More

    ಇಂದು ಕೆಕೆಆರ್-ಸಿಎಸ್‌ಕೆ ಮುಖಾಮುಖಿ, ಗೆದ್ದರಷ್ಟೇ ಮಾರ್ಗನ್ ಪಡೆಗೆ ಉಳಿಗಾಲ

    ದುಬೈ: ಪ್ಲೇಆಫ್ ಹಂತಕ್ಕೇರಲು ಮಾಡು ಇಲ್ಲವೆ ಮಡಿ ಸ್ಥಿತಿಯಲ್ಲಿರುವ ಎರಡು ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್-13ರಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಈಗಾಗಲೇ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿರುವ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಎದುರಿಸಲಿದೆ. 12 ಪಂದ್ಯಗಳಿಂದ 12 ಅಂಕ ಕಲೆಹಾಕಿರುವ ಕೆಕೆಆರ್ ಕಡೇ 2 ಹೋರಾಟವನ್ನು ಗೆಲ್ಲಲೇಬೇಕಿದೆ. ಜತೆಗೆ ಇತರ ಪಂದ್ಯಗಳ ಫಲಿತಾಂಶದ ಮೇಲೆಯೂ ಕೆಕೆಆರ್ ಭವಿಷ್ಯ ಅಡಗಿದೆ. ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಲಯ ಕಂಡಿರುವ ಸಿಎಸ್‌ಕೆ ಸವಾಲು ಕೆಕೆಆರ್ ಪಾಲಿಗೆ ಕಠಿಣವಾಗಿದೆ. ಹಿಂದಿನ ಮುಖಾಮುಖಿಯಲ್ಲಿ ಕೆಕೆಆರ್ 10 ರನ್‌ಗಳಿಂದ ಧೋನಿ ಬಳಗವನ್ನು ಸೋಲಿಸಿತ್ತು. ಜತೆಗೆ ಅಂಕಪಟ್ಟಿಯಲ್ಲಿ ಕಡೇ ಸ್ಥಾನ ತಪ್ಪಿಸಿಕೊಳ್ಳುವ ದೃಷ್ಟಿಯಿಂದ ಸಿಎಸ್‌ಕೆ ತಂಡಕ್ಕೆ ಈ ಪಂದ್ಯ ಮಹತ್ವದ್ದಾಗಿದೆ.

    * ಕೆಕೆಆರ್‌ಗೆ ಬ್ಯಾಟಿಂಗ್ ಚಿಂತೆ
    ಕೆಕೆಆರ್‌ಗೆ ಬ್ಯಾಟಿಂಗ್ ವಿಭಾಗದ್ದೇ ದೊಡ್ಡ ಸಮಸ್ಯೆಯಾಗಿದೆ. ಇವೊಯಿನ್ ಮಾರ್ಗನ್, ಮಾಜಿ ನಾಯಕ ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ ಒಳಗೊಂಡ ಬ್ಯಾಟಿಂಗ್ ಪಡೆ ಅಸ್ಥಿರ ನಿರ್ವಹಣೆಯಿಂದ ಬಳಲುತ್ತಿದೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಖುಷಿಯಲ್ಲಿರುವ ತಮಿಳುನಾಡು ಮೂಲದ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತೊಮ್ಮೆ ಮಿಂಚುವ ತವಕದಲ್ಲಿದ್ದಾರೆ. ಪ್ಯಾಟ್ ಕಮ್ಮಿನ್ಸ್, ಕನ್ನಡಿಗ ಪ್ರಸಿದ್ಧ್ ಕೃಷ್ಣ, ವರುಣ್ ಚಕ್ರವರ್ತಿ, ಲಾಕಿ ಫರ್ಗ್ಯುಸನ್ ಒಳಗೊಂಡ ಬೌಲಿಂಗ್ ಪಡೆ ಸಿಎಸ್‌ಕೆಗೆ ಕಡಿವಾಣ ಹಾಕಲು ಸಜ್ಜಾಗಿದೆ. ಒಂದು ವೇಳೆ ಸೋತರೆ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿರುವ ಕೆಕೆಆರ್ ತಂಡಕ್ಕೆ ಎಚ್ಚರಿಕೆ ನಿರ್ವಹಣೆಯ ಅಗತ್ಯವಿದೆ.

    * ಔಪಚಾರಿಕ ಕಾಳಗಕ್ಕೆ ಸಿಎಸ್‌ಕೆ ಸನ್ನದ್ಧ
    ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಸಿಎಸ್‌ಕೆ ಮತ್ತೊಂದು ಔಪಚಾರಿಕ ಕಾಳಗಕ್ಕೆ ಸಜ್ಜಾಗಿದೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿಗೆ ಶಾಕ್ ನೀಡಿದ್ದ ಧೋನಿ ಬಳಗ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಯುವ ಕ್ರಿಕೆಟಿಗರಿಗೆ ಅವಕಾಶ ನೀಡುತ್ತಿರುವ ಧೋನಿ ಈ ಪಂದ್ಯದಲ್ಲೂ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಪ್ಲೇ ಆಫ್ ನಿಂದ ಹೊರಬಿದ್ದಿದ್ದರೂ ಕೆಕೆಆರ್ ಓಟಕ್ಕೆ ಅಡ್ಡಗಾಲು ಹಾಕುವ ಸಾಮರ್ಥ್ಯ ಹೊಂದಿದೆ. ಜತೆಗೆ ಅಂಕಪಟ್ಟಿಯಲ್ಲಿ ಹಾವು ಏಣಿ ಆಟಕ್ಕೂ ಸಾಕ್ಷಿಯಾಗಲಿದೆ. ಕಳೆದ ಪಂದ್ಯದಲ್ಲಿ ಮಿಂಚಿದ್ದ ಋತುರಾಜ್ ಗಾಯಕ್ವಾಡ್ ಕೆಕೆಆರ್ ವಿರುದ್ಧವೂ ಸಿಡಿಯುವ ಹಂಬಲದಲ್ಲಿದ್ದಾರೆ. ಹಿಂದಿನ ಪಂದ್ಯದಲ್ಲಿ ಆಡದ ಕೆಲ ಯುವ ಕ್ರಿಕೆಟಿಗರಿಗೆ ಧೋನಿ ಅವಕಾಶ ನೀಡಲಿದ್ದಾರೆ.

    ಟೀಮ್ ನ್ಯೂಸ್:

    ಕೋಲ್ಕತ ನೈಟ್‌ರೈಡರ್ಸ್‌: ಹಿಂದಿನ ಪಂದ್ಯದಲ್ಲಿ ಪಂಜಾಬ್ ತಂಡಕ್ಕೆ ಶರಣಾಗಿದ್ದರೂ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಕಡಿಮೆ. ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯಲಿದೆ.
    ಸಂಭಾವ್ಯ ತಂಡ: ಶುಭಮಾನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೀ), ಇವೊಯಿನ್ ಮಾರ್ಗನ್ (ನಾಯಕ), ಸುನೀಲ್ ನಾರಾಯಣ್, ಕಮಲೇಶ್ ನಾಗರಕೋಟಿ, ಪ್ಯಾಟ್ ಕಮ್ಮಿನ್ಸ್, ಲಾಕಿ ರ್ಗ್ಯುಸನ್, ವರುಣ್ ಚಕ್ರವರ್ತಿ, ಪ್ರಸಿದ್ಧ್ ಕೃಷ್ಣ.

    ಕಳೆದ ಪಂದ್ಯ: ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು 8 ವಿಕೆಟ್ ಸೋಲು.

    ಚೆನ್ನೈ ಸೂಪರ್‌ಕಿಂಗ್ಸ್: ಪ್ರತಿ ಪಂದ್ಯದಲ್ಲೂ ಕೆಲವೊಂದು ಬದಲಾವಣೆ ಮಾಡಿಕೊಳ್ಳುತ್ತಿರುವ ಸಿಎಸ್‌ಕೆ ತಂಡ ಈ ಪಂದ್ಯದಲ್ಲೂ, ಇದುವರೆಗೆ ಆಡದ ಆಟಗಾರರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಸಾಯಿ ಕಿಶೋರ್, ಕೆಎಂ ಆಸಿಫ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
    ಸಂಭಾವ್ಯ ತಂಡ: ಋತುರಾಜ್ ಗಾಯಕ್ವಾಡ್, ಪ್ಲೆಸಿಸ್, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ, ವಿಕೀ), ಎನ್.ಜಗದೀಶನ್, ಸ್ಯಾಮ್ ಕರ‌್ರನ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ದೀಪರ್ ಚಹರ್, ಇಮ್ರಾನ್ ತಾಹಿರ್, ಮೊನು ಕುಮಾರ್.

    ಕಳೆದ ಪಂದ್ಯ: ಆರ್‌ಸಿಬಿ ಎದುರು 8 ವಿಕೆಟ್ ಜಯ.

    ಪಂದ್ಯ ಆರಂಭ: ರಾತ್ರಿ 7.30ಕ್ಕೆ
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
    ಮುಖಾಮುಖಿ: 21, ಸಿಎಸ್‌ಕೆ: 13, ಕೆಕೆಆರ್: 8 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts