More

    ಆನ್​ಲೈನ್ ಮೂಲಕ ಕ್ರಷರ್ ನಿರ್ಮಾಣ ಗುತ್ತಿಗೆ

    ರಾಮನಗರ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ (ಎಸ್​ಸಿಎಸ್​ಪಿ) ಹಾಗೂ ಬುಡಕಟ್ಟು (ಟಿಎಸ್​ಪಿ) ಜನಾಂಗಗಳ ಉಪಯೋಜನೆಗಳಿಗೆ ನಿಗದಿಪಡಿಸಿರುವ ಆರ್ಥಿಕ ಹಾಗೂ ಭೌತಿಕ ಗುರಿಯನ್ನು ಆರ್ಥಿಕ ವರ್ಷದೊಳಗೆ ಶೇ. 100ರಷ್ಟು ಸಾಧಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಖಾಸಗಿ ಶಾಲೆಗಳಲ್ಲಿ ಶುಲ್ಕ ಪಾವತಿಸಿದ ಮಕ್ಕಳಿಗೆ ಮಾತ್ರ ಆನ್​ಲೈನ್ ಶಿಕ್ಷಣ ನೀಡಲಾಗುತ್ತಿದೆ. ಇತರ ಮಕ್ಕಳ ಶೈಕ್ಷಣಿಕ ಚಟುವಟಿಕೆ ಕುರಿತು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈ ಕುರಿತಂತೆ ಮಾರ್ಗದರ್ಶನ ಕೋರಿ ಶಿಕ್ಷಣ ಇಲಾಖೆ ಕೇಂದ್ರ ಕಚೇರಿಗೆ ಪತ್ರ ಬರೆಯುವಂತೆ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

    ರಾಮನಗರದಲ್ಲಿ ಘನ ತ್ಯಾಜ್ಯ ವಿಲೇವಾರಿ ಕುರಿತಂತೆ ಚರ್ಚೆ ನಡೆಯಿತು. ಜಿಲ್ಲೆಯ ಸುತ್ತಮುತ್ತ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಕಸ ವಿಲೇವಾರಿಗೆ ಸೂಕ್ತ ಸ್ಥಳ ದೊರೆಯುತ್ತಿಲ್ಲ. ಖಾಸಗಿಯವರು ಸ್ಥಳ ನೀಡಿದರೆ ಪರಿಶೀಲಿಸಿ ರಾಮನಗರ ನಗರಸಭೆಯಿಂದ ಖರೀದಿಸಲಾಗುವುದು ಎಂದು ಅರ್ಚನಾ ತಿಳಿಸಿದರು.

    ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕ್ರಷರ್ ಘಟಕ ನಿರ್ವಿುಸಲು ಮೀಸಲಾತಿ ಪ್ರಕಾರ ಅವಕಾಶ ನೀಡಿಲ್ಲ ಎಂದು ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಕ್ರಷರ್ ನಿರ್ಮಾಣ ಗುತ್ತಿಗೆಯನ್ನು ಆನ್​ಲೈನ್ ಮೂಲಕ ನಡೆಸಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಸ್ಥಳ ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪ್ರಕ್ರಿಯೆ ಮುಗಿದ ನಂತರ ಆನ್​ಲೈನ್ ಮೂಲಕ ಅರ್ಜಿ ಕರೆಯಲಾಗುವುದು ಎಂದು ತಿಳಿಸಿದರು.

    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿಷ್ಟಿತ ಶಾಲೆಗಳಲ್ಲಿ ಪ್ರವೇಶ ನೀಡುವ ಸಂಬಂಧ ಜಿಲ್ಲೆಯಲ್ಲಿನ ಶಾಲೆಗಳನ್ನು ಗುರುತಿಸುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅರ್ಚನಾ ತಿಳಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಜನಾಂಗದವರ ಕುಂದು ಕೊರತೆ ಕುರಿತಂತೆ ಪೊಲೀಸ್ ಇಲಾಖೆಯಿಂದ ಪ್ರತಿ ತಿಂಗಳು ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

    ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ರಾಂಪುರ ನಾಗೇಶ್, ಚನ್ನಕೇಶವ, ಮೂರ್ತಿ ನಾಯಕ್, ಶಿವಕುಮಾರ್ ಸ್ವಾಮಿ, ಶಿವಶಂಕರ್, ಶ್ರೀನಿವಾಸ್ ಮೂರ್ತಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ವಿತರಣೆ

    ದೌರ್ಜನ್ಯ ಪ್ರಕರಣದಲ್ಲಿ ನೊಂದ ಪರಿಶಿಷ್ಟ ಜಾತಿ/ ವರ್ಗದ ಸಂತ್ರಸ್ತರಿಗೆ ಪರಿಹಾರ ಯೋಜನೆಯಲ್ಲಿ 4 ಕೊಲೆ ಪ್ರಕರಣಗಳಲ್ಲಿ 33 ಲಕ್ಷ ರೂ., 7 ಅತ್ಯಾಚಾರ ಪ್ರಕರಣಗಳಿಗೆ 10.50 ಲಕ್ಷ ರೂ., 34 ಜಾತಿ ನಿಂದನೆ ಮತ್ತು ಹಲ್ಲೆ ಪ್ರಕರಣಗಳಲ್ಲಿ 21.25 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಹಾಗೂ 17 ಪ್ರಕರಣಗಳು ಬಾಕಿ ಇರುವುದಾಗಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಂ.ಎಸ್.ಅರ್ಚನಾ, ಈ 17 ಪ್ರಕರಣಗಳನ್ನು ಶೀಘ್ರವಾಗಿ ಪರಿಹರಿಸುವಂತೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts