More

    ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್‌ಗೆ ಬಿಟ್ ಕಾಯಿನ್ ಹೊಸ ಅಸ್ತ್ರ!

    ನವದೆಹಲಿ: ಐಸಿಸಿ ನೀತಿಸಂಹಿತೆ ಉಲ್ಲಂಘನೆಯ ಬಗ್ಗೆ ಜಿಂಬಾಬ್ವೆಯ ಮಾಜಿ ನಾಯಕ ಹೀತ್ ಸ್ಟ್ರೀಕ್ ತಪ್ಪೊಪ್ಪಿಗೆಯಿಂದ ಕ್ರಿಕೆಟ್ ಭ್ರಷ್ಟಾಚಾರದಲ್ಲಿನ ಕೆಲವು ಆಘಾತಕಾರಿ ಹೊಸಮುಖಗಳು ಬೆಳಕಿಗೆ ಬಂದಿವೆ. ಮ್ಯಾಚ್ ಫಿಕ್ಸಿಂಗ್ ಆಮಿಷಕ್ಕೆ ಬುಕ್ಕಿಗಳು ಗೌಪ್ಯಹಣವನ್ನು (ಕ್ರಿಪ್ಟೋ ಕರೆನ್ಸಿ) ಹೊಸ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂಬ ಅಂಶವನ್ನು ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕ ಕಂಡುಕೊಂಡಿದೆ.

    ಜಿಂಬಾಬ್ವೆ, ಬಾಂಗ್ಲಾದೇಶ ಮತ್ತು ಐಪಿಎಲ್, ಅಫ್ಘಾನಿಸ್ತಾನ, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ತಂಡಗಳ ಕೋಚ್ ಆಗಿದ್ದ ಸಮಯದಲ್ಲಿ ಭಾರತೀಯ ಬುಕ್ಕಿಯೊಬ್ಬನಿಗೆ ಆಂತರಿಕ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದೆ ಎಂದು ಸ್ಟ್ರೀಕ್ ತಪ್ಪೊಪ್ಪಿಕೊಂಡಿದ್ದು, ಐಸಿಸಿ 8 ವರ್ಷಗಳ ನಿಷೇಧ ಶಿಕ್ಷೆಯನ್ನೂ ವಿಧಿಸಿದೆ. ಜಿಂಬಾಬ್ವೆ ಕಂಡ ಅತ್ಯುತ್ತಮ ವೇಗದ ಬೌಲರ್ ಎನಿಸಿದ್ದ ಸ್ಟ್ರೀಕ್, 2016-18ರಲ್ಲಿ ತಾವು ಕೋಚ್ ಆಗಿದ್ದ ವಿವಿಧ ತಂಡಗಳಲ್ಲಿ ಫಿಕ್ಸಿಂಗ್ ಆಮಿಷ ಒಡ್ಡಲು ಅವಕಾಶ ಮಾಡಿಕೊಟ್ಟಿದ್ದರು ಎಂಬ ಆರೋಪದ ಮೇರೆಗೆ ಐಸಿಸಿಯಿಂದ ತನಿಖೆ ಎದುರಿಸಿದ್ದರು. ಪ್ರಕರಣದಲ್ಲಿ ಸ್ಟ್ರೀಕ್ ಒಟ್ಟು 5 ವಿಧದ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಖಚಿತಪಟ್ಟಿದೆ.

    ಇದನ್ನೂ ಓದಿ: ಮಿಂಚಿದ ಮ್ಯಾಕ್ಸ್‌ವೆಲ್, ಶಾಬಾಜ್ ಅಹ್ಮದ್; ಆರ್‌ಸಿಬಿಗೆ ಸತತ 2ನೇ ಜಯ

    ಬುಕ್ಕಿಗಳು ಮ್ಯಾಚ್ ಫಿಕ್ಸಿಂಗ್‌ಗೆ ನಗದು ಹಣವಲ್ಲದೆ, ಕಾರು, ಆಭರಣ ಮತ್ತು ದುಬಾರಿ ಮೊಬೈಲ್‌ಗಳ ಆಮಿಷ ಒಡ್ಡುತ್ತಿದ್ದರು ಎಂಬುದು ಇದುವರೆಗೆ ತಿಳಿದಿದ್ದ ಮಾಹಿತಿಯಾಗಿತ್ತು. ಇದೀಗ ಸ್ಟ್ರೀಕ್ ಪ್ರಕರಣದಿಂದ, ಬುಕ್ಕಿಗಳು ಹಣ ಪಾವತಿಗಾಗಿ ಬಿಟ್ ಕಾಯಿನ್‌ಗಳನ್ನೂ ಬಳಸುತ್ತಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ. 2018ರಲ್ಲಿ ಸ್ಟ್ರೀಕ್ 35 ಸಾವಿರ ಅಮೆರಿಕನ್ ಡಾಲರ್ ಮೌಲ್ಯದ ಬಿಟ್ ಕಾಯಿನ್ ಪಡೆದುಕೊಂಡಿದ್ದನ್ನು ಒಪ್ಪಿಕೊಂಡಿದ್ದರು. ಹವಾಲ ಹಣದಂತೆ ಬಿಟ್ ಕಾಯಿನ್‌ಗಳಿಂದ ಎದುರಾಗಿರುವ ಈ ಹೊಸ ಸವಾಲನ್ನು ನಿಭಾಯಿಸುವುದು ಕಠಿಣವಾಗಿದೆ ಎಂದು ಐಸಿಸಿ ಎಸಿಯು ಪ್ರಧಾನ ವ್ಯವಸ್ಥಾಪಕ ಅಲೆಕ್ಸ್ ಮಾರ್ಷಲ್ ತಿಳಿಸಿದ್ದಾರೆ.

    ಆರಂಭದಲ್ಲಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದ 47 ವರ್ಷದ ಸ್ಟ್ರೀಕ್ ಬಳಿಕ ತಪ್ಪೊಪ್ಪಿಕೊಂಡಿದ್ದರು. ಅವರು 1993ರಿಂದ 2005ರ ನಡುವೆ ಜಿಂಬಾಬ್ವೆ ಪರ 65 ಟೆಸ್ಟ್ ಮತ್ತು 189 ಏಕದಿನ ಪಂದ್ಯವಾಡಿ ಕ್ರಮವಾಗಿ 216 ಮತ್ತು 239 ವಿಕೆಟ್ ಕಬಳಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 1 ಶತಕ ಮತ್ತು ಏಕದಿನದಲ್ಲಿ 13 ಅರ್ಧಶತಕಗಳನ್ನೂ ಬಾರಿಸಿದ್ದರು. ಇನ್ನು 2029ರ ಮಾರ್ಚ್ 28ರ ಬಳಿಕವಷ್ಟೇ ಅವರು ಕ್ರಿಕೆಟ್ ಚಟುವಟಿಕೆಗಳಿಗೆ ಮರಳಬಹುದಾಗಿದೆ ಎಂದು ಐಸಿಸಿ ತಿಳಿಸಿದೆ.

    ಏನಿದು ಕ್ರಿಪ್ಟೋ ಕರೆನ್ಸಿ?
    ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಕ್ರಿಪ್ಟೋ ಕರೆನ್ಸಿ ಎಂದರೆ ವರ್ಚುವಲ್ ಹಣ. ಅಂಕ ಗಣಿತ ಪದ್ಧತಿಯಂತೆ ಲೆಕ್ಕಹಾಕುವ ಡಿಜಿಟಲ್ ಸಂಪತ್ತು ಇದಾಗಿರುತ್ತದೆ. ಈ ಹಣ ದೇಶದಲ್ಲಿ ಆರ್‌ಬಿಐ ಅಡಿಯಲ್ಲಿ ಬರುವ ಯಾವುದೇ ಬ್ಯಾಂಕ್‌ಗಳಲ್ಲಿ ಲೆಕ್ಕಕ್ಕೆ ಸಿಗುವುದಿಲ್ಲ. ಇದೊಂದು ಕಾನೂನುಬಾಹಿರವಾದ ಚಟುವಟಿಕೆ. ಒಟ್ಟಾರೆ ಸಾರಾಂಶ ರೂಪದಲ್ಲಿ ಹೇಳುವುದಾದರೆ, ಇದು ವಿಶ್ವದ 2 ಭಿನ್ನ ಪ್ರದೇಶಗಳಲ್ಲಿ ಕುಳಿತಿರುವ ವ್ಯಕ್ತಿಗಳ ನಡುವೆ ಯಾವುದೇ ಮಧ್ಯವರ್ತಿಗಳಿಲ್ಲದೆ ನಡೆಯುವ ಹಣಕಾಸು ವ್ಯವಹಾರ. ಒಂದು ಬಿಟ್ ಕಾಯಿನ್ ಸದ್ಯ ಭಾರತದಲ್ಲಿ 46.83 ಲಕ್ಷ ರೂಪಾಯಿ ಮೌಲ್ಯ ಹೊಂದಿದೆ.

    ಐಪಿಎಲ್ ಮೊದಲ ವಾರದಲ್ಲಿ ದೇಶೀಯ ಕ್ರಿಕೆಟಿಗರ ದರ್ಬಾರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts