More

    14ರಂದು ಸಾಂಸ್ಕೃತಿಕ ಸುಗ್ಗಿ ಸಂಭ್ರಮಾಚರಣೆ

    ಮೂಡಿಗೆರೆ: ಯುವಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಸಾಗುತ್ತಿದೆ. ಮಲೆನಾಡಿನ ಸಂಸ್ಕೃತಿ ನಶಿಸಿಹೋಗುತ್ತಿದೆ. ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮಲೆನಾಡು ಸಮಾನ ಮನಸ್ಕ ಮಹಿಳೆಯರ ಒಕ್ಕೂಟದಿಂದ ಜ.14ರಂದು ಬೆಳಗ್ಗೆ 11ಕ್ಕೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಮಲೆನಾಡು ಮಹಿಳೆಯರ ಸಾಂಸ್ಕೃತಿಕ ಸುಗ್ಗಿ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವೆ ಮೋಟಮ್ಮ ತಿಳಿಸಿದರು.

    ಉತ್ತರ ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಮಹಿಳೆಯರು ಆ ಭಾಗದ ಸಂಸ್ಕೃತಿಯನ್ನು ಯುವ ಜನತೆಗೆ ಪರಿಚಯಿಸುವ ಕಾರ್ಯಕ್ರಮದಲ್ಲಿ ತಾನು ಭಾಗವಹಿಸಿದ್ದೆ. ಅದೇ ರೀತಿ ಮಲೆನಾಡಿನಲ್ಲಿಯೂ ನಶಿಸಿ ಹೋಗುತ್ತಿರುವ ಮಲೆನಾಡಿನ ಜಾನಪದ, ಸಂಸ್ಕೃತಿ, ಉಡುಗೆ, ತೊಡುಗೆ, ಆಹಾರ ಪದ್ಧತಿಯನ್ನು ಪರಿಚಯಿಸುವ ಕಾರ್ಯಕ್ರಮ ಮಾಡಬೇಕೆಂದು ಉದ್ದೇಶಿಸಿ ಎಲ್ಲ ಮಹಿಳಾ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಮಲೆನಾಡು ಮಹಿಳೆಯರ ಸಾಂಸ್ಕೃತಿಕ ಸುಗ್ಗಿ ಸಂಭ್ರಮಾಚರಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಮಲೆನಾಡ ಅಡುಗೆ, ತೊಡುಗೆ, ಕೋಲಾಟ, ಮದುವೆ ಹಾಡುಗಳು, ಜಾನಪದ ನೃತ್ಯ, ಕಂಸಾಳೆ, ಒಗಟು, ಗಾದೆಗಳ ಸ್ಪರ್ಧೆ, ಹಳೇ ಸಾಂಪ್ರದಾಯಿಕ ಉಡುಗೆ- ತೊಡುಗೆ- ನಡಿಗೆಯ ಪ್ರದರ್ಶನವಿರುತ್ತದೆ. ಮಲೆನಾಡು ಶೈಲಿಯ ತಿಂಡಿ, ತಿನಿಸು, ಖಾದ್ಯಗಳನ್ನೊಳಗೊಂಡ ಸ್ಟಾಲ್‌ಗಳು ಇರುತ್ತವೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
    ಜಿಪಂ ಮಾಜಿ ಅಧ್ಯಕ್ಷೆ ಸವಿತಾ ರವಿ ಮಾತನಾಡಿ, ಮಹಿಳೆಯರೆಲ್ಲರೂ ಸೇರಿ ಮೊಟ್ಟ ಮೊದಲ ಬಾರಿಗೆ ಮಲೆನಾಡ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಾಜಿ ಸಚಿವೆ ಮೋಟಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕಿ ನಯನಾ ಮೋಟಮ್ಮ ಪ್ರಶಸ್ತಿ ವಿತರಣೆ ಮಾಡುವರು. ವಾಗ್ಮಿ ಹಿರೇಮಗಳೂರು ಕಣ್ಣನ್, ಚಲನಚಿತ್ರ ನಟರಾದ ನರೇಂದ್ರಬಾಬು, ನೀನಾಸಂ ಗಣೇಶ್ ಹೆಗ್ಗೋಡು, ಕಿರುತೆರೆ ನಟಿ ಶರ್ಮಿತಾ ಗೌಡ ಭಾಗವಹಿಸುವರು ಎಂದು ಹೇಳಿದರು.
    ವಿವಿಧ ಸಂಘಟನೆ ಪ್ರಮುಖರಾದ ನಿರ್ಮಲಾ ಮಂಚೇಗೌಡ, ಕಲಾವತಿ ರಾಜಣ್ಣ, ಸುಚಿತ್ರಾ ಪ್ರಸನ್ನ, ಗೀತಾ ಲೋಕೇಶ್, ಮಾಲಾ ಧಶರಥ್, ಜಮುನಾ ಲೋಕಪ್ಪ ಗೌಡ, ಪವಿತ್ರಾ ರತೀಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts