More

    ಕೋಟ್ಯಂತರ ಲಾಸು ಪರಿಹಾರ ಅರೆಕಾಸು

    ಹಾವೇರಿ: 2020ರಲ್ಲಿ ಸಂಭವಿಸಿದ ಅತಿವೃಷ್ಟಿ ಹಾಗೂ ನೆರೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 447 ಕೋಟಿ(ಸರ್ಕಾರಿ ಆಸ್ತಿಪಾಸ್ತಿ ಸೇರಿ) ರೂಪಾಯಿ ಹಾನಿ ಸಂಭವಿಸಿತ್ತು. ಆದರೆ, ಸರ್ಕಾರ ಮನೆ, ಬೆಳೆ ಹಾನಿಗೆ ಇದುವರೆಗೆ ಕೇವಲ 15 ಕೋಟಿ ರೂಪಾಯಿಗಳ ಪರಿಹಾರ ನೀಡಿದೆ. ಪೂರ್ತಿ ಪರಿಹಾರಕ್ಕಾಗಿ ಸಂತ್ರಸ್ತರು ಕಾದುಕುಳಿತಿದ್ದಾರೆ.

    ಇದೀಗ ಮತ್ತೊಂದು ಮುಂಗಾರು ಹಂಗಾಮು ಆರಂಭಗೊಂಡಿದ್ದು ಜಿಲ್ಲೆಯಲ್ಲಿ ಈಗಾಗಲೇ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯತೊಡಗಿದೆ. ಮೂರ್ನಾಲ್ಕು ದಿನಗಳ ಹಿಂದೆ ತೌಕ್ತೆ ಚಂಡ ಮಾರುತದ ಪರಿಣಾಮ ಜಿಲ್ಲೆಯಲ್ಲಿಯೂ ಆಗಿದೆ. ಮುಂದಿನ ಜೂನ್, ಜುಲೈ ಹಾಗೂ ಆಗಸ್ಟ್​ನಲ್ಲಿ ಇನ್ನೂ ಜೋರಾದ ಮಳೆಯಾಗುವ ಲಕ್ಷಣವಿದೆ. ಹಿಂದಿನ ವರ್ಷದ ನೆರೆ ಹಾಗೂ ಅತಿವೃಷ್ಟಿಗೆ ಬಿದ್ದ ಮನೆಗಳನ್ನು ನಿರ್ವಿುಸಿಕೊಳ್ಳಲು ಜನರು ಸರ್ಕಾರದ ಪರಿಹಾರಕ್ಕಾಗಿ ಕಾಯುವಂತಾಗಿದೆ.

    2020ರ ಆಗಸ್ಟ್​ನಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆ, ಸೇತುವೆ, ಶಾಲಾ ಕಟ್ಟಡಗಳು, ವಿದ್ಯುತ್ ಕಂಬಗಳು ಹೀಗೆ ಸಾಕಷ್ಟು ಸರ್ಕಾರಿ ಆಸ್ತಿ ಪಾಸ್ತಿಗೆ ಹಾನಿಯಾಗಿದೆ. ಸರ್ಕಾರ ಪರಿಹಾರ ನೀಡುವ ಭರವಸೆ ನೀಡುತ್ತಿದೆ. ಆದರೆ, ಕಳೆದ ವರ್ಷದ ನೆರೆಯಿಂದ ಉಂಟಾದ ಹಾನಿಯ ಪರಿಹಾರವನ್ನೇ ಇನ್ನೂ ಸರಿಯಾಗಿ ನೀಡಿಲ್ಲ. ಈ ಕುರಿತು ವಿಜಯವಾಣಿ ಮಾಹಿತಿ ಸಂಗ್ರಹಿಸಿದಾಗ ಸರ್ಕಾರ ನೆರೆ ಪರಿಹಾರ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಕಂಡುಬಂದಿದೆ.

    ಮನೆಗೆ ಸಿಕ್ಕಿಲ್ಲ ಪರಿಹಾರ: 2020ರಲ್ಲಿ ಜಿಲ್ಲೆಯ ತುಂಗಭದ್ರಾ, ವರದಾ, ಕುಮದ್ವತಿ ನದಿಗಳು ತುಂಬಿ ಹರಿದವು. ಇದರ ಜೊತೆಗೆ ಅತಿವೃಷ್ಟಿಯಾಗಿ ನದಿ ತೀರವಷ್ಟೆ ಅಲ್ಲದೆ, ಉಳಿದೆಡೆಯೂ ಅಪಾರ ಪ್ರಮಾಣದಲ್ಲಿ ಮನೆ, ಜಮೀನುಗಳಿಗೆ ಹಾನಿಯಾಗಿತ್ತು. ನದಿ ತೀರದ ಮನೆಗಳಿಗೆ ನೀರು ನುಗ್ಗಿತ್ತು. ನೀರು ತುಂಬಿದ ಮನೆಗಳಿಗೆ ಮೊದಲ ಹಂತದಲ್ಲಿ 10 ಸಾವಿರ ರೂಪಾಯಿ ತುರ್ತು ಪರಿಹಾರ ನೀಡಲಾಗುತ್ತದೆ ಎಂದು ಸರ್ಕಾರ ಘೊಷಿಸಿತ್ತು. ಅಲ್ಪ ಹಾನಿಯಾದರೆ 1 ಲಕ್ಷ, ಭಾಗಶಃ ಹಾನಿಯಾದರೆ 3 ಲಕ್ಷ ರೂ. ಹಾಗೂ ಸಂಪೂರ್ಣ ಹಾನಿಯಾದರೆ 5 ಲಕ್ಷ ರೂ. ಪರಿಹಾರವನ್ನು ರಾಜೀವ ಗಾಂಧಿ ವಸತಿ ಯೋಜನೆಯಡಿ ನೀಡುವುದಾಗಿ ಸರ್ಕಾರ ಘೊಷಿಸಿತ್ತು.

    ಜಿಲ್ಲೆಯಲ್ಲಿ ಹಾನಿಗೊಳಗಾದ ಮನೆಗಳನ್ನು ಮೂರು ವರ್ಗದಲ್ಲಿ ವಿಂಗಡಿಸಿತ್ತು. ಅದರಲ್ಲಿ ಎ ವರ್ಗದ (ಸಂಪೂರ್ಣ ಹಾನಿ) 23, ಬಿ ವರ್ಗದ (ತೀವ್ರ ಹಾನಿ) 1,362, ಸಿ ವರ್ಗದ (ಭಾಗಶಃ ಹಾನಿ) 1,057 ಮನೆಗಳು ಸೇರಿ ಒಟ್ಟು 2,442 ಮನೆಗಳಿಗೆ ಹಾನಿಯಾಗಿತ್ತು. ಈ ಮನೆಗಳಿಗೆ ಎ ವರ್ಗಕ್ಕೆ 5, ಬಿ ವರ್ಗಕ್ಕೆ 3 ಲಕ್ಷ, ಸಿ ವರ್ಗಕ್ಕೆ 1 ಲಕ್ಷ ರೂ.ಗಳ ಪರಿಹಾರದಂತೆ ಒಟ್ಟು 74.53 ಕೋಟಿ ರೂ.ಗಳ ಪರಿಹಾರ ವಿತರಿಸಬೇಕಿತ್ತು. ಆದರೆ, ಈವರೆಗೆ ಫಲಾನುಭವಿಗಳಿಗೆ ಸರ್ಕಾರದಿಂದ ಬಿಡುಗಡೆಗೊಂಡಿದ್ದು ಕೇವಲ 80 ಲಕ್ಷ ರೂಪಾಯಿ ಮಾತ್ರ.

    ಜನ, ಜಾನುವಾರು ಸಾವಿಗೆ ಪರಿಹಾರ: ಅತಿವೃಷ್ಟಿ ಹಾಗೂ ನೆರೆಯ ಹೊಡೆತಕ್ಕೆ ಸಿಲುಕು ನದಿಗಳಲ್ಲಿ ತೇಲಿ ಹೋದ ಹಾಗೂ ಮನೆ ಬಿದ್ದು ಮೃತಪಟ್ಟ 8 ಜನರಿಗೆ ತಲಾ 4 ಲಕ್ಷ ರೂಪಾಯಿಯಂತೆ 32 ಲಕ್ಷ, 5 ಜಾನುವಾರುಗಳ ಸಾವಿಗೆ 1.25 ಲಕ್ಷ ರೂ. ಪರಿಹಾರ ಪೂರ್ಣ ಪ್ರಮಾಣದಲ್ಲಿ ಸಿಕ್ಕಿದೆ. ಆದರೆ ಇನ್ನುಳಿದಂತೆ ಬೆಳೆ ಹಾಗೂ ಮನೆ ಹಾನಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ.

    ಕಳೆದ ಸಲ ಭಾರಿ ಮಳೆಗೆ ಜಿಲ್ಲೆಯಲ್ಲಿ 447 ಕೋಟಿ ರೂ. ಸರ್ಕಾರಿ ಆಸ್ತಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ವರದಿ ಕಳಿಸಿತ್ತು. ಮುಖ್ಯವಾಗಿ ಲೋಕೋಪಯೋಗಿ ಇಲಾಖೆಯ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳಿಗೆ 210 ಕೋಟಿ ರೂ. ಹೆಸ್ಕಾಂಗೆ 13 ಲಕ್ಷ ರೂ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ 28.35 ಕೋಟಿ ರೂ., ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳಿಗೆ 11.82 ಕೋಟಿ, ಸಣ್ಣ ನೀರಾವರಿ ಇಲಾಖೆಗೆ 37ಕೋಟಿ ರೂ. ಹಾನಿಯಾಗಿದೆ ಎಂದು ವರದಿ ನೀಡಲಾಗಿತ್ತು. ಈ ವರ್ಷ ಮಾರ್ಚ್ ಅಂತ್ಯದ ಹೊತ್ತಿಗೆ 25.99 ಕೋಟಿ ರೂ.ಗಳನ್ನು ಮಾತ್ರ ಹಾನಿಯ ದುರಸ್ತಿ ಕಾಮಗಾರಿಗಳಿಗಾಗಿ ನೀಡಲಾಗಿದೆ. ಆದರೆ, ಯಾವುದೇ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಪುನರ್ ನಿರ್ವಣಕ್ಕೆ ಅನುದಾನ ಬಿಡುಗಡೆಗೊಂಡಿಲ್ಲ.

    ಬೆಳೆ ಪರಿಹಾರವೂ ಅಲ್ಪ: ಕಳೆದ ವರ್ಷ ಅತಿವೃಷ್ಟಿಯಿಂದ 30,617 ಹೆಕ್ಟೇರ್​ನಷ್ಟು ಕೃಷಿ ಬೆಳೆ, 1,685 ಹೆಕ್ಟೇರ್​ನಷ್ಟು ತೋಟಗಾರಿಕೆ ಬೆಳೆಗೆ ಹಾನಿಯಾಗಿತ್ತು. ಈ ಹಾನಿಯ ಅಂದಾಜು ಮೊತ್ತ 23 ಕೋಟಿ ರೂ.ಗಳಷ್ಟಾಗಿದೆ ಎಂದು ಜಿಲ್ಲಾಡಳಿತ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಿತ್ತು. ಎನ್​ಡಿಆರ್​ಎಫ್ ಮಾರ್ಗಸೂಚಿಯಂತೆ ಕೃಷಿ ಬೆಳೆಗೆ ಪ್ರತಿ ಹೆಕ್ಟೇರ್​ಗೆ 6800ರೂ., ತೋಟಗಾರಿಕೆ ಬೆಳೆಗೆ ಪ್ರತಿ ಹೆಕ್ಟೇರ್​ಗೆ 18 ಸಾವಿರ ರೂ. ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗಬೇಕಿತ್ತು. ಆದರೆ, ಈವರೆಗೆ ಜಮೆಯಾಗಿದ್ದು, ಒಟ್ಟು 338 ರೈತರಿಗೆ ಒಟ್ಟು 10.44 ಲಕ್ಷ ರೂ. ಪರಿಹಾರ ನೀಡಲಾಗಿದೆ.

    ಕಳೆದ ವರ್ಷದ ಪ್ರಕೃತಿ ವಿಕೋಪದಿಂದ ಹಾನಿಯಾದವರಿಗೆ ಸರ್ಕಾರ ಹಂತಹಂತವಾಗಿ ಪರಿಹಾರದ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತಿದೆ. ರಸ್ತೆ, ಸೇತುವೆ, ಕಟ್ಟಡಗಳ ಹಾನಿಯ ದುರಸ್ತಿಗೂ ಅನುದಾನ ಬಿಡುಗಡೆಗೊಂಡಿದೆ. ಅದರಂತೆ ಕಾಮಗಾರಿಗಳು ಕೆಲವು ಪೂರ್ಣಗೊಂಡಿದ್ದು, ಇನ್ನು ಕೆಲವು ಚಾಲ್ತಿಯಲ್ಲಿವೆ.

    | ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts