More

    ಪ್ರವಾಸಿ ತಾಣಗಳಲ್ಲಿ ಹೆಚ್ಚುತ್ತಿರುವ ಸುಲಿಗೆಗೆ ಕಡಿವಾಣ

    ವಿಜಯಪುರ : ಪ್ರವಾಸಿಗರ ಸುಲಿಗೆ ಹಾಗೂ ಸ್ಮಾರಕಗಳ ಅತಿಕ್ರಮಣಕ್ಕೆ ಕಡಿವಾಣ ಹಾಕುವುದರ ಜತೆಗೆ ಐತಿಹಾಸಿಕ ಸುರಂಗ ಮಾರ್ಗ ಕಾಮಗಾರಿ ಪುನರಾರಂಭ, ನವರಸಪುರ ಉತ್ಸವಕ್ಕೆ ಚಾಲನೆ ಹಾಗೂ ಸ್ಥಗಿತಗೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದುವರಿಸುವ ಮೂಲಕ ಐತಿಹಾಸಿಕ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಾಗಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.

    ಪ್ರವಾಸಿ ತಾಣಗಳಲ್ಲಿ ಪಾರ್ಕಿಂಗ್ ಶುಲ್ಕ ಹೆಚ್ಚಿಸುವುದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು.

    ಪ್ರವಾಸಿಗರಿಗೆ ಭದ್ರತೆ ಕಲ್ಪಿಸಲಾಗುವುದು. ಸ್ಮಾರಕಗಳನ್ನು ರಕ್ಷಿಸಿ ಮೂಲ ಸೌಕರ್ಯ ಕಲ್ಪಿಸಲಾಗುವುದೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಇದನ್ನೂ ಓದಿ: ತಡವಲಗಾದಲ್ಲಿ ದೇವಾಲಯಗಳ ಲೋಕಾರ್ಪಣೆ ಕಾರ್ಯಕ್ರಮ

    ಈಗಾಗಲೇ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಕಲೆ ಹಾಕಲಾಗಿದೆ. ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿರುವ ವಿಜಯಪುರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಪೂರಕ ವಾತಾವರಣ ಇದೆ.

    ಆದರೆ, ಸಮಸ್ಯೆಗಳು ಸಾಕಷ್ಟಿವೆ. ಕಳೆದ ಹಲವಾರು ತಿಂಗಳುಗಳಿಂದ ಗೋಳಗುಮ್ಮಟದಂಥ ವಿಶ್ವದ ಅತ್ಯಂತ ಮಹತ್ವದ ಸ್ಮಾರಕಗಳಲ್ಲಿಯೇ ವಿದ್ಯುತ್ ಸೌಲಭ್ಯವಿಲ್ಲ ಎಂಬುದು ನೋವಿನ ಸಂಗತಿ. ತಕ್ಷಣ ವಿದ್ಯುತ್ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿ ತಿಳಿಸಿದರು.

    ಗೋಳಗುಮ್ಮಟದಲ್ಲಿ ಧ್ವನಿ ಬೆಳಕಿನ ವ್ಯವಸ್ಥೆ ಬಗ್ಗೆ ಸರ್ಕಾರ ಯೋಜನೆ ಘೋಷಣೆ ಮಾಡಿದೆ. ಶೀಘ್ರದಲ್ಲಿ ಟೆಂಡರ್ ಕರೆದು ಪ್ರಕ್ರಿಯೆ ಆರಂಭಿಸಲು ಪ್ರಯತ್ನಿಸಲಾಗುವುದು. ಆ ಬಗ್ಗೆ ತಜ್ಞರೊಂದಿಗೆ ಚರ್ಚಿಸಲಾಗುವುದು. ಆ ಬಗ್ಗೆ ವಿಶೇಷವಾಗಿ ಅಭಿಪ್ರಾಯ ತಿಳಿಸಲು ಮುಕ್ತವಾಗಿ ಲೇಖನ ಆಹ್ವಾನಿಸಲಾಗುವುದು ಎಂದರು.

    ಸ್ಮಾರಕಗಳ ಸಮೀಕ್ಷೆಗೆ ಗಡುವು:

    ರಾಮಲಿಂಗನ ಕೆರೆ ಅತಿಕ್ರಮಣ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಅರೆಕಿಲ್ಲಾ ಒಳಗಿರುವ ಸ್ಮಾರಕಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು.

    ಸಂರಕ್ಷಿತ ಸ್ಮಾರಕಗಳ ಸಮೀಕ್ಷೆ ನಡೆಸಿ, ಪಟ್ಟಿ ಸಿದ್ಧಪಡಿಸಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಆ ವರದಿ ಆಧರಿಸಿ ಜನವರಿ ಅಂತ್ಯದ ವೇಳೆಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅಧಿಸೂಚನೆ ಹೊರಡಿಸಲಾಗುವುದು. ಐತಿಹಾಸಿಕ ಸುರಂಗ ಮಾರ್ಗದ ಕಾಮಗಾರಿ ಹಲವು ಕಾರಣದಿಂದ ಅರ್ಧಕ್ಕೆ ನಿಂತಿದೆ.

    ಈಗಾಗಲೇ ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಅದಕ್ಕಾಗಿ ರಾಜ್ಯ ಸರ್ಕಾರ ಕಾಮಗಾರಿ ಕೈಗೊಳ್ಳಲು ತಿಂಗಳಾಂತ್ಯಕ್ಕೆ ಸೂಕ್ತ ಆದೇಶ ನೀಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹದಿನೈದು ದಿನಗಳಲ್ಲಿ ಪುನಾರಂಭಿಸಲಾಗುವುದು.

    ಟಾಂಗಾಗಳು ಪ್ರವಾಸೋದ್ಯಮ ದೃಷ್ಟಿಯಿಂದ ತುಂಬ ಆಕರ್ಷಣೀಯವಾದವುಗಳು. ಮೈಸೂರು ಮಾದರಿಯಲ್ಲಿ ಟಾಂಗಾ ವ್ಯವಸ್ಥೆಗೆ ಉತ್ತೇಜನ ನೀಡಲಾಗುವುದು ಎಂದರು.

    ವಿಶ್ವ ಪಾರಂಪರಿಕ ಪಟ್ಟಿಗೆ (ಪ್ರವಾಸಿ ತಾಣ) ಸೇರ್ಪಡೆ :

    ಆದಿಲ್‌ಶಾಹಿ ಸುಲ್ತಾನರ ಕಾಲದ ಸ್ಮಾರಕಗಳು ವಿಶ್ವ ಮನ್ನಣೆ ಗಳಿಸಿವೆ. ಯುನೆಸ್ಕೊ ಪಟ್ಟಿಗೆ ಸೇರ್ಪಡೆಯಾಗುವ ಎಲ್ಲ ಅರ್ಹತೆ ಹೊಂದಿವೆ.

    ಆ ನಿಟ್ಟಿನಲ್ಲಿ ಪೂರಕ ವಾತಾವರಣ ನಿರ್ಮಿಸಲಾಗುವುದು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಪ್ರವಾಸೋದ್ಯಮ ಸಮಿತಿ ಬಲಪಡಿಸಿ ಡಿಸೆಂಬರ್ ಅಂತ್ಯದೊಳಗೆ ಪ್ರಕ್ರಿಯೆ ಆರಂಭಿಸಲಾಗುವುದು. ಅದಕ್ಕಾಗಿ ಏಜೆನ್ಸಿ ಸಹ ಫಿಕ್ಸ್ ಮಾಡಲಾಗುವುದು.

    ಯುನೆಸ್ಕೊ ಪಟ್ಟಿಗೆ ಸೇರ್ಪಡೆ ಮಾಡಲು ಬೇಕಾದ ಪೂರ್ವಭಾವಿ ತಯಾರಿ ಮಾಡಿಕೊಳ್ಳಲಾಗುವುದು. ಇದಕ್ಕೆ ಸ್ಥಳೀಯ ಜಿಲ್ಲಾಡಳಿತ ಹಾಗೂ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದರು.

    ಸ್ಮಾರಕಗಳ ದರ್ಶನ ಹಾಗೂ ಸಂರಕ್ಷಣೆಗಾಗಿ ಮಾಡುತ್ತಿರುವ ಈ ಪ್ರವಾಸದ ಜತೆಗೆ ಸ್ಮಾರಕಗಳ ದತ್ತು ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಿಕ್ಯಾಬ್ ಸಂಸ್ಥೆಯವರು ಆನಂದ ಮಹಲ್ ದತ್ತು ಪಡೆಯುವುದಾಗಿ ಮುಂದೆ ಬಂದಿದ್ದಾರೆ.

    ಹೀಗಾಗಿ ಅವರಿಗೆ ದತ್ತು ನೀಡುವ ಪ್ರಕ್ರಿಯೆ ನಡೆಸಲಾಗುವುದು. ಮೂಲ ಸೌಕರ್ಯ, ಸ್ವಚ್ಛತೆಗೆ ಮೊದಲ ಆದ್ಯತೆ ನಂತರ ಎರಡನೇ ಹಂತದಲ್ಲಿ ನಿರ್ವಹಣೆ ಜವಾಬ್ದಾರಿ ನೀಡಲಾಗುವುದು ಎಂದರು.

    ಶಾಸಕರಾದ ಅಶೋಕ ಮನಗೂಳಿ, ವಿಠಲ ಕಟಕಧೋಂಡ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಪಂ ಸಿಇಒ ರಾಹುಲ್ ಶಿಂಧೆ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts