More

    ಇಂದು ಸಿಎಸ್‌ಕೆ-ಸನ್‌ರೈಸರ್ಸ್‌ ; ಪ್ಲೇಆಫ್ ಖಾತ್ರಿಗಾಗಿ ಧೋನಿ ಬಳಗ ಹೋರಾಟ

    ಶಾರ್ಜಾ: ಪ್ಲೇಆಫ್ ರೇಸ್‌ನಿಂದ ಹೊರಬಿದ್ದರೂ ಅಂಕಪಟ್ಟಿಯಲ್ಲಿ ಕಡೇ ಸ್ಥಾನ ತಪ್ಪಿಸಿಕೊಳ್ಳುವ ಅವಕಾಶ ಹೊಂದಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-14ರ ಎರಡನೇ ಭಾಗದ ಪಂದ್ಯದಲ್ಲಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಗುರುವಾರ ಎದುರಿಸಲಿದೆ. ಪ್ಲೇಆಫ್    ಖಾತ್ರಿ ಪಡಿಸಿಕೊಳ್ಳುವ ಯತ್ನದಲ್ಲಿರುವ ಸಿಎಸ್‌ಕೆ ತಂಡ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ. ಸತತ ಸೋಲುಗಳಿಂದ ಕಂಗೆಟ್ಟು, ಲೀಗ್‌ನಿಂದ ಹೊರಬಿದ್ದ ಮೊದಲ ತಂಡ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಸನ್‌ರೈಸರ್ಸ್‌ ತಂಡ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಗೆಲುವಿನ ಹಳಿಗೇರಿತ್ತು. ಅರಬ್ ನಾಡಿನಲ್ಲಿ ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ಸಿಎಸ್‌ಕೆ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ.

    ಪ್ಲೇಆಫ್ ಖಾತ್ರಿಗೆ ಸಿಎಸ್‌ಕೆ ಸಜ್ಜು: ಸನ್‌ರೈಸರ್ಸ್‌ಗೆ ಹೋಲಿಸಿದರೆ ಸಿಎಸ್‌ಕೆ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ತವಕದಲ್ಲಿರುವ ಸಿಎಸ್‌ಕೆ ತಂಡ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ. ಆರಂಭಿಕ ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯಿನ್ ಅಲಿ, ಸುರೇಶ್ ರೈನಾ, ಅಂಬಟಿ ರಾಯುಡು ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಬಲಿಷ್ಠವಾಗಿರುವ ಸಿಎಸ್‌ಕೆ ಆತ್ಮವಿಶ್ವಾಸದಲ್ಲಿದೆ. ಕೇನ್ ವಿಲಿಯಮ್ಸನ್ ಸಾರಥ್ಯದ ಸನ್‌ರೈಸರ್ಸ್‌ ತಂಡಕ್ಕೆ ಈ ಪಂದ್ಯ ಔಪಚಾರಿಕವಾದರೂ ಬೆಂಚ್ ಸ್ಟ್ರೆಂತ್ ಪರೀಕ್ಷಿಸಲು ಇದೊಂದು ಉತ್ತಮ ಅವಕಾಶವಾಗಿದೆ. ಇದುವರೆಗೂ ಆಡಿರುವ 10 ಪಂದ್ಯಗಳಲ್ಲಿ 8 ಗೆಲುವು, 2 ಸೋಲು, 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

    – ಸನ್‌ರೈಸರ್ಸ್‌ಗೆ ಔಪಚಾರಿಕ ಕದನ
    ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈ ಆವೃತ್ತಿಯಲ್ಲಿ ನಾಯಕತ್ವದ ಜತೆಗೆ ತಂಡದಿಂದಲೂ ಹೊರಬಿದಿದ್ದಾರೆ. ಕರ್ನಾಟಕದ ಮನೀಷ್ ಪಾಂಡೆ ಕೂಡ ಕಳೆದ ಪಂದ್ಯದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಇಂಥವರ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಗೆ ಮತ್ತೊಮ್ಮೆ ಮಣೆ ಹಾಕಲು ಸನ್‌ರೈಸರ್ಸ್‌ ಚಿಂತಕರ ಛಾವಡಿ ಸಜ್ಜಾಗಿದೆ. ವಾರ್ನರ್ ಅನುಪಸ್ಥಿತಿಯಲ್ಲಿ ರಾಯಲ್ಸ್ ಎದುರು ಕಣಕ್ಕಿಳಿದ ಜೇಸನ್ ರಾಯ್ ಸ್ಫೋಟಿಸುವ ಮೂಲಕ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಕೆಲವೊಂದು ಬದಲಾಣೆಯೊಂದಿಗೆ ಸನ್‌ರೈಸರ್ಸ್‌ ತಂಡ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಇದುವರೆಗೂ ಆಡಿರುವ 10 ಪಂದ್ಯಗಳಿಂದ 8ರಲ್ಲಿ ಸೋತು, ಕೇವಲ 2ರಲ್ಲಿ ಗೆದ್ದು ಕಡೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ತಂಡ ಅಂಕಪಟ್ಟಿಯಲ್ಲಿ ಮೇಲೇರುವ ತವಕದಲ್ಲಿದೆ.

    ಟೀಮ್ ನ್ಯೂಸ್:
    ಸನ್‌ರೈಸರ್ಸ್‌: ಗೆಲುವಿನ ಹಳಿಗೇರಿರುವ ಸನ್‌ರೈಸರ್ಸ್‌ ತಂಡದಲ್ಲಿ ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆಗಳಿವೆ. ಮೀಸಲು ಬಳಗದಲ್ಲಿರುವ ಇನ್ನಷ್ಟು ಯುವ ಆಟಗಾರರಿಗೆ ಅವಕಾಶ ಲಭಿಸಿದರೂ ಅಚ್ಚರಿ ಇಲ್ಲ.
    ಸಿಎಸ್‌ಕೆ: ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಸ್ಯಾಮ್ ಕರ‌್ರನ್ ಬದಲಿಗೆ ಡ್ವೇನ್ ಬ್ರಾವೊ ಹನ್ನೊಂದರ ಬಳಗಕ್ಕೆ ವಾಪಸಾಗಬಹುದು.

    ಮುಖಾಮುಖಿ: 15, ಸನ್‌ರೈಸರ್ಸ್‌: 4, ಸಿಎಸ್‌ಕೆ: 11
    ಹಿಂದಿನ ಮುಖಾಮುಖಿ: ದೆಹಲಿಯಲ್ಲಿ ನಡೆದ ಸಿಎಸ್‌ಕೆ ತಂಡಕ್ಕೆ 7 ವಿಕೆಟ್ ಜಯ
    ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್
    ಪಂದ್ಯ ಆರಂಭ: ರಾತ್ರಿ 7.30ಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts