More

    ಕಾಫಿ ಹಣ್ಣಿಗೆ ಮುಗಿಬಿದ್ದ ಮಂಗಗಳು

    ಮೂಡಿಗೆರೆ: ಮಲೆನಾಡಿನ ಕಾಫಿ ತೋಟಗಳಲ್ಲಿ ಅರೇಬಿಕಾ ಕಾಯಿ ಹಣ್ಣಾಗಲು ಆರಂಭಿಸಿದ್ದು, ಕಾಫಿ ಹಣ್ಣುಗಳನ್ನೇ ಮಂಗಗಳು ತಿನ್ನಲಾರಂಭಿಸಿವೆ. ಹೀಗಾಗಿ ಕೊಯ್ಲಿನ ಹಂತದಲ್ಲಿ ಕಾಫಿ ಗಿಡದಲ್ಲಿ ಹಣ್ಣು ಕಡಿಮೆಯಾಗುತ್ತಿದ್ದು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ.

    ಗೋಣಿಬೀಡು, ಕಸ್ಕೇಬೈಲು, ಚಿನ್ನಿಗ, ಕನ್ನೇಹಳ್ಳಿ, ಕಿರುಗುಂದ, ದೇವವೃಂದ, ಜಾಣಿಗೆ, ಊರುಬಗೆ, ಬೈರಾಪುರ, ಹೊಸಕೆರೆ, ಮೂಲರಹಳ್ಳಿ, ತತ್ಕೊಳ, ಕುಂದೂರು, ಮಾಕೋನಹಳ್ಳಿ, ನಂದಿಪುರ, ಬಣಕಲ್, ಬಾಳೂರು, ಕಳಸ ಭಾಗದ ಕಾಫಿ ತೋಟಗಳಲ್ಲಿ ಅರೇಬಿಕಾ ಕಾಫಿ ಹಣ್ಣು ಕಟಾವಿಗೆ ಬಂದಿವೆ.

    ಇದೂವರೆಗೆ ಮೀಸಲು ಅರಣ್ಯ ಪ್ರದೇಶದಲ್ಲಿರುತ್ತಿದ್ದ ಮಂಗಗಳು ಆಹಾರ ಅರಸಿ ಕಾಫಿ ತೋಟಕ್ಕೆ ಬರುತ್ತಿವೆ. ಈ ಹಿಂದೆ ಅರಣ್ಯ ಪ್ರದೇಶದ ಬದಿಯ ತೋಟಗಳಿಗೆ ಮಾತ್ರ ಬರುತ್ತಿದ್ದವು. ಆಗ ಬೆಳೆಗಾರರು ಪಟಾಕಿ ಸಿಡಿಸಿ ಬೆದರಿಸಿ ಓಡಿಸುತ್ತಿದ್ದರು. ಈಗ ಪಟಾಕಿ ಶಬ್ಧಕ್ಕೆ ಹೆದರುತ್ತಿಲ್ಲ. ಬಹುತೇಕ ಕಾಫಿ ತೋಟ ಮತ್ತು ಜನವಸತಿ ಪ್ರದೇಶದಲ್ಲೇ ನಿರಂತರವಾಗಿ ಅಡ್ಡಾಡುತ್ತವೆ.

    ಮಂಗಗಳು ತಂಡೋಪ ತಂಡವಾಗಿ ಬಂದು ಕಾಫಿ ಹಣ್ಣು ತಿನ್ನುವುದಲ್ಲದೆ, ಕಾಫಿ ಕಾಯಿಗಳನ್ನೂ ಕಿತ್ತು ಹಾಳು ಮಾಡುತ್ತಿವೆ. ಕಿತ್ತಳೆ, ಅನಾನಸ್ ಬೆಳೆಯನ್ನೂ ತಿನ್ನುತ್ತಿವೆ. ಬಾಳೆ, ಏಲಕ್ಕಿ, ಅಡಕೆ, ತೆಂಗಿನ ಗಿಡಗಳ ಸುಳಿ ತಿಂದು ಗಿಡವನ್ನೇ ನಾಶ ಮಾಡುತ್ತಿವೆ. ಮಂಗಗಳ ಉಪಟಳ ಹೆಚ್ಚಾಗಿರುವುದರಿಂದ ಅವುಗಳನ್ನು ಗುತ್ತಿಗೆ ಆಧಾರದಲ್ಲಿ ಹಿಡಿದು ಸಾಗಿಸುವವರನ್ನು ಕರೆಸಿದಾಗ ಅವರು, ಬಲೆ ಬೀಸಿ ಹಿಡಿದು ವಾಹನಗಳಲ್ಲಿ ತುಂಬಿಸಿ ಕೊಂಡೊಯ್ದು ಬೇರೆ ಊರಿಗೆ ಬಿಡುತ್ತಾರೆ. ಇದರಿಂದ ಎಲ್ಲೆಡೆ ಮಂಗಗಳ ಕಾಟ ಹೆಚ್ಚಾಗಿದೆ.

    ಹೆದರಿಸಲು ಹುಲಿ ಬ್ಯಾನರ್: ಮಂಗಗಳ ಹಾವಳಿ ತಪ್ಪಿಸಲು ತೋಟಗಳಲ್ಲಿ ಹುಲಿ ಬ್ಯಾನರ್ ಅಳವಡಿಸಿ ಹೆದರಿಸುವ ಪ್ರಯತ್ನ ನಡೆದಿದೆ. ಹುಲಿಯು ಮಂಗಗಳನ್ನು ಹಿಡಿಯುತ್ತಿರುವ ಚಿತ್ರದ ಬ್ಯಾನರ್​ಗಳನ್ನು ಬೆಳೆಗಾರರು ಕಾಫಿ ತೋಟದಲ್ಲಿ ಅಳವಡಿಸುತ್ತಿದ್ದಾರೆ. ಬ್ಯಾನರ್ ನೋಡಿ ಮಂಗಗಳು ತೋಟದಿಂದ ಪಲಾಯನ ಮಾಡುತ್ತವೆ. ಇಂತಹ ಬ್ಯಾನರ್​ಗಳು ಮಾತ್ರ ಸದ್ಯಕ್ಕೆ ಬೆಳೆಗಾರರ ನೆರವಾಗುತ್ತಿವೆ.

    ಕಜ್ಜೇಹಳ್ಳಿ 3 ಎಕರೆ ಜಾಗದಲ್ಲಿ ಏಲಕ್ಕಿ ಬೆಳೆದಿದ್ದೆ. ಅಲ್ಲಿಗೆ 50ರಿಂದ 60 ಮಂಗಗಳು ಒಮ್ಮೆಲೆ ದಾಳಿ ನಡೆಸಿ ನಾಶಪಡಿಸಿವೆ. ತೋಟದಲ್ಲಿ ಕಾಫಿ ಹಣ್ಣು ತಿನ್ನುತ್ತಿವೆ. ಹಾಗಾಗಿ ಕಾಫಿ ಕಾಯಿ ಇರುವಾಗಲೇ ಕಟಾವು ಮಾಡಲು ಯೋಚಿಸಿದ್ದೇವೆ. ಮಂಗಗಳಿಂದ ಕಾಫಿ ಮತ್ತಿತರೇ ಬೆಳೆ ರಕ್ಷಿಸಲು ವನ್ಯ ಮೃಗಗಳು ಮಂಗಗಳನ್ನು ಹಿಡಿದು ತಿನ್ನುವ ಚಿತ್ರವಿರುವ ಬ್ಯಾನರ್ ಕಟ್ಟುತ್ತಿದ್ದೇನೆ ಎನ್ನುತ್ತಾರೆ ಕನ್ನೇಹಳ್ಳಿ ಗ್ರಾಮದ ಕಾಫಿ ಬೆಳೆಗಾರ ಎಂ.ಸಿ.ಆದರ್ಶ.

    ಕಾಫಿ ತೋಟವನ್ನು ಕಾಡುಪ್ರಾಣಿಗಳು ನಾಶಪಡಿಸುತ್ತಿವೆ. ಕಾಫಿ ಹಣ್ಣುಗಳನ್ನು ಮಂಗಗಳು ತಿನ್ನುವುದು ಸಾಮಾನ್ಯ. ಇದಕ್ಕೆ ಕಾಫಿ ಮಂಡಳಿ ಅಥವಾ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ. ಬೆಳೆಗಾರರೇ ತೋಟ ರಕ್ಷಿಸಿಕೊಳ್ಳಬೇಕು. ಮಂಗಗಳನ್ನು ಹಿಡಿಯಲು ಯಾವುದೇ ತಂತ್ರಜ್ಞಾನವಿಲ್ಲ. ಅವುಗಳನ್ನು ಕೊಲ್ಲಲು ಸಾಧ್ಯವಿಲ್ಲ. ಇತರೇ ಪ್ರಾಣಿಗಳು ತೋಟಕ್ಕೆ ಬಾರದಂತೆ ತಡೆಯಲು ಬೆಳೆಗಾರರು ತೋಟಕ್ಕೆ ಐಬೆಕ್ಸ್ ಬೇಲಿ ನಿರ್ವಿುಸಿಕೊಳ್ಳಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts