More

    ಅಮೆರಿಕಕ್ಕೆ ಸೈಬರ್ ಶಾಕ್! ವಿಶ್ವಕ್ಕೇ ಎಚ್ಚರಿಕೆ ಗಂಟೆ

    ವಾಷಿಂಗ್ಟನ್: ಭಯೋತ್ಪಾದಕರ ಆತಂಕ, ಕರೊನಾ ಕಾಟದ ಜಂಜಾಟದಲ್ಲೇ ಹೈರಾಣಾಗಿರುವ ಅಮೆರಿಕಕ್ಕೆ ಸೈಬರ್ ಶಾಕ್ ತಟ್ಟಿದೆ. ಅತ್ಯುತ್ತಮ ತಂತ್ರಜ್ಞಾನ, ಯುದ್ಧ ಸಾಮರ್ಥ್ಯದಲ್ಲಿ ವಿಶ್ವದಲ್ಲೇ ಅಗ್ರಗಣ್ಯವಾಗಿರುವ ನಂ.1 ಶ್ರೀಮಂತ ರಾಷ್ಟ್ರದ ಭದ್ರತಾ ವ್ಯವಸ್ಥೆಯನ್ನೇ ಭೇದಿಸಿರುವ ಹ್ಯಾಕರ್​ಗಳು 1.50 ಲಕ್ಷ ಭದ್ರತಾ ಕ್ಯಾಮರಾಗಳನ್ನು ಹ್ಯಾಕ್ ಮಾಡಿರುವ ಆತಂಕಕಾರಿ ಸಂಗತಿ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ.

    ಹ್ಯಾಕರ್​ಗಳು ಹ್ಯಾಕ್ ಮಾಡಿರುವುದು ನಿಜವಾದರೂ ದತ್ತಾಂಶಗಳಿಗೆ ಕನ್ನ ಹಾಕಿರುವ ಕುರಿತು ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಸಿಲಿಕಾನ್ ವ್ಯಾಲಿ ಸ್ಟಾರ್ಟ್ ಅಪ್ ಕಂಪನಿ ವೆರ್ಕಡಾ ಇನ್​ಕಾರ್ಪೆರೇಷನ್​ನ ಭದ್ರತಾ ಕ್ಯಾಮರಾಗಳು ಸಂಗ್ರಹಿಸಿರುವ ದತ್ತಾಂಶಗಳೇ ಹ್ಯಾಕರ್​ಗಳ ಗುರಿಯಾಗಿತ್ತೆಂದು ತಿಳಿದು ಬಂದಿದೆ. ಪ್ರತಿಷ್ಠಿತ ಆಸ್ಪತ್ರೆಗಳು, ಜೈಲುಗಳು, ಕಂಪನಿಗಳು, ಪೊಲೀಸ್ ಇಲಾಖೆ ಹಾಗೂ ಶಾಲೆಗಳ ಸುಮಾರು 1.50 ಲಕ್ಷ ನಿಗಾ ಕ್ಯಾಮರಾಗಳಿಂದ ಹ್ಯಾಕರ್ಗಳು ಮಾಹಿತಿ ಕದ್ದಿರುವುದಾಗಿ ತಿಳಿದು ಬಂದಿದೆ.

    ಪ್ರಖ್ಯಾತ ಕಾರು ಕಂಪನಿ ಟೆಸ್ಲಾ ಮತ್ತು ಸಾಫ್ಟ್​ವೇರ್ ಒದಗಿಸುವ ಕ್ಲೌಡ್​ಫೇರ್ ಇನ್ ಕಾರ್ಪೆರೇಷನ್​ಗೂ ಹ್ಯಾಕರ್​ಗಳ ಬಿಸಿ ತಟ್ಟಿದೆ. ಇದಿಷ್ಟೇ ಅಲ್ಲ, ಮಹಿಳಾ ಆರೋಗ್ಯ ಕೇಂದ್ರಗಳು, ಮಾನಸಿಕ ಆಸ್ಪತ್ರೆಗಳು ಹಾಗೂ ಸ್ವತಃ ವೆರ್ಕಡಾ ಕಚೇರಿಯ ಒಳಭಾಗಗಳ ವಿಡಿಯೋ ದೃಶ್ಯಾವಳಿಗಳನ್ನು ಹ್ಯಾಕರ್​ಗಳು ವೀಕ್ಷಿಸಿದ್ದಾರೆ.

    ಉದ್ದೇಶವೇನು?

    1 ಜಗತ್ತಿನಲ್ಲಿ ಏನೆಲ್ಲ ಅಕ್ರಮ, ಅನಾಹುತ ನಡೆಯುತ್ತದೆಂದು ಗೊತ್ತಿದ್ದರೂ ಅವನ್ನೆಲ್ಲ ನೋಡಲು ಆಗುವುದಿಲ್ಲ. ಅದನ್ನು ತೋರಿಸುವುದೇ ನಮ್ಮ ಉದ್ದೇಶ ಎಂದು ಪ್ರಮುಖ ಹ್ಯಾಕರ್​ಗಳಲ್ಲಿ ಒಬ್ಬನಾದ ಟೆಲ್ಲಿ ಕೊಟ್​ವ್ಯಾನ್ ಹೇಳಿದ್ದಾನೆ. ಆಸ್ಪತ್ರೆಯಲ್ಲಿ ರೋಗಿಯ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿಡಿಯೋ ದೃಶ್ಯವನ್ನು ಉಲ್ಲೇಖಿಸಿದ್ದಾನೆ.

    2 ತೀವ್ರ ಕುತೂಹಲ, ಮಾಹಿತಿ ಸ್ವಾತಂತ್ರ್ಯಕ್ಕಾಗಿ ಹಾಗೂ ಬೌದ್ಧಿಕ ಆಸ್ತಿ ಹಕ್ಕಿಗಾಗಿ ಹೋರಾಟ, ಬಂಡವಾಳ ಶಾಹಿ ವ್ಯವಸ್ಥೆಗೆ ಭಾರಿ ಗುದ್ದು ನೀಡುವುದು, ಅರಾಜಕತೆ ಸೃಷ್ಟಿಸುವ ಜತೆಗೆ ತಮಾಷೆಯೂ ಹ್ಯಾಕಿಂಗ್​ಗೆ ಕಾರಣವಾಗಿವೆ ಎಂದು ಆತ ಹೇಳಿದ್ದಾನೆ.

    ಭಾರತಕ್ಕೂ ಕಾಡುತ್ತಿದೆ ಆತಂಕ

    ಈ ಬೆಳವಣಿಗೆ ಭಾರತಕ್ಕೂ ಆತಂಕ ತಂದಿದೆ. ಇತ್ತೀಚೆಗೆ ಭಾರತದ 14 ವಿದ್ಯುತ್ ಪ್ರಸರಣ ಜಾಲದ ಮೇಲೆ ಚೀನಾ ಹ್ಯಾಕರ್​ಗಳು ದಾಳಿ ನಡೆಸುವ ವಿಫಲ ಪ್ರಯತ್ನ ನಡೆಸಿದ್ದ ವಿಚಾರ ಆತಂಕ ಮೂಡಿಸಿತ್ತು. ಇದಿಷ್ಟೇ ಅಲ್ಲದೆ ಇತ್ತೀಚೆಗೆ ಮುಂಬೈನಲ್ಲಿ ಹಗಲು ವೇಳೆ ಗಂಟೆಗಟ್ಟಲೆ ಸ್ಥಗಿತಗೊಂಡಿದ್ದ ವಿದ್ಯುತ್ ಪೂರೈಕೆ ಸಮಸ್ಯೆಗೂ ಇದೇ ಹ್ಯಾಕರ್​ಗಳು ಕಾರಣ ಎಂಬ ಮಾತು ಕೇಳಿಬಂದಿತ್ತು.

    ಜಾಗತಿಕ ಸವಾಲು

    ಯಾವುದೇ ದೇಶದ ಭದ್ರತೆ, ಅಣ್ವಸ್ತ್ರ ಘಟಕ ಇನ್ನಿತರ ಸೂಕ್ಷ ವಿಚಾರಗಳಿಗೆ ಸಂಬಂಧಿಸಿದ ಮಾಹಿತಿಗಳು ಆಯಾ ಇಲಾಖೆಗಳ ವೆಬ್​ಸೈಟ್ ಅಥವಾ ಸಂಬಂಧ ಪಟ್ಟ ಅಧಿಕಾರಿಗಳ ಇ-ಮೇಲ್​ನಲ್ಲಿರುತ್ತದೆ. ಅಂತಹ ವಿಚಾರಗಳನ್ನು ಹ್ಯಾಕ್ ಮಾಡಿ ಕದಿಯುವ ಸೈಬರ್ ಕಳ್ಳರು ಅದನ್ನು ಶತ್ರುರಾಷ್ಟ್ರಗಳಿಗೆ ಮಾರಿಕೊಳ್ಳುವ ಅಥವಾ ವಿದ್ರೋಹಿಗಳಿಗೆ ನೀಡುವ ಅಪಾಯವಿರುತ್ತದೆ. ಅಫ್ಘಾನಿಸ್ತಾನ, ಇರಾಕ್ ಹಾಗೂ ಇನ್ನಿತರ ದೇಶಗಳ ಉಗ್ರರು ಅಣ್ವಸ್ತ್ರ ಮಾಹಿತಿ ಕದಿಯಲು ಸೈಬರ್ ದಾಳಿ ನಡೆಸಿರುವ ಅನೇಕ ನಿದರ್ಶನ ಕಣ್ಣ ಮುಂದಿವೆ. ಹೀಗಾಗಿ ಈ ಸಮಸ್ಯೆ ಈಗ ಜಾಗತಿಕ ಸವಾಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts