More

    ಸಿಆರ್‌ಝಡ್ ಮರಳು ಗಗನ ಕುಸುಮ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಮರಳು ದಿಬ್ಬ ತೆರವು ಪರವಾನಗಿ ಅವಧಿ ಮುಗಿದು ಎರಡೂವರೆ ತಿಂಗಳು ಕಳೆದಿದೆ. ಆದರೂ ಸಮೀಕ್ಷೆ- ಲೆಕ್ಕಾಚಾರಗಳ ನೆಪದಲ್ಲಿ ಕಡತಗಳು ಹರಿದಾಡುತ್ತಿದೆಯೇ ಹೊರತು ಪರವಾನಗಿ ಲಭಿಸುತ್ತಿಲ್ಲ.

    ಜಿಲ್ಲೆಯಲ್ಲಿ ಮೊದಲ ಹಂತದ 10 ಮರಳು ದಿಬ್ಬಗಳಲ್ಲಿ 40 ಮಂದಿಯ ಪರವಾನಗಿ ಅಕ್ಟೋಬರ್ 15 ಹಾಗೂ ಎರಡನೇ ಹಂತದ 12 ದಿಬ್ಬಗಳಲ್ಲಿ 65 ಮಂದಿಯ ಪರವಾನಗಿ ಡಿಸೆಂಬರ್ 26ಕ್ಕೆ ಮುಕ್ತಾಯಗೊಂಡಿದೆ.
    ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆ ಕುರಿತಂತೆ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಸಲಾಗಿದ್ದು, ಪ್ರಸ್ತಾಪಿತ ಮರಳು ದಿಣ್ಣೆಗಳನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
    ಈಗಾಗಲೇ ಎನ್‌ಐಟಿಕೆಯವರು ಬೇಥಮೆಟ್ರಿ ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ. ಅವರು ನೀಡಿರುವ ವರದಿ ಆಧಾರದಲ್ಲಿ ಮತ್ತೆ ಇಲಾಖೆಯವರು ಪರಿಶೀಲನೆ ನಡೆಸಿದ ಬಳಿಕ ಬೆಂಗಳೂರಿನಲ್ಲಿ ಅಂತಿಮವಾಗಿ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ(ಕೆಎಸ್‌ಸಿಝಡ್‌ಎಂಎ) ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

    ಬೇಥಮೆಟ್ರಿ ಸಮೀಕ್ಷೆ ಮುಗಿಸಿ, ಲಭ್ಯವಾಗುವ ಮರಳಿನ ಪ್ರಮಾಣ, ಮರಳು ದಿಣ್ಣೆಗಳಿರುವ ಜಾಗ ಇತ್ಯಾದಿ ವಿವರಗಳುಳ್ಳ ವರದಿಯನ್ನು ಎನ್‌ಐಟಿಕೆ ನೀಡಿದೆ. ಆದರೆ ಇದರಲ್ಲಿ ಹೇಳಲಾದ ಮರಳಿನ ದಿಣ್ಣೆಗಳೆಲ್ಲವನ್ನೂ ಪರಿಗಣಿಸುವುದಕ್ಕಾಗದು. ಈ ಬಗ್ಗೆ ಮತ್ತೆ ಇಲಾಖೆ ವತಿಯಿಂದ ಪರಿಶೀಲನೆ ನಡೆಸಿ ಅಂತಿಮ ವರದಿಯನ್ನು ರಾಜ್ಯ ಪ್ರಾಧಿಕಾರಕ್ಕೆ ಕಳುಹಿಸಲಾಗುವುದು ಎನ್ನುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು. ಈ ಪ್ರಕ್ರಿಯೆಯಿಂದಾಗಿ ಸಿಆರ್‌ಝಡ್ ಮರಳುಗಾರಿಕೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

    ಗುತ್ತಿಗೆದಾರರ ಆಕ್ರೋಶ: ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಿರುವ ಸಿಆರ್‌ಝಡ್ ಮರಳು ಅಕ್ಟೋಬರ್‌ನಿಂದಲೇ ಸಿಗುತ್ತಿಲ್ಲ. ಉತ್ತಮ ಮರಳು ಸಿಗದೆ ಜನಸಾಮಾನ್ಯರು, ಗುತ್ತಿಗೆದಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕ ವರ್ಗಕ್ಕೆ ಕೆಲಸವಿಲ್ಲದೆ ಜೀವನ ನಿರ್ವಹಿಸಲಾಗದೆ ಕಂಗೆಟ್ಟಿದ್ದಾರೆ ಎಂದು ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ಹೇಳಿದೆ.
    ಪರವಾನಗಿಯ ಅವಧಿ ಮುಗಿಯುವ ಮೊದಲೇ ಮರಳು ದಿಬ್ಬ ಗುರುತಿಸಿ ಪರವಾನಗಿ ನವೀಕರಣ ಮಾಡಬಹುದಲ್ಲವೇ? ಜನವರಿಯಿಂದ ಮೇ ಅಂತ್ಯದವರೆಗೆ ಮಳೆಗಾಲದ ಪೂರ್ವ ತಯಾರಿಗೆ ಸಂಬಂಧಿಸಿ ಕಟ್ಟಡ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿ ವೇಗ ಪಡೆಯುವ ಸಮಯವಾದ್ದರಿಂದ ಈ ಸಮಯದಲ್ಲಿ ಮರಳಿನ ಅಭಾವ ಸೃಷ್ಟಿಸುವುದು ಸರಿಯಲ್ಲ. ಹಾಗಾಗಿ ಆದಷ್ಟೂ ಶೀಘ್ರವಾಗಿ ಮರಳುಗಾರಿಕೆಗೆ ಅವಕಾಶ ಮಾಡುವ ಮೂಲಕ ಮರಳಿನ ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ಅಸೋಸಿಯೇಶನ್ ಒತ್ತಾಯಿಸಿದೆ.

    ಇನ್ನೆರಡು ತಿಂಗಳು ಮಾತ್ರ:
    ಮಳೆಗಾಲ ಆರಂಭವಾಗುವಾಗ ಜೂನ್‌ನಿಂದ ಎರಡು ತಿಂಗಳು ಮರಳುಗಾರಿಕೆ ಮೇಲೆ ಸಂಪೂರ್ಣ ನಿಷೇಧ ಹೇರಲಾಗುತ್ತದೆ. ನಡುವೆ ಮೂರು ತಿಂಗಳಿಗೂ ಕಡಿಮೆ ಅವಧಿ ಇದೆ. ಈಗ ಅನುಮತಿ ನೀಡುವ ನೆಪದಲ್ಲಿ ತಿಂಗಳುಗಟ್ಟಲೆ ಮರಳು ದಿಬ್ಬ ತೆರವು ಪ್ರಕ್ರಿಯೆ ಸ್ಥಗಿತಗೊಳ್ಳುತ್ತಿರುವುದು ಸಮಸ್ಯೆ.

    ಜಿಲ್ಲೆಯಲ್ಲಿ ಪ್ರಸ್ತುತ 12 ನಾನ್ ಸಿಆರ್‌ಝಡ್ ಮರಳು ಬ್ಲಾಕ್‌ಗಳಲ್ಲಿ ಮರಳು ತೆಗೆಯಲಾಗುತ್ತಿದೆ. ಇನ್ನೂ 30 ಬ್ಲಾಕ್‌ಗಳ ಹರಾಜಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಈ ಮಾಸಾಂತ್ಯಕ್ಕೆ ಅದರ ನಿರ್ಧಾರ ಆಗಲಿದೆ. ಸಿಆರ್‌ಝಡ್ ಮರಳು ಇಲ್ಲದಿದ್ದರೂ ಜಿಲ್ಲೆಗೆ ಅಗತ್ಯವಿರುವಷ್ಟು ಮರಳು ನಾನ್‌ಸಿಆರ್‌ಝಡ್ ಬ್ಲಾಕ್‌ಗಳಲ್ಲಿ ಸಿಗುತ್ತಿದೆ.
    – ನಿರಂಜನ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ, ದ.ಕ.

    ಉಡುಪಿ 10 ಮರಳು ದಿಬ್ಬಕ್ಕೆ ಅನುಮತಿ
    ಉಡುಪಿ: ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಗುರುತಿಸಿರುವ 10 ಮರಳು ದಿಬ್ಬ ತೆರವಿಗೆ ಜಿಲ್ಲಾ ಮಟ್ಟದ ಕರಾವಳಿ ವಲಯ ನಿರ್ವಹಣಾ ಸಮಿತಿ (ಡಿಸಿಝಡ್‌ಎಂಸಿ) ಸಲ್ಲಿಸಿದ ಪ್ರಸ್ತಾವನೆಗೆ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (ಕೆಎಸ್‌ಸಿಝಡ್‌ಎಂಎ) ಬುಧವಾರ ಅನುಮತಿ ನೀಡಿದೆ.
    ಸ್ವರ್ಣ ನದಿಯಲ್ಲಿ 6 ಮರಳು ದಿಬ್ಬಗಳು, ಸೀತಾನದಿಯಲ್ಲಿ 3 ಮರಳು ದಿಬ್ಬಗಳು, ಪಾಪನಾಶಿನಿ ನದಿಯಲ್ಲಿ 1 ಮರಳು ದಿಬ್ಬ ಸೇರಿ ಒಟ್ಟು 10 ದಿಬ್ಬಗಳ ತೆರವಿಗೆ ಡಿ.5ರಂದು ನಡೆದ ಡಿಸಿಝಡ್‌ಎಂಸಿ ಸಭೆಯಲ್ಲಿ ನಿರಾಕ್ಷೇಪಣಾ ಪತ್ರ ನೀಡುವಂತೆ ಕೆಎಸ್‌ಸಿಝಡ್‌ಎಂಎಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಫೆ.14ರಂದು ಕೆಎಸ್‌ಸಿಝಡ್‌ಎಂಎ ಸಭೆಯಲ್ಲಿ 10 ಮರಳು ದಿಬ್ಬ ತೆರವಿಗೆ ನಿರಾಕ್ಷೇಪಣಾ ಪತ್ರ ನೀಡುವಂತೆ ನಿರ್ಣಯಿಸಿ ಅನುಮತಿ ನೀಡಲಾಗಿದೆ.
    7.13 ಲಕ್ಷ ಮೆಟ್ರಿಕ್ ಟನ್: ಕೆಎಸ್‌ಸಿಝಡ್‌ಎಂಎಯಿಂದ ಈ ಹಿಂದೆ ನೀಡಿದ ನಿರಾಕ್ಷೇಪಣಾ ಪತ್ರದನ್ವಯ ಮರಳು ದಿಬ್ಬ ತೆರವು ಅವಧಿ ಫೆ.3ರಂದು ಮುಕ್ತಾಯಗೊಂಡಿತ್ತು. ನಂತರ 10 ಮರಳು ದಿಬ್ಬಗಳಲ್ಲಿ ಒಟ್ಟು 7.13 ಲಕ್ಷ ಮೆಟ್ರಿಕ್ ಟನ್ ಮರಳನ್ನು ಬೇಥಮೆಟ್ರಿಕ್ ಸರ್ವೇ ಮೂಲಕ ಗುರುತಿಸಿ, ನಿರಾಕ್ಷೇಪಣಾ ಪತ್ರಕ್ಕಾಗಿ ಕೆಎಸ್‌ಸಿಝಡ್‌ಎಂಎ ಪ್ರಸ್ತಾವನೆ ಸಲ್ಲಿಸಲಾಗಿತ್ತು.

    ಕೆಎಸ್‌ಸಿಝಡ್‌ಎಂಎ ಒಪ್ಪಿಗೆ ನೀಡಿರುವುದರಿಂದ ಏಳು ಸದಸ್ಯರ ಸಮಿತಿಯಲ್ಲಿ ಸಿಆರ್‌ಝಡ್ ವಲಯದಲ್ಲಿ ಮರಳು ದಿಬ್ಬ ತೆರವಿಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ನಂತರ 2-3 ದಿನದಲ್ಲಿ ಧಕ್ಕೆ ಗುರುತು, ಜಿಪಿಎಸ್ ಅಳವಡಿಕೆ ಮೊದಲಾದ ಕೆಲಸ ನಡೆಯಲಿದೆ. ನಾನ್-ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವಿಗೆ 24 ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ಇಬ್ಬರಿಗೆ ಮಾತ್ರ ಟೆಂಡರ್ ಸಿಕ್ಕಿದೆ. ಉಳಿದ 22ಕ್ಕೆ ಅರ್ಹರಿಲ್ಲ. ಹೀಗಾಗಿ ಟೆಂಡರ್ ಷರತ್ತುಗಳನ್ನು ಸರಳಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
    – ಜಿ.ಜಗದೀಶ್, ಉಡುಪಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts