More

    ಕರ್ತವ್ಯಲೋಪ ವಾದರೆ ಕ್ರಿಮಿನಲ್ ಕೇಸ್

    ಗದಗ: ಹೊರಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿರುವ ನೌಕರರಿಗೆ ಭವಿಷ್ಯ ನಿಧಿ ಸೇರಿ ಇತರೆ ಸೌಲಭ್ಯಗಳನ್ನು ನೀಡುತ್ತಿರುವ ಬಗ್ಗೆ ಅನುಮಾನವಿದ್ದು, ಇದರಲ್ಲಿ ಏನಾದರೂ ಕರ್ತವ್ಯಲೋಪವಾಗಿದ್ದರೆ ಟೆಂಡರ್ ಪಡೆದಿರುವ ಏಜೆನ್ಸಿಯನ್ನು ಕಪ್ಪು ಪಟ್ಟಿಯಲ್ಲಿಟ್ಟು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಮತ್ತು ಸಂಬಂಧಿಸಿದ ಇಲಾಖೆ ಮುಖ್ಯಸ್ಥರನ್ನು ಅಮಾನತು ಮಾಡಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ ಎಚ್ಚರಿಕೆ ನೀಡಿದರು.

    ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಪಂ ತ್ರೖೆಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

    ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಕುರಿತು ಚರ್ಚೆ ಸಂದರ್ಭದಲ್ಲಿ ಹೊರಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿರುವ ನೌಕರರ ವಿಷಯವನ್ನು ಸಚಿವ ಸಿ.ಸಿ. ಪಾಟೀಲ ಪ್ರಸ್ತಾಪಿಸಿದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಷ್ಟು ಜನ ಹೊರಗುತ್ತಿಗೆ ನೌಕರರು ಇದ್ದಾರೆ? ಅವರಿಗೆ ಸಂಬಳ ಎಷ್ಟು ಕೊಡುತ್ತೀರಿ? ಸರ್ಕಾರ ಒಬ್ಬರಿಗೆ ಎಷ್ಟು ಹಣವನ್ನು ಪಾವತಿಸುತ್ತದೆ. ಏಜೆನ್ಸಿಯವರು ನೌಕರನಿಗೆ ಎಷ್ಟು ಸಂಬಳ ನೀಡುತ್ತಾರೆ ಎಂದು ಪ್ರಶ್ನಿಸಿದರು.

    ಸಚಿವರ ಪ್ರಶ್ನೆಗೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪವರ, ಹೊರಗುತ್ತಿಗೆ ನೌಕರರಗೆ ಮಾಸಿಕ ತಲಾ 15,400 ರೂ. ನೀಡಲಾಗುತ್ತದೆ. ಪಿಎಫ್, ಇಎಸ್​ಐ ಕಡಿತವಾಗಿ 9,900 ರೂ. ನೀಡುತ್ತಾರೆ. ಇಲಾಖೆಯಲ್ಲಿ ಒಟ್ಟು 120 ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ ಎಂದು ಸಭೆ ವಿವರಿಸಿದರು.

    ಏಜೆನ್ಸಿಯವರು ಎಲ್ಲ ಹೊರಗುತ್ತಿಗೆ ನೌಕರರಿಗೆ ಪಿಎಫ್, ಇಎಸ್​ಐ ಕಟ್ಟುತ್ತಾರೆ ಎಂಬುದನ್ನು ಗಮನಿಸಿದ್ದೀರಾ ಎಂದು ಸಚಿವರು ಪ್ರಶ್ನಿಸಿದಾಗ, ಅಧಿಕಾರಿ ಪ್ರಶಾಂತ ತಡವರಿಸಿ, ‘ಹೌದು ಸರ್, ಎಲ್ಲ ನೌಕರರಿಗೂ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಅದನ್ನು ಪರಿಶೀಲಿಸಿದ ನಂತರವೇ ಚೆಕ್​ಗೆ ಸಹಿ ಹಣ ಪಾವತಿಗೆ ಕಳಿಸಲಾಗುತ್ತಿದೆ’ ಎಂದು ಉತ್ತರಿಸಿದರು.

    ಆಗ ಸಚಿವರು, ‘ಪ್ರಶಾಂತ ಅವರೇ ನೀವು ಜಬಾಬ್ದಾರಿಯಿಂದ ಉತ್ತರ ನೀಡುತ್ತಿಲ್ಲ. ಅದರಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಸಾಧ್ಯತೆ ಇರುತ್ತದೆ. ನೀವು ಸರಿಯಾಗಿ ಕೆಲಸ ಮಾಡಿದ್ದರೆ ತೊಂದರೆ ಇಲ್ಲ. ಈ ವಿಷಯದಲ್ಲಿ ಏನಾದರೂ ಅವ್ಯವಹಾರ ಆಗಿದ್ದರೆ, ನೌಕರರಿಗೆ ಸೌಲಭ್ಯಗಳನ್ನು ನೀಡಿರದಿದ್ದರೆ ಮೊದಲು ನೀವೇ ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

    ಹೊರಗುತ್ತಿಗೆ ಆಧಾರದಡಿ ನೌಕರರನ್ನು ನೇಮಕ ಮಾಡಿಕೊಳ್ಳುವುದು ಮಾಫಿಯಾ ಆಗಿ ಮಾರ್ಪಟ್ಟಿದೆ. ಎಲ್ಲ 34 ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸೌಲಭ್ಯಗಳನ್ನು ನೀಡಿರುವ ಬಗ್ಗೆ ವರದಿ ನೀಡಬೇಕು ಎಂದು ಜಿಪಂ ಸಿಇಒ ಭರತ್ ಅವರಿಗೆ ಸಚಿವರು ಸೂಚನೆ ನೀಡಿದರು.

    ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಡಿಸಿ ಸುಂದರೇಶಬಾಬು, ಎಸ್ಪಿ ಯತೀಶ್, ಜಿಪಂ ಸಿಇಒ ಭರತ್, ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ, ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ ಇದ್ದರು.

    ಪಶು ವೈದ್ಯಕೀಯ ಕಾಲೇಜ್ ಪ್ರಾಚಾರ್ಯರ ವಿರುದ್ಧ ಆಕ್ರೋಶ

    ಮೂಲಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಇಲ್ಲಿಯವರೆಗೆ ಯುಜಿಸಿ ಮಾನ್ಯತೆ ಸಿಕ್ಕಿಲ್ಲ. ಇದರಿಂದ ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅತಂತ್ರರಾಗುತ್ತಾರೆ. ಈ ವಿಷಯವನ್ನು ಕಾಲೇಜ್​ನ ಪ್ರಾಚಾರ್ಯ ನಮ್ಮ ಗಮನಕ್ಕೆ ತಂದಿಲ್ಲ. ಕಾಲೇಜ್ ಆರಂಭವಾಗಿ ನಾಲ್ಕು ವರ್ಷವಾದರೂ ಅವರೇನು ಮಾಡುತ್ತಿದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು. ಕಾಲೇಜ್ ಪ್ರಾಚಾರ್ಯ ನಾಗರಾಜ ಸಭೆಗೆ ಗೈರಾಗಿದ್ದರಿಂದ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಮಕ್ಕಳ ಭವಿಷ್ಯದ ಬಗ್ಗೆ ಅವರಿಗೆ ಚಿಂತೆಯೇ ಇಲ್ಲವೆಂದು ಅನಿಸುತ್ತದೆ. ಈ ಕುರಿತು ಬೀದರ್ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಡೀನ್ ಜತೆಗೆ ರ್ಚಚಿಸಿ ಮೂಲಸೌಲಭ್ಯ ಕಲ್ಪಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಜಿಲ್ಲಾಧಿಕಾರಿ ಅವರು ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಜತೆ ರ್ಚಚಿಸಿ ಸಮಸ್ಯೆ ಬಗೆಹರಿಸಬೇಕು ಎಂದು ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts