More

    ಸಂಚಾರಿ ಸಾಣೆ ಯಂತ್ರ.. ಉಡುಪಿಯಲ್ಲಿ ಜೀವನ ಮಂತ್ರ..

    ಆಂಧ್ರ ಮೂಲಿಗನ ಕುಲಕಸುಬು | ಪರಊರಿನಲ್ಲಿ ಜೀವನ ಕಂಡ ಹೈದರ್​ಆಲಿ

    ಪ್ರಶಾಂತ ಭಾಗ್ವತ, ಉಡುಪಿ
    ಯಾಂತ್ರಿಕ ಜೀವನ ಶೈಲಿಯಿಂದ ಅನೇಕ ಸಾಂಪ್ರದಾಯಿಕ ಕುಲಕಸುಬುಗಳು ನಶಿಸುತ್ತಿದೆ. ಆದರೆ, ಇಂದಿಗೂ ಸಹ ಕೆಲವರು ತಮ್ಮ ಮನೆತನದ ಕೆಲಸ ಮುಂದುವರಿಸಿದ್ದಾರೆ. ಅಂತಹವರಲ್ಲಿ ಕತ್ತಿ, ಚೂರಿಗಳಿಗೆ ಸಾಣೆ ಹಾಕುವವರು ಸಮಾಜಕ್ಕೆ ಆಸರೆಯಾಗಿದ್ದಾರೆ.

    ಆಂಧ್ರ ಪ್ರದೇಶದ ತಿರುಪತಿ ಕಾಳಹಸ್ತಿ ಗ್ರಾಮದ ಹೈದರ್​ಆಲಿ ರಾಣಿಪೇಟ್​ ಎಂಬ ಸಾಣೆಕಾರ ಕಳೆದ 27 ವರ್ಷದಿಂದ ಉಡುಪಿಯಲ್ಲಿ ಸಾಣೆ ಕಾರ್ಯದಿಂದಲೇ ಬದುಕು ಸಾಗಿಸುತ್ತಿದ್ದಾರೆ. ಕೃಷಿಕರಿಗೆ, ಗೃಹಿಣಿಯರಿಗೆ ಹಾಗೂ ಹೋಟೆಲ್​ನವರಿಗೆ ಪ್ರಯೋಜನಕಾರಿ ಆಗಿದ್ದಾರೆ.

    ಊರುಗಳಿಗೆ ಅಲೆದಾಟ

    ಅಡುಗೆ ಮನೆಯಲ್ಲಿ ದೈನಂದಿನ ಕೆಲಸಗಳಿಗೆ ಅವಶ್ಯಕವಾದ ಚೂರಿ, ಕತ್ತಿ, ಮೆಟಗತ್ತಿ, ಹೆರಮಣೆ, ಕತ್ತರಿ ಇವುಗಳೆಲ್ಲ ನಿರಂತರ ಬಳಕೆಯಿಂದ ಬೊಡ್ಡಾಗುತ್ತವೆ. ಅದರಂತೆ ಕೃಷಿ ಕಾರ್ಯಕ್ಕೆ ಬಳಸುವ ಗುದ್ದಲಿ, ಪಿಕಾಸು ಇನ್ನಿತರ ಕಬ್ಬಿಣದ ಸಾಮಗ್ರಿಗಳೂ ಸಹ ಹರಿತ ಕಳೆದುಕೊಳ್ಳುತ್ತವೆ. ಅವುಗಳಿಗೆಲ್ಲ ಸಾಣೆ ಹಾಕಿ ಮತ್ತೆ ಹರಿತ ಮಾಡಿಕೊಡುವ ಕೆಲಸಕ್ಕಾಗಿ ಹೈದರ್​ಆಲಿ ಪ್ರತಿದಿನವೂ ಬೇರೆ ಬೇರೆ ಊರುಗಳಿಗೆ ಅಲೆದಾಟ ನಡೆಸುತ್ತಾರೆ.

    HyderAali2
    ಸಾಣೆ ಬಳಿಕ ಹರಿತಗೊಂಡ ಚಾಕುಗಳು.

    4 ಜನರ ತಂಡ

    ಹೈದರ್​ಆಲಿ ಸೇರಿದಂತೆ ಒಟ್ಟು 4 ಜನರು ಅನ್ಯ ರಾಜ್ಯದಿಂದ ಉಡುಪಿಗೆ ಬಂದು ಸಾಣೆ ಕೆಲಸದಿಂದಲೇ ಜೀವನ ಸಾಗಿಸುತ್ತಿದ್ದಾರೆ. ಉಡುಪಿಯ ಮಠದಬೆಟ್ಟು ಬಳಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಮಾಡಿರುವ ಇವರು, ಹೆಗಲಿಗೆ ಸಾಣೆ ಯಂತ್ರ ಹಾಕಿಕೊಂಡು, ‘ಕತ್ರಿ ಸಾಣೆ… ಚೂರಿ ಸಾಣೆ…’ ಎಂದು ಕೂಗುತ್ತ ಸಂಚರಿಸುತ್ತಾರೆ. ಬಸ್​ ಮೂಲಕ ಒಂದೊಂದು ಹಳ್ಳಿಗೆ ತೆರಳಿ ಬೆಳಗ್ಗೆಯಿಂದ ಸಂಜೆಯವರೆಗೆ ಸಾಣೆ ಕೆಲಸದಿಂದ ಒಂದಿಷ್ಟು ಕಮಾಯಿ ಮಾಡಿಕೊಂಡು ಉಡುಪಿಗೆ ಮರಳುತ್ತಾರೆ.

    ಹೋಟೆಲ್​ಗಳಿಗೆ ಭೇಟಿ

    ಹೋಟೆಲ್​ನವರಿಗಂತೂ ಸಾಣೆಕಾರರ ಅಗತ್ಯತೆ ಹೆಚ್ಚಿರುತ್ತದೆ. ಪ್ರತಿದಿನವೂ ಅಧಿಕ ಪ್ರಮಾಣದಲ್ಲಿ ತರಕಾರಿ ಕತ್ತರಿಸುವುದರಿಂದ ಅವರ ಚಾಕುಗಳಿಗೆ 2 ವಾರ ಅಥವಾ ತಿಂಗಳಿಗೊಮ್ಮೆ ಸಾಣೆ ಹಾಕಬೇಕಾಗುತ್ತದೆ. ಹೀಗಾಗಿ ಹೋಟೆಲ್​ನವರಿಗೂ ಸಹ ಸಾಣೆ ಹಾಕುವ ಹೈದರ್​ಆಲಿ ಅಚ್ಚುಮೆಚ್ಚಿನವನಾಗಿದ್ದು, ಆಗಾಗ ಹೋಟೆಲ್​ಗಳಿಗೆ ಭೇಟಿ ಕೊಡುವುದು ಕಡ್ಡಾಯವಾಗಿದೆ.

    ಮಾದರಿ ಕೆಲಸ

    ಹೋಟೆಲ್​, ಮನೆ ಹಾಗೂ ಕೃಷಿಕರ ಹೊಲಗಳಲ್ಲಿ ಸಾಣೆ ಯಂತ್ರದ ವ್ಹೀಲ್​ ಪೆಡಲ್​ ತುಳಿದು, ವೃತ್ತಾಕಾರದ ಕಲ್ಲು ತಿರುಗಿಸುತ್ತ ಚಾಕು-ಕತ್ತಿಗಳಿಗೆ ಸಾಣೆ ಹಾಕುವ ಇವರ ಕಾರ್ಯ ನಿಜಕ್ಕೂ ಮಾದರಿ. ಸಮಾಜಕ್ಕೆ ಸಾಣೆಕಾರರ ಅಗತ್ಯವೂ ಎಷ್ಟಿದೆ ಎನ್ನುವುದು ಅವರ ಕಾಯಕದಿಂದ ಅರಿವಿಗೆ ಬರುತ್ತದೆ. ನಿರುದ್ಯೋಗ ಸಮಸ್ಯೆಯ ಪರ್ವತವೇ ಸೃಷ್ಟಿಯಾಗಿರುವ ಇಂದಿನ ದಿನಗಳಲ್ಲಿ ಕುಲಕಸುಬುಗಳಿಗೆ ಎಷ್ಟೊಂದು ಮಹತ್ವ ಇದೆ ಎನ್ನುವುದಕ್ಕೆ ಸಾಣೆ ಕೆಲಸವೂ ಸಾಕ್ಷ್ಯವಾಗಿದೆ.

    HyderAali3
    ಸಂಚಾರಿ ಸಾಣೆ ಯಂತ್ರದೊಂದಿಗೆ ಹೈದರ್ ಆಲಿ ರಾಣಿಪೇಟ್.

    ರಾಜರ ಕಾಲದಿಂದ ಸಾಗಿ ಬಂದ ಕಾಯಕ

    ರಾಜರ ಕಾಲದಿಂದಲೂ ನಮ್ಮ ಪೂರ್ವಿಕರು ಈ ಕೆಲಸ ಮಾಡಿಕೊಂಡು ಬಂದಿದ್ದಾರೆ. ಖಡ್ಗ, ಕತ್ತಿ ಸೇರಿದಂತೆ ಯುದ್ಧ ಸಾಮಗ್ರಿ ತಯಾರಿಸುವುದು ಹಾಗೂ ಹರಿತ ಕಳೆದುಕೊಂಡ ಶಸ್ತ್ರಗಳಿಗೆ ಸಾಣೆ ಹಾಕುತ್ತಿದ್ದರು. ನನ್ನ ಚಿಕ್ಕಪ್ಪ ಹಾಗೂ ದೊಡ್ಡಪ್ಪ ಅವರೂ ಸಹ ಆಂಧ್ರದಿಂದ ಆರೇಳು ದಶಕದ ಹಿಂದೆ ಉಡುಪಿಗೆ ಬಂದು ಸಾಣೆ ಕೆಲಸ ಮಾಡುತ್ತಿದ್ದರು. ಅವರಂತೆ ನಾನೂ ಸಹ ಉಡುಪಿಯಲ್ಲಿ ನಮ್ಮ ಮನೆತನದ ಕೆಲಸ ಮುಂದುವರಿಸಿದ್ದೇನೆ. ದಿನಕ್ಕೆ 800ರಿಂದ 1,200 ರೂ. ಗಳಿಕೆ ಆಗುತ್ತದೆ. ಇದರಲ್ಲೇ ಊಟ-ತಿಂಡಿ, ಸಂಚಾರದ ಖರ್ಚು ಮಾಡಬೇಕಿದೆ. ಜೀವನಕ್ಕೆ ತೊಂದರೆ ಇಲ್ಲ ಎನ್ನುತ್ತಾರೆ ಕಾಯಕಯೋಗಿ ಹೈದರ್​ಆಲಿ ರಾಣಿಪೇಟ್​.

    ತರಕಾರಿ ಕತ್ತರಿಸಲು ನಮ್ಮ ಬಳಿ ಏಳೆಂಟು ಪ್ರಕಾರದ ಚಾಕುಗಳಿರುತ್ತವೆ. ನಮಗೆ ಬೇಕಾದ ರೀತಿಯಲ್ಲಿ ಕಬ್ಬಿಣದಿಂದ ಮಾಡಿಸಿಕೊಂಡಿರುತ್ತೇವೆ. ದಿನವೂ ಬಳಕೆಯಾಗುವುದರಿಂದ ಅವು ಬೊಡ್ಡಾಗುತ್ತವೆ. ನಾವು ಕಲ್ಲಿಗೆ ಉಜ್ಜಿದರೆ ಅವು ಹರಿತ ಆಗುವುದಿಲ್ಲ. ಹೀಗಾಗಿ ಎಲ್ಲ ಹೋಟೆಲ್​ನವರಿಗೂ ಸಾಣೆಕಾರರ ಅಗತ್ಯತೆ ತುಂಬ ಇರುತ್ತದೆ.

    ಪ್ರಶಾಂತ ಕೆ.ಎನ್​.
    ಕ್ಯಾಶಿಯರ್​, ದುರ್ಗಾಪ್ರಸಾದ್​ ಹೋಟೆಲ್​, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts