More

    ಮಂಗಳೂರಿನಲ್ಲಿ ಸೈಕಲ್ ಸವಾರಿಗಾಗಿ ಪ್ರತ್ಯೇಕ ಲೇನ್

    ಮಂಗಳೂರು: ನಗರದೊಳಗೆ ಪ್ರಸಕ್ತ ಕಾರು, ದ್ವಿಚಕ್ರ ವಾಹನಗಳ ಜಂಜಾಟದಲ್ಲಿ ಸೈಕಲ್ ಓಡಿಸುವುದು ಕಷ್ಟ. ಪರಿಸ್ಥಿತಿ ಹೀಗಿರುವಾಗ ಸೈಕಲ್ ಸವಾರಿಗೆ ಪ್ರತ್ಯೇಕ ಲೇನ್(ಓಣಿ) ಇದ್ದರೆ ಹೇಗಿರುತ್ತದೆ?

    ಇಂಥದ್ದೊಂದು ಇಕೋ ಫ್ರೆಂಡ್ಲಿ ಸೈಕಲ್ ಸವಾರಿ ಉತ್ತೇಜಿಸುವ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸುವ ಆರಂಭಿಕ ಪ್ರಕ್ರಿಯೆಗಳಿಗೆ ಚಾಲನೆ ದೊರೆತಿದೆ. ಇದು ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಜವಾಬ್ದಾರಿಯುತ ನಾಗರಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಆನ್‌ಲೈನ್ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕಿದೆ. ಜನರ ಸ್ಪಂದನೆಯನ್ನು ಆಧರಿಸಿ ಯೋಜನೆ ಜಾರಿಯಾಗಲಿದೆ.

    ಏನಿದು ಸೈಕಲ್ ಲೇನ್?: ಸೈಕಲ್4ಚೇಂಜ್ ಎನ್ನುವ ಅಭಿಯಾನದಡಿ ಪ್ರತಿ ನಗರವನ್ನೂ ಸೈಕಲ್‌ಸ್ನೇಹಿಯಾಗಿಸುವುದು, ಅದಕ್ಕಾಗಿ ಸೈಕಲ್ ಸವಾರಿಯನ್ನು ಉತ್ತೇಜಿಸುವ ಪ್ರಯತ್ನಕ್ಕೆ ಮಂಗಳೂರು ಮಹಾನಗರಪಾಲಿಕೆ, ಜಿಲ್ಲಾಡಳಿತ, ಮಂಗಳೂರು ಸ್ಮಾರ್ಟ್ ಸಿಟಿ ಕೈ ಹಾಕಿದೆ. ಇದಕ್ಕೆ ಈಗಾಗಲೇ ಪ್ರತ್ಯೇಕ ಸೈಕಲ್ ಲೇನ್ ಗುರುತಿಸಲಾಗಿದೆ. ಆದರೆ ಇದಕ್ಕೆ ಪೂರಕವಾಗಿ ನಾಗರಿಕರ ಸ್ಪಂದನೆ ತೀರಾ ಅಗತ್ಯವಾಗಿದ್ದು, ಆನ್‌ಲೈನ್ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಮೂಲಕ ಹೆಚ್ಚಿನ ಸ್ಪಂದನೆ ಬೇಕಾಗಿದೆ.

    ನಗರದ ಯಾವ ಪ್ರದೇಶದಲ್ಲಿ ಸೈಕಲ್ ಟ್ರಾೃಕ್ ಮಾಡಬಹುದು? ಯಾವ ಪ್ರದೇಶ ಟ್ರಾೃಕ್ ನಿರ್ಮಾಣಕ್ಕೆ ಯೋಗ್ಯ ಎಂಬುದನ್ನು ಪರಾಮರ್ಶಿಸಿ ನಕ್ಷೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು. ಮಂಗಳೂರು ಸ್ಮಾರ್ಟ್‌ಸಿಟಿಯಿಂದ ಈಗಾಗಲೇ ಸರ್ವೇ ಆರಂಭಿಸಲಾಗಿದೆ. ಸಾರ್ವಜನಿಕರು ವೆಬ್ ಲಿಂಕ್ ಕ್ಲಿಕ್ ಮಾಡಿ ಕೇಳಿದ ಪ್ರಶ್ನೆಗಳಿಗೆ ತಮ್ಮ ಆಯ್ಕೆಯ ಉತ್ತರ ನೀಡಬಹುದಾಗಿದೆ.

    ಮಂಗಳೂರು ಸೈಕಲ್ ಸರ್ವೇ ಲಿಂಕ್: https://forms.gle/nxaUxqFAGi1uDWui9


    ಎರಡು ತಿಂಗಳಲ್ಲಿ ಅಂತಿಮ ರೂಪುರೇಷೆ: ಇದೇ ವರ್ಷದ ಡಿಸೆಂಬರ್ ಮೊದಲು ಮಂಗಳೂರಿನಲ್ಲಿ ಸೈಕಲ್ ಓಣಿಯನ್ನು ಅಂತಿಮಗೊಳಿಸುವ ಉದ್ದೇಶವಿದೆ ಎಂದು ಮನಪಾ ಆಯುಕ್ತ ಅಕ್ಷಿ ಶ್ರೀಧರ್ ತಿಳಿಸಿದ್ದಾರೆ. ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಆಯುಕ್ತ ಶ್ರೀಧರ್, ವೀಆರ್ ಸೈಕ್ಲಿಂಗ್ ಕ್ಲಬ್ ಸದಸ್ಯರಾದಿಯಾಗಿ ಕೆಲದಿನಗಳ ಹಿಂದೆ ಸೈಕಲ್‌ಗಳಲ್ಲೇ ಸರ್ವೇ ಕೈಗೊಂಡಿದ್ದಾರೆ. ಅಧಿಕಾರಿಗಳು ಸೋಮವಾರ ಬೆಳಗ್ಗೆ ನಗರದಲ್ಲಿ ಸ್ವತಃ ಸೈಕಲ್ ಸವಾರಿ ನಡೆಸಿ ಪಥ ಪರಿಶೀಲಿಸಿದರು. ಕೇಂದ್ರ ಸರ್ಕಾರದ ನಗರ ಭೂ ಸಾರಿಗೆ ನಿರ್ದೇಶನಾಲಯ(ಡಿಯುಎಲ್‌ಟಿ) ಸೈಕಲ್4ಚೇಂಜ್ ಎನ್ನುವ ಚಾಲೆಂಜ್ ಆಯೋಜನೆ ಮಾಡಿದ್ದು, ಅಕ್ಟೋಬರ್‌ನಲ್ಲಿ ಈ ಸ್ಪರ್ಧೆ ಪೂರ್ಣಗೊಳ್ಳಲಿದೆ. ಇದರಲ್ಲಿ ಆಯ್ಕೆಯಾಗುವ ಸ್ಮಾರ್ಟ್‌ಸಿಟಿಗೆ ಒಂದು ಕೋಟಿ ರೂ. ಬಹುಮಾನ ಸಿಗಲಿದೆ. ಆ ಹಣವನ್ನು ಸ್ಮಾರ್ಟ್‌ಸಿಟಿ ತಮ್ಮ ನಗರದಲ್ಲಿ ಸೈಕಲ್ ಟ್ರಾೃಕ್ ನಿರ್ಮಾಣ ಮಾಡಲು ವಿನಿಯೋಗಿಸಬಹುದಾಗಿದೆ.

    ಮಂಗಳೂರನ್ನು ಸೈಕ್ಲಿಂಗ್ ಸ್ನೇಹಿ ನಗರವಾಗಿಸುವ ನಿಟ್ಟಿನಲ್ಲಿ ಆನ್‌ಲೈನ್ ಸರ್ವೇಯಲ್ಲಿ ಎಲ್ಲರೂ ಭಾಗವಹಿಸಬೇಕು. ಆದಷ್ಟೂ ನಾಗರಿಕರು, ಅದರಲ್ಲೂ ಶಾಲೆಗೆ ಸೈಕಲ್‌ಗಳಲ್ಲಿ ಹೋಗಬಯಸುವ ವಿದ್ಯಾರ್ಥಿಗಳ ಹೆತ್ತವರು ಮುಂದಾಗಿ ಸಮೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ನಗರದಲ್ಲಿ ಸೈಕಲ್ ಲೇನ್ ಸಾಕಾರಗೊಳ್ಳುವ ಮಂಗಳೂರಿನ ಕನಸು ನನಸಾಗಿಸಲು ಸಹಕರಿಸಬೇಕು.
    – ವೇದವ್ಯಾಸ ಕಾಮತ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts