More

    ಸಿಆರ್‌ಝಡ್ ಹೊಸ ಅಧಿಸೂಚನೆ

    ಪ್ರಕಾಶ್ ಮಂಜೇಶ್ವರ, ಮಂಗಳೂರು
    ಕಡಲ ತೀರದ ‘ಅಭಿವೃದಿ’್ಧ ಕಾಮಗಾರಿ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ವೇಗ ದೊರೆಯುವ ಕಾಲ ಸನ್ನಿಹಿತವಾಗಿದೆ. ಕೇಂದ್ರದ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್)-2019 ಪರಿಷ್ಕೃತ ನಕಾಶೆಗೆ ರಾಜ್ಯ ಸರ್ಕಾರದ ಅನುಮೋದನೆ ದೊರೆತಿರುವುದನ್ನು ಇಲಾಖೆಯ ಉನ್ನತ ಮೂಲ ಖಚಿತಪಡಿಸಿದೆ. ವಾರದೊಳಗೆ ಅಧಿಸೂಚನೆ ಹೊರಡಲಿದೆ.
    ಅಧಿಸೂಚನೆ ಬಳಿಕ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು 60 ದಿನ ಕಾಲಾವಕಾಶ ಇದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಅಹವಲು ಸ್ವೀಕಾರ ಸಭೆ ನಡೆಯಲಿದೆ. ಗ್ರಾಮ ಪಂಚಾಯಿತಿ ಸಹಿತ ಸಂಂಬಂಧಿಸಿದ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದಲ್ಲಿ ಕೂಡ ಜನಜಾಗೃತಿ ಹಾಗೂ ಆಕ್ಷೇಪಣೆ/ ತಕರಾರು ಅರ್ಜಿಗಳ ಸ್ವೀಕಾರ ನಡೆಯಲಿದೆ. ಆಕ್ಷೇಪ ದಾಖಲಿಸಿದ ಬಳಿಕ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ವರದಿ ಕಳುಹಿಸಲಿದೆ. ರಾಜ್ಯ ಸರ್ಕಾರ ಪರಿಶೀಲನೆ ನಡೆಸಿ ಕೇಂದ್ರಕ್ಕೆ ಕಳುಹಿಸುತ್ತದೆ. ಬಳಿಕ ಕೇಂದ್ರ ಅಂತಿಮ ಅನುಮೋದನೆ ನೀಡಲಿದೆ.

    ಏನು ಇದರಿಂದ ಪ್ರಯೋಜನ?: ಪರಿಷ್ಕೃತ ನಕಾಶೆ ಪ್ರಕಾರ ವಲಯ 2ರಲ್ಲಿ ಸಮುದ್ರ ಬದಿಯಲ್ಲಿ 1991ಕ್ಕೂ ಹಿಂದೆ ನಿರ್ಮಿಸಿದ ರಸ್ತೆಯಿಂದ (ಉದಾಹರಣೆಗೆ ಮೀನುಗಾರಿಕಾ ರಸ್ತೆ) ಭೂಭಾಗದ ಕಡೆಗೆ ಮನೆ ಅಥವಾ ಇತರ ಕಟ್ಟಡಗಳನ್ನು ನಿರ್ಮಿಸಲು ಅವಕಾಶವಿದೆ. ರಸ್ತೆ ಇಲ್ಲದಿದ್ದರೆ ಅಧಿಕೃತವಾಗಿ ದಾಖಲೆ ಇರುವ ಜಮೀನಿನಲ್ಲಿ ನಿರ್ಮಿಸಿದ ಕಟ್ಟಡದಿಂದ ಭೂಭಾಗ ಕಡೆಗೆ ಹೊಸ ಮನೆ ಅಥವಾ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಬಹುದು. ಆದರೆ ಕೈಗಾರಿಕೆಗಳ ಸ್ಥಾಪನೆಗೆ ನಿರ್ಬಂಧಗಳಿವೆ. ಗೋವಾ ಮಾದರಿಯಲ್ಲಿ ಕರ್ನಾಟಕ ಕರಾವಳಿಯಲ್ಲೂ ಪ್ರವಾಸೋದ್ಯಮ ಅಭಿವೃದ್ಧಿ ನಡೆಸುವ ಬೇಡಿಕೆ ಹಲವು ವರ್ಷಗಳಿಂದ ಇದೆ. ಪೂರಕವಾಗಿ ಸಿಆರ್‌ಝಡ್ ಅಧಿಸೂಚನೆಯಲ್ಲಿ ಹಲವು ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಸಿಆರ್‌ಝಡ್ ವಲಯ 2ರಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಹೊಸ ರೆಸಾರ್ಟ್, ಹೋಮ್ ಸ್ಟೇ, ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪರಿಷ್ಕೃತ ನಕಾಶೆ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಶೇ.95ರಷ್ಟು, ಉಡುಪಿ ಜಿಲ್ಲೆಯ ಶೇ.30 ಭಾಗ ಸಿಆರ್‌ಝಡ್ ವಲಯ ಎರಡರಲ್ಲಿ ಒಳಗೊಳ್ಳಲಿದೆ. ವಲಯ 1ರಲ್ಲಿ ಹೆಚ್ಚಿನ ನಿರ್ಬಂಧಗಳಿವೆ. ಹಳೇ ನಕಾಶೆಯಲ್ಲಿ ದಕ್ಷಿಣ ಕನ್ನಡದ ಶೇ.60 ಮತ್ತು ಉಡುಪಿಯ ಶೇ.10 ಭಾಗ ಮಾತ್ರ ವಲಯ ಎರಡರಲ್ಲಿತ್ತು.

    ಪರಿಸರ ವಿರೋಧಿ ಆತಂಕ: ಅಭಿವೃದ್ಧಿ ಹೆಸರಿನಲ್ಲಿ ಕಡಲ ತೀರದ ಉದ್ದಕ್ಕೂ ಅಭಿವೃದ್ಧಿ ಚಟುವಟಿಕೆಗಳಿಗೆ ಮುಕ್ತ ಅವಕಾಶ ಒದಗಿಸಿದರೆ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅಳಿವಿನ ಅಂಚಿನಲ್ಲಿರುವ ಸಮುದ್ರ ಜೀವಿ, ಸಸ್ಯ ಪ್ರಭೇದಗಳ ರಕ್ಷಣೆ ಕಷ್ಟವಾಗಬಹುದು. ಪ್ರವಾಸೋದ್ಯಮ ಹೆಸರಿನಲ್ಲಿ ಕಡಲ ತೀರದ ಪ್ರದೇಶಗಳನ್ನು ಕೇವಲ ವ್ಯಾಪಾರದ ದೃಷ್ಟಿಯಿಂದ ನೋಡಿದರೆ ಈ ಭಾಗದ ಜನರ ನೆಮ್ಮದಿ ಹಾಳಾಗಬಹುದು ಎನ್ನುವ ಆತಂಕ ಕೂಡ ಸ್ಥಳೀಯರಲ್ಲಿದೆ. 2019ರ ಜನವರಿಯಲ್ಲಿ ಕೇಂದ್ರ ಸರ್ಕಾರ ಸಿಆರ್‌ಝಡ್ ಅಧಿಸೂಚನೆ-2019 ಪ್ರಕಟಿಸಿತ್ತು. ಕೋವಿಡ್ ದಿಗ್ಬಂಧನ ಪರಿಣಾಮ ನಿಯಮಾವಳಿ ಜಾರಿಗೆ ಅಗತ್ಯ ನಕ್ಷೆ ವಿಳಂಬವಾಗಿತ್ತು. ಚೆನ್ನೈಯ ಸುಸ್ಥಿರ ಕರಾವಳಿ ನಿರ್ವಹಣೆಯ ರಾಷ್ಟ್ರೀಯ ಸಂಸ್ಥೆ(ಎನ್‌ಸಿಎಸ್‌ಸಿಎಂ)ಸಿಆರ್‌ಝಡ್ ಯೋಜನೆ ಹಾಗೂ ನಕ್ಷೆ ತಯಾರಿಗೆ ಅಧಿಕೃತ ಏಜೆನ್ಸಿ.

    ಸಿಆರ್‌ಝಡ್- 2019 ಪರಿಷ್ಕೃತ ನಕಾಶೆ ಸಂಬಂಧಿಸಿ ಶೀಘ್ರದಲ್ಲೇ ಅಧಿಸೂಚನೆ ಹೊರಡಲಿದೆ. ಬಳಿಕ ಸಾರ್ವಜನಿಕರು ಆಕ್ಷೇಪಣೆ ದಾಖಲಿಸಲು 60 ದಿನಗಳ ಕಾಲಾವಕಾಶ ದೊರೆಯಲಿದೆ.
    ಡಾ.ವೈ.ಕೆ.ದಿನೇಶ್ ಕುಮಾರ್  ಪ್ರಾದೇಶಿಕ ನಿರ್ದೇಶಕರು, ದ.ಕ. ಪರಿಸರ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts