More

    ಕೋಟೆಯ ಇತಿಹಾಸ ವಿಶ್ವಕ್ಕೆ ಪಸರಿಸಬೇಕು

    ಚಿತ್ರದುರ್ಗ: ಐತಿಹಾಸಿಕ ಏಳುಸುತ್ತಿನ ಕೋಟೆಯನ್ನು ಶತ್ರುಗಳಿಂದ ರಕ್ಷಿಸಿಕೊಳ್ಳಲು ಪಾಳೆಗಾರರು ನಿರ್ಮಿಸಿದ್ದಾರೆ. ಇದೊಂದು ಅತ್ಯದ್ಬುತ ಪ್ರವಾಸಿ ತಾಣವಾಗಿದ್ದು, ಇದರ ಇತಿಹಾಸ ವಿಶ್ವಕ್ಕೆ ಪಸರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.

    ಕೋಟೆ ಆವರಣದಲ್ಲಿ ಮಂಗಳವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪ್ರವಾಸೋದ್ಯಮ ಪುನರಾವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರದುರ್ಗದ ಕಲ್ಲಿನಕೋಟೆಯ ಕುರಿತು ತಿಳಿದುಕೊಳ್ಳುವ ವಿಚಾರ ಸಾಕಷ್ಟಿವೆ. ಅದಕ್ಕಾಗಿ ಮಕ್ಕಳು ಐತಿಹಾಸಿಕ ಸ್ಥಳ, ಸ್ಮಾರಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ಸಾಹಸಿ ಜ್ಯೋತಿರಾಜ್ ಮಾತನಾಡಿ, ತಮಿಳುನಾಡಿನಿಂದ ಬಂದ ನನಗೆ ಈ ಕಲ್ಲಿನಕೋಟೆ ಜೀವನ ಕಟ್ಟಿಕೊಟ್ಟಿದೆ. ಪ್ರವಾಸಿಗರು ತೋರುವ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ಗೋಡೆ ಏರುವ ಕ್ರೀಡೆಗಾಗಿ ಯುವಕರಿಗೆ ತರಬೇತಿ ನೀಡುತ್ತಿದ್ದೇನೆ. ಈಗಾಗಲೇ ಅನೇಕರು ದೈಹಿಕ ತರಬೇತಿ ಪಡೆದು ಪೊಲೀಸ್ ಹಾಗೂ ಸೇನೆಗೆ ಸೇರ್ಪಡೆಯಾಗಿದ್ದಾರೆ. ಚಿತ್ರದುರ್ಗದಲ್ಲಿ ಕೃತಕ ವಾಲ್ ನಿರ್ಮಿಸಲು ಸ್ಥಳ ಹಾಗೂ ಅನುಮತಿ ಜಿಲ್ಲಾಡಳಿತ ನೀಡಿದರೆ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಕ್ರೀಡಾಪಟುಗಳನ್ನು ತಯಾರಿ ಮಾಡಲು ಸಿದ್ಧನಿದ್ದೇನೆ ಎಂದರು.

    ಇದೇ ವೇಳೆ ಪ್ರವಾಸೋಧ್ಯಮ ಇಲಾಖೆಯ ಟಿಎಸ್‌ಪಿ ಯೋಜನೆಯಡಿ ಕಲಾವಿದರಾದ ಓ.ಮೂರ್ತಿ ರಿದಮ್ ಪ್ಯಾಡ್, ಪುರುಷೋತಮ್ ಡೊಲಕ್, ವೆಂಕಟೇಶ್ ಕ್ಯಾಸಿನಿಯೋ ಹಾಗೂ ರಮೇಶ್ ಅವರಿಗೆ ಹಾರ್ಮೋನಿಯಂ ವಿತರಿಸಲಾಯಿತು.

    ಇದಕ್ಕೂ ಮುನ್ನ ನಡೆದ ಪ್ರವಾಸೋದ್ಯಮ ಜಾಥಾದಲ್ಲಿ ಆಕರ್ಷಕ ಕಲಾತಂಡಗಳು, ಶಾಲಾ ಮಕ್ಕಳು, ಪ್ರವಾಸಿ ಮಾರ್ಗದರ್ಶಿಗಳು, ಪ್ರವಾಸಿ ಮಿತ್ರರು ಹಾಗೂ ಜ್ಯೋತಿರಾಜ್ ತಂಡದವರು ಪಾಲ್ಗೊಂಡಿದ್ದರು. ಒನಕೆ ಓಬವ್ವ ವೃತ್ತದಿಂದ ಆರಂಭವಾದ ಜಾಥಾ ಮದಕರಿನಾಯಕ ವೃತ್ತ, ರಂಗಯ್ಯನಬಾಗಿಲು, ಉಚ್ಚಂಗಿಯಲ್ಲಮ್ಮ ದೇಗುಲ ಮಾರ್ಗವಾಗಿ ಸಂಚರಿಸಿ ಕೋಟೆ ಆವರಣ ತಲುಪಿತು.

    ಇಲಾಖೆ ಸಹಾಯಕ ನಿರ್ದೇಶಕ ಜಿತೇಂದ್ರನಾಥ್, ಸಿಬ್ಬಂದಿ ಸಂದೀಪ್, ಹಿರಿಯ ಪ್ರವಾಸಿ ಮಾರ್ಗದರ್ಶಿ ತಿಪ್ಪೇಸ್ವಾಮಿ ಇತರರಿದ್ದರು.

    ಚಿತ್ರಕಲಾ ಶಿಕ್ಷಕರಿಂದ ಶಿಬಿರ
    ದಿನಾಚರಣೆ ಅಂಗವಾಗಿ ಕೋಟೆ ಆವರಣದಲ್ಲಿ ಚಿತ್ರಕಲಾ ಶಿಕ್ಷಕರಿಂದ ಚಿತ್ರಕಲಾ ಶಿಬಿರ ನಡೆಯಿತು. ಇದರಲ್ಲಿ ಜಿಲ್ಲೆಯ 20ಕ್ಕೂ ಹೆಚ್ಚು ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರು ಭಾಗವಹಿಸಿ, ಕಲ್ಲಿನಕೋಟೆ, ಚಂದ್ರವಳ್ಳಿ, ಮದ್ದು ಬೀಸುವ ಕಲ್ಲು, ಗಾಳಿಗೋಪುರ, ಒಂಟಿಕಲ್ಲು ಬಸವ, ಜೋಗಿಮಟ್ಟಿ, ದವಳಪ್ಪನಗುಡ್ಡ ಸೇರಿ ಜಿಲ್ಲೆಯ ಐತಿಹಾಸಿಕ ಸ್ಥಳ, ಸ್ಮಾರಕಗಳ ಚಿತ್ರಗಳನ್ನು ತಮ್ಮ ಕುಂಚದಲ್ಲಿ ಅರಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts