕರು ಮತ್ತು ಶಿಕ್ಷಕ ವೃಂದದಲ್ಲಿ ಮೂಡಿದೆ. ಪ್ರತಿವರ್ಷ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ ಮಾಡಲಾಗುತ್ತಿದ್ದು, ಈ ವರ್ಷ ಕರೊನಾ ಹಿನ್ನೆಲೆಯಲ್ಲಿ ಬೈಸಿಕಲ್ ವಿತರಣೆಗೆ ಇನ್ನೂ ಚಾಲನೆ ದೊರೆತಿಲ್ಲ.

    ಸೈಕಲ್ ಕೊಡಿ ಎಂದ ಸಿಎಂ: ಮೇ ತಿಂಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಯಾವುದೇ ಕಾರಣಕ್ಕೂ ಮಕ್ಕಳಿಗೆ ಸೈಕಲ್ ವಿತರಣೆ ಯೋಜನೆಗೆ ತೊಡಕಾಗಬಾರದು. ಕರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಾದರೂ ಮಕ್ಕಳಿಗೆ ಸೈಕಲ್ ವಿತರಣೆ ನಿಲ್ಲಬಾರದು ಎಂದಿದ್ದರು. ಆದರೆ ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸಿದ್ಧತೆಯ ಲಕ್ಷಣಗಳೇ ಕಾಣುತ್ತಿಲ್ಲ. ಈಗಾಗಲೇ ವಿದ್ಯಾಗಮ ಆರಂಭಗೊಂಡು ಮಕ್ಕಳ ಮನೆಗಳ ಬಳಿಗೆ ಶಿಕ್ಷಕರು ತೆರಳಿ ಪಾಠ ಮಾಡುತ್ತಿದ್ದಾರೆ. ಸೆ.30ಕ್ಕೆ ಶಾಲೆಗಳ ಪ್ರವೇಶಾತಿಯೂ ಮುಕ್ತಾಯಗೊಂಡಿದ್ದು, ಖಾಸಗಿ ಶಾಲೆಗಳ ಸಾವಿರಾರು ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರಿದ್ದಾರೆ. ಇವರೆಲ್ಲರಿಗೂ ಸೈಕಲ್ ವಿತರಣೆ ಮಾಡಬೇಕಾದ ಇಲಾಖೆ ಈ ಬಗ್ಗೆ ಇನ್ನೂ ಗಮನಹರಿಸದಿರುವುದು ಸರ್ಕಾರ ಈ ಬಾರಿ ಸೈಕಲ್ ನೀಡುತ್ತದೆಯೇ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ.

    ಸಮವಸ್ತ್ರ ವಿತರಣೆಗೆ ಚಾಲನೆ: ಕರೊನಾ ಸಂಕಷ್ಟದ ನಡುವೆಯೇ ಶಾಲೆ ಪುನರಾರಂಭದ ಗೊಂದಲದ ನಡುವೆ ಸರ್ಕಾರಿ ಶಾಲೆ ಮಕ್ಕಳಿಗೆ ಈಗಾಗಲೇ ಸಮವಸ್ತ್ರ ವಿತರಣೆ ಮಾಡುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಜತೆಗೆ ಪಠ್ಯಪುಸ್ತಕ ವಿತರಣೆ ಕಾರ್ಯವೂ ನಡೆಯುತ್ತಿದೆ. ಜಿಲ್ಲೆಯಲ್ಲಿಯೂ ಸಮವಸ್ತ್ರ ವಿತರಣೆ ನಡೆಯುತ್ತಿದ್ದು, ಬೈಸಿಕಲ್ ವಿತರಣೆಗಾಗಿ ಮಾಹಿತಿ ಸಂಗ್ರಹಿಸುವ ಗೋಜಿಗೆ ಮಾತ್ರ ಹೋಗಿಲ್ಲ.

    ವಿತರಣೆ ವಿಳಂಬ ಸಾಧ್ಯತೆ

    ಸೆ.30ಕ್ಕೆ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಆಂದೋಲನ ಪೂರ್ಣಗೊಂಡಿದೆ. ಈಗಷ್ಟೇ ಶಾಲೆಗಳಿಗೆ ಎಷ್ಟು ಮಕ್ಕಳು ದಾಖಲಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸೈಕಲ್ ನೀಡಿಕೆ ವಿಳಂಬವಾಗಬಹುದು. ಆದರೆ ಸರ್ಕಾರ ಸೈಕಲ್ ವಿತರಣೆಯಿಂದ ಹಿಂದೆ ಸರಿಯುವ ಸಾಧ್ಯತೆ ತೀರಾ ಕಡಿಮೆ ಎನ್ನುತ್ತವೆ ಶಿಕ್ಷಣ ಇಲಾಖೆ ಮೂಲಗಳು.

    ಪ್ರತಿವರ್ಷ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲಾಗುತ್ತಿತ್ತು. ಇದರಿಂದ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುತ್ತಿತ್ತು. ಈ ಬಾರಿ ಸೈಕಲ್ ವಿತರಣೆ ಬಗ್ಗೆ ಮಾಹಿತಿ ಇಲ್ಲ. ಆದರೂ ಸರ್ಕಾರ ತಪ್ಪದೇ ಮಕ್ಕಳಿಗೆ ಸೈಕಲ್ ನೀಡಲಿ.

    | ಚಂದ್ರಶೇಖರ್ ಎಸ್​ಡಿಎಂಸಿ ಮಾಜಿ ಅಧ್ಯಕ್ಷ, ಹರೀಸಂದ್ರ

    ಪ್ರತಿವರ್ಷ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲಾಗುತ್ತಿತ್ತು. ಈ ಬಾರಿ ಸರ್ಕಾರದಿಂದ ಯಾವುದೇ ನಿರ್ದೇಶನ ಮತ್ತು ಸೂಚನೆ ಬಂದಿಲ್ಲ.

    | ಸೋಮಶೇಖರಯ್ಯ ಡಿಡಿಪಿಐ ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts