More

    ಇಂದು ಸಿಎಸ್‌ಕೆ – ಸನ್‌ರೈಸರ್ಸ್‌ ಹಣಾಹಣಿ; ಗೆಲುವಿನ ಲಯಕ್ಕೆ ಮರಳಲು ವಾರ್ನರ್ ಪಡೆ ತವಕ

    ನವದೆಹಲಿ: ಸತತ 4 ಗೆಲುವಿನೊಂದಿಗೆ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಗೂ ಅಷ್ಟೇ ಸೋಲುಗಳಿಂದ ಕಂಗೆಟ್ಟಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-14ರ ತಮ್ಮ 6ನೇ ಹಣಾಹಣಿಯಲ್ಲಿ ಎದುರಾಗಲಿವೆ. ಈಗಾಗಲೇ ಚೆನ್ನೈ ಹಾಗೂ ಮುಂಬೈನಲ್ಲಿ ಮೊದಲ ಚರಣದ ಪಂದ್ಯಗಳು ಮುಕ್ತಾಯಗೊಂಡಿವೆ. ಇದೀಗ ಕರೊನಾ ಅಬ್ಬರದ ನಡುವೆ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನ ಚುಟುಕು ಕ್ರಿಕೆಟ್ ಪಂದ್ಯದ ಆಯೋಜನೆಗೆ ಸಿದ್ಧವಾಗಿದೆ. ಮುಂದಿನ ಪಂದ್ಯಗಳಲ್ಲಿ ಒತ್ತಡ ರಹಿತವಾಗಿ ಆಡುವ ದೃಷ್ಟಿಯಿಂದ ಸನ್‌ರೈಸರ್ಸ್‌ ತಂಡಕ್ಕೆ ಈ ಪಂದ್ಯ ಮಹತ್ವ ಪಡೆದಿದೆ.

    *ಆತ್ಮವಿಶ್ವಾಸದಲ್ಲಿ ಸಿಎಸ್‌ಕೆ
    ಲೀಗ್‌ನ ಆರಂಭಿಕ ಪಂದ್ಯ ಸೋತ ಬಳಿಕ ಸತತ 4 ಜಯ ಕಂಡಿರುವ ಎಂಎಸ್ ಧೋನಿ ಸಾರಥ್ಯದ ಪಡೆ ಇದೀಗ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ. ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ಎದುರು ಅಬ್ಬರಿಸಿದ್ದ ಸಿಎಸ್‌ಕೆ ಆಲ್ರೌಂಡರ್ ರವೀಂದ್ರ ಜಡೇಜಾ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಜಡೇಜಾ, ಹರ್ಷಲ್ ಪಟೇಲ್ ಎಸೆದ ಕಡೇ ಓವರ್‌ನಲ್ಲಿ 37 ರನ್ ಸಿಡಿಸಿದ್ದರು. ಅಲ್ಲದೆ, 3 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆರಂಭಿಕರಾದ ಡು ಪ್ಲೆಸಿಸ್, ಋತುರಾಜ್ ಗಾಯಕ್ವಾಡ್ ಉತ್ತಮ ಆರಂಭ ನೀಡುತ್ತಿದ್ದರೆ, ಅನುಭವಿಗಳಾದ ಸುರೇಶ್ ರೈನಾ ಹಾಗೂ ಅಂಬಟಿ ರಾಯುಡು ಜೋಡಿಯಿಂದ ದೊಡ್ಡ ಮೊತ್ತ ಬರಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಧೋನಿ ಕೈಕೊಡುತ್ತಿದ್ದರೂ ಆಲ್ರೌಂಡರ್ ಜಡೇಜಾ ಸ್ಫೋಟಿಸುತ್ತಿದ್ದಾರೆ. ವೇಗಿ ಶಾರ್ದೂಲ್ ಠಾಕೂರ್ ದುಬಾರಿಯಾಗುತ್ತಿದ್ದರೆ, ದೀಪಕ್ ಚಹರ್, ಸ್ಯಾಮ್ ಕರ‌್ರನ್ ನಿಕಟ ದಾಳಿಯಿಂದ ಗಮನಸೆಳೆಯುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಇಮ್ರಾನ್ ತಾಹಿರ್ ಸ್ಪಿನ್ ವಿಭಾಗದಲ್ಲಿ ಬಲ ತುಂಬಿದ್ದರು.

    * ಸನ್‌ರೈಸರ್ಸ್‌ಗೆ ಕಾಡುತ್ತಿರುವ ಅಸ್ಥಿರ ನಿರ್ವಹಣೆ
    ಲೀಗ್‌ನಲ್ಲಿ ಇದುವರೆಗೆ ಆಡಿರುವ 5 ಪಂದ್ಯಗಳಿಂದ ಏಕೈಕ ಗೆಲುವು ಕಂಡು, 4 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕಡೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ತಂಡಕ್ಕೆ ಗೆಲುವಿನ ಹಳಿಗೇರುವುದೇ ದೊಡ್ಡ ಸವಾಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಎದುರು ಗೆಲುವಿನಂಚಿನಲ್ಲಿ ಎಡವಿ ಸೂಪರ್ ಓವರ್‌ಗೆ ಮುಗ್ಗರಿಸಿತ್ತು. ಅನುಭವಿ ಕೇನ್ ವಿಲಿಯಮ್ಸನ್, ಕನ್ನಡಿಗ ಜೆ.ಸುಚಿತ್ ಹೋರಾಟದ ಲವಾಗಿ ಕಡೇ ಕ್ಷಣದವರೆಗೂ ಹೋರಾಡಿದ್ದರೂ ಗೆಲುವು ದಕ್ಕಲಿಲ್ಲ. ಕೆಲವೊಂದು ಎಡವಟ್ಟುಗಳಿಂದ ಸೂಪರ್ ಓವರ್‌ನಲ್ಲೂ ನಿರಾಸೆ ಕಂಡಿತು. ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವೊಂದು ಬದಲಾವಣೆಯೂ ತಂಡಕ್ಕೆ ಅನಿವಾರ್ಯವಾಗಿದೆ. ಅಲ್ಲದೆ, ಡೇವಿಡ್ ವಾರ್ನರ್ ಕಳಪೆ ಫಾರ್ಮ್ ತಂಡದ ಆರಂಭಿಕ ಹಂತದಲ್ಲಿ ಹಿನ್ನಡೆಯುಂಟಾಗಿದೆ.

    ಟೀಮ್ ನ್ಯೂಸ್:
    ಸಿಎಸ್‌ಕೆ: ಗೆಲುವಿನ ನಾಗಾಲೋಟದಲ್ಲಿರುವ ಸಿಎಸ್‌ಕೆ ತಂಡದಲ್ಲಿ ಬದಲಾವಣೆ ನಿರೀಕ್ಷಿಸುವುದು ಕಷ್ಟ. ಅರುಣ್ ಜೇಟ್ಲಿ ಮೈದಾನದ ಪಿಚ್ ಸ್ಪಿನ್‌ಗಳಿಗೆ ಸಹಕಾರಿಯಾಗುವ ದೃಷ್ಟಿಯಿಂದ ಇಮ್ರಾನ್ ತಾಹಿತ್ ಮತ್ತೊಂದು ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ.
    ಕಳೆದ ಪಂದ್ಯ: ಆರ್‌ಸಿಬಿ ಎದುರು 69 ರನ್ ಜಯ
    ————–
    ಸನ್‌ರೈಸರ್ಸ್‌: ವಾರ್ನರ್ -ರಶೀದ್ ಖಾನ್ ವೈಲ್ಯದ ನಡುವೆಯೂ ವಿದೇಶಿ ಕೋಟಾದಲ್ಲಿ ಸ್ಥಾನ ಉಳಿಸಿಕೊಳ್ಳುವುದು ಪಕ್ಕಾ. ವಿರಾಟ್ ಸಿಂಗ್ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡಿಲ್ಲ. ಇವರ ಬದಲಿಗೆ ಮನೀಷ್ ಪಾಂಡೆಗೆ ಮತ್ತೆ ಅವಕಾಶ ನೀಡಬಹುದು. ಉಳಿದಂತೆ ಹನ್ನೊಂದರ ಬಳಗದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ.
    ಕಳೆದ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೂಪರ್ ಓವರ್‌ನಲ್ಲಿ ಸೋಲು

    ಮುಖಾಮುಖಿ: 14, ಸಿಎಸ್‌ಕೆ : 10, ಸನ್‌ರೈಸರ್ಸ್‌: 4
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಪಂದ್ಯ ಆರಂಭ: ರಾತ್ರಿ 7.30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts