More

    ನಕಲಿ ರಸಗೊಬ್ಬರ ಹಾವಳಿಗೆ ಕಡಿವಾಣ ಹಾಕಿ

    ಗದಗ: ಜಲಜೀವನ ಮಿಷನ್, ಗೋಶಾಲೆ ಸ್ಥಾಪನೆ, ಶಾಲಾ ಅಭಿವೃದ್ಧಿ ಕಾಮಗಾರಿ, ಕೈಗಾರಿಕಾ ಖಾಲಿ ನಿವೇಶನ, 2008ರಲ್ಲಿ ಪ್ರವಾಹದಿಂದ ಸ್ಥಳಾಂತರಗೊಂಡ ಹಳ್ಳಿಗಳಲ್ಲಿ ವಸತಿ ಹಂಚಿಕೆ, ಶಾಲಾ ಕಟ್ಟಡ ದುರಸ್ತಿ, ಬೆಳೆ ಹಾನಿ ಮತ್ತು ಪರಿಹಾರ, ನಕಲಿ ರಸಗೊಬ್ಬರ, ಕೀಟನಾಶಕ ವಿತರಣೆ ಹಾಗೂ ಜಿಲ್ಲೆಯಲ್ಲಿ ಹೆಸರು ಬೆಳೆಗೆ ಪರಿಹಾರ ವಿತರಣೆ ಕುರಿತು ಸೋಮವಾರ ತ್ರೖೆಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಭೀರ ಚರ್ಚೆ ಜರುಗಿತು.

    ಕೇಂದ್ರದ ಯೋಜನೆಗಳ ಅನುಷ್ಠಾನ, ಅಂಗವಿಕಲರಿಗೆ ಸೌಲಭ್ಯ ಮತ್ತು ರಸ್ತೆ ಮೇಲೆ ಹೆಚ್ಚಿನ ಭಾರದ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಆರ್​ಟಿಒ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಸೂಚಿಸಿದರು.

    ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಶಾಲಾ ಉದ್ಯಾನ ಮತ್ತು ಪೌಷ್ಟಿಕ ತೋಟ ಮತ್ತು ಹೆಸೆರು ಬೆಳೆಗೆ 167 ಕೋಟಿ ಬಿಡುಗಡೆ ಆದರೂ ಪ್ರಚಾರಗೊಳಿಸದ ಕೃಷಿ ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.

    ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಆಶ್ರಯ ಯೋಜನೆ ಹಂಚಿಕೆ, ಫಲಾನುಭವಿಗಳ ಆಯ್ಕೆ ವಿಚಾರವಾಗಿ ಶಾಸಕ ಎಚ್.ಕೆ. ಪಾಟೀಲ ವಿರುದ್ಧ ಸಚಿವ ಸಿ.ಸಿ. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರಸಭೆ ಅಧ್ಯಕ್ಷೆ ಉಷಾ ದಾಸರ ಅಭಿಪ್ರಾಯ ಕೇಳಿಲ್ಲ. ಫಲಾನುಭವಿಗಳ ಆಯ್ಕೆಗೆ ಸಭೆ ನಡೆಸಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

    ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳರ ಪಾಲಾಗುತ್ತಿರುವ ದೂರುಗಳಿವೆ. ಜನರಿಂದ ಅಕ್ರಮವಾಗಿ ಅಕ್ಕಿ ಪಡೆದು ಸಾಗಿಸುವರ ಮೇಲೆ ಗೂಂಡಾ ಕಾಯ್ದೆ ಅಡಿ ಕ್ರಮ ಕೈಗೊಳ್ಳಗುವುದು ಎಂದು ಬಿ.ಸಿ. ಪಾಟೀಲ ಎಚ್ಚರಿಸಿದರು.

    ಸಭೆಗೆ ಮಾಹಿತಿ ನೀಡಿದ ಆಹಾರ ಇಲಾಖೆ ಅಧಿಕಾರಿ, ಅಕ್ರಮ ಅಕ್ಕಿ ಸಾಗಾಟಗಾರರ ಮೇಲೆ 28 ಪ್ರಕರಣ ದಾಖಲಿಸಿ, 11 ವಾಹನ ವಶಕ್ಕೆ ಪಡೆಯಲಾಗಿದೆ. 2800ಕ್ಕೂ ಅಧಿಕ ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಲಾಗಿದೆ ಎಂದರು.

    ರಸಗೊಬ್ಬರ ಸಾಗಾಟ ಪ್ರಕ್ರಿಯೆಯಿಂದ ಮೂಲಬೆಲೆಗಿಂತ ಅಧಿಕ ಬೆಲೆಯ ಹೊರೆ ಆಗುತ್ತಿದ್ದು, ಡೀಲರ್​ಗಳಿಗೆ ಸಮಸ್ಯೆಯಾಗಿದೆ. ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಹುಬ್ಬಳ್ಳಿಯಲ್ಲೇ ಗೊಬ್ಬರ ಅನ್​ಲೋಡ್ ಮಾಡಲಾಗುತ್ತಿದೆ. ಸಗಟು ವ್ಯಾಪಾರಸ್ಥರು ಹುಬ್ಬಳ್ಳಿವರೆಗೂ ಹೋಗಿ ಗೊಬ್ಬರ ಪಡೆಯಬೇಕು. ಇದಕ್ಕೆ ಪರಿಹಾರ ಮಾರ್ಗ ಕಂಡುಕೊಳ್ಳಲು ಕೃಷಿ ಇಲಾಖೆಗೆ ಸಿ.ಸಿ. ಪಾಟೀಲ ಮತ್ತು ಬಿ.ಸಿ. ಪಾಟೀಲ ಸೂಚಿಸಿದರು.

    ಬೆಳೆ ನಷ್ಟದ ಪರಿಹಾರ ವಿತರಿಸುವ ನ್ಯಾಷನಲ್ ಪೇಮೆಂಟ್ ಕಾರ್ಪೆರೇಷನ್ ಆಫ್ ಇಂಡಿಯಾ (ಎನ್​ಸಿಪಿಐ) ಪೋರ್ಟಲ್​ಗೆ ಜಿಲ್ಲೆಯಲ್ಲಿ 750 ರೈತರ ಆಧಾರ್ ಸಂಖ್ಯೆಯ ಜೋಡಣೆ ಬಾಕಿ ಉಳಿದಿದ್ದಕ್ಕೆ ಕೃಷಿ ಅಧಿಕಾರಿಗಳ ಮೇಲೆ ಸಿಟ್ಟಾದ ಸಚಿವ ಬಿ.ಸಿ. ಪಾಟೀಲ, ನ. 30ರೊಳಗೆ ಜೋಡಣೆ ಪೂರ್ಣಗೊಳಿಸಲು ತಾಕೀತು ಮಾಡಿದರು. ಅಲ್ಲದೆ, ನಕಲಿ ಗೊಬ್ಬರ, ಕೀಟನಾಶಕ ಪೂರೈಕೆ ಮಾಡಿದ ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸಲು ಸೂಚಿಸಿದರು.

    ಗೋಶಾಲೆ ಆರಂಭಿಸಿ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಹಾವಳಿ ಮತ್ತು ಅವುಗಳಿಗೆ ತಗಲಿರುವ ಚರ್ಮಗಂಟು ರೋಗಕ್ಕೆ ಚಿಕಿತ್ಸೆ ನೀಡುವ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಬಿಡಾಡಿ ದನಗಳಿಗಾಗಿ ಗೋಶಾಲೆ ಸ್ಥಾಪಿಸಲು ನಗರಸಭೆಗೆ ಸಿ.ಸಿ. ಪಾಟೀಲ ನಿರ್ದೇಶನ ನೀಡಿದರು.

    ನಗರಸಭೆಯ ಸಾಮಾನ್ಯ ನಿಧಿಯಿಂದ ಹಣ ಮೀಸಲಿಟ್ಟು ಗೋಶಾಲೆ ಸ್ಥಾಪಿಸುವುದು ಮತ್ತು ಮೇವು, ಗೋವುಗಳ ರಕ್ಷಣೆ, ಚಿಕಿತ್ಸೆ ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸುವಂತೆ ಆದೇಶಿಸಿದರು. ಜಿಲ್ಲೆಯಲ್ಲಿ ಚರ್ಮಗಂಟು ರೋಗಕ್ಕೆ 50 ಸಾವಿರ ಚುಚ್ಚುಮದ್ದು ಲಭ್ಯ ಇದೆ. ಮತ್ತೆ 20 ಸಾವಿರ ಚುಚ್ಚುಮದ್ದಿಗೆ ಬೇಡಿಕೆ ಇಡಲಾಗಿದೆ ಎಂದು ತಿಳಿಸಿದರು.

    ಕಾರ್ವಿುಕ ಭವನಕ್ಕಾಗಿ ನರಗುಂದದಲ್ಲಿ 10 ಗುಂಟೆ ಜಾಗ ಮೀಸಲಿಟ್ಟಿದ್ದೇವೆ. ಅನುದಾನ ಬಿಡುಗಡೆ ಆಗಿದೆ ಎಂದು ಸಿ.ಸಿ. ಪಾಟೀಲ ಹೇಳಿದರು.

    ಪ್ರತಿ ಗ್ರಾಮದಲ್ಲಿ ತಲಾ 1 ಕಿ.ಮೀ. ರಸ್ತೆ ಮತ್ತು ಚರಂಡಿ ನಿರ್ವಿುಸಲು ನರೇಗಾದಡಿ ಅವಕಾಶ ನೀಡಬೇಕು, ಪ್ರವಾಹದಿಂದ ಸ್ಥಳಾಂತರಗೊಂಡ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಬೇಕು. ಅಡಕೆ ಬೆಳೆ ಕ್ಷೇತ್ರ ಹೆಚ್ಚಿಸಲು ಇಲಾಖೆಗೆ ಪ್ರಸ್ತಾವನೆ ಕಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

    ರಿಯಲ್ ಎಸ್ಟೇಟ್ ದಂಧೆಯಲ್ಲ: ಕೈಗಾರಿಕೋದ್ಯಮಕ್ಕೆ ಪಡೆದು, ಕೈಗಾರಿಕೆ ಆರಂಭಿಸದೇ ಖಾಲಿ ಬಿಟ್ಟ ನಿವೇಶನಗಳನ್ನು ಹಿಂಪಡೆದು, ಅಗತ್ಯ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಸೂಚಿಸಿದ ಸಚಿವ ಸಿ.ಸಿ. ಪಾಟೀಲ, ಸಬ್ಸಿಡಿಗೆ ಕೈಗಾರಿಕಾ ನಿವೇಶನ ಪಡೆದು ಹೆಚ್ಚಿನ ಮೊತ್ತಕ್ಕೆ ಮಾರುತ್ತಿದ್ದಾರೆ. ಇದೇನು ರಿಯೆಲ್ ಎಸ್ಟೇಟ್ ದಂಧೆಯೇ? ಎಂದು ಗರಂ ಆದರು. ಖಾಲಿ ಕೈಗಾರಿಕಾ ನಿವೇಶನಗಳ ಬಗ್ಗೆ ಕೆಐಡಿಬಿ ಜತೆಗೆ ಜಂಟಿ ಸಮೀಕ್ಷೆ ಮಾಡಲಾಗುವುದು ಎಂಬ ಅಧಿಕಾರಿ ಪ್ರತಿಕ್ರಿಯೆಗೆ ಸಿಟ್ಟಾದ ಸಚಿವರು, ಸಮಜಾಯಿಷಿ ಬೇಡ. ಮೊದಲು ನಿವೇಶನ ಹಿಂಪಡೆಯಿರಿ ಎಂದು ರೇಗಿದರು.

    ಆದೇಶ ಪಾಲಿಸಿ: ಹಿಜಾಬ್ ಧರಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಪ್ರಕರಣಕ್ಕೆ ಸಂಬಂಧಿಸಿ ಅಮಾನತಾದ 5 ಶಿಕ್ಷಕರ ಮೇಲಿನ ವಿಚಾರಣೆ ಪೂರ್ಣಗೊಂಡಿದ್ದು, ಅವರು ಅಮಾಯಕರು. ಅವರನ್ನು ಪುನಃ ಸೇವೆಗೆ ಸೇರ್ಪಡೆಗೊಳಿಸಿ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಒತ್ತಾಯಿಸಿದರು. ಮಧ್ಯೆಪ್ರವೇಶಿಸಿದ ಸಚಿವ ಸಿ.ಸಿ. ಪಾಟೀಲ ಹಿಜಾಬ್ ವಿಷಯದಲ್ಲಿ ಹೊಸ ನಿರ್ಧಾರ ಕೈಗೊಳ್ಳದೇ ಸರ್ಕಾರದ ಆದೇಶ ಪಾಲಿಸಿ ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದರು.

    ಜಿಲ್ಲಾ ಉಸ್ತುವಾರಿ ಕಾರ್ಯರ್ದ ಮೊಹಮ್ಮದ್ ಮೊಹಸೀನ್ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಜಿಲ್ಲಾಧಿಕಾರಿ ವೈಶಾಲಿ ಎಂ., ಜಿಪಂ ಸಿಇಒ ಡಾ. ಸುಶೀಲಾ ಬಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts