ಸಿಂದಗಿ : ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯತ್ತನ್ನು ನಿರ್ಮಿಸಬಲ್ಲ ಮತ್ತು ಇಚ್ಛಿತ ಕಲೆಗಳನ್ನು ಕಲಿಯಲು ಅವಕಾಶ ಒದಗಿಸಲಾಗಿದೆ.
ಮೂಲಕ ನಾವು ನಮ್ಮೊಳಗಿನ ಕಲಾಸಕ್ತಿಯನ್ನು ಹೊರಹೊಮ್ಮಿಸಲು ಸಾಧ್ಯವಾಗಿದ್ದು, ಅದು ಸ್ವಾವಲಂಬಿತನಕ್ಕೆ ಪೂರಕವಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ವಿಷ್ಣು ಶಿಂಧೆ ಹೇಳಿದರು.
ಪಟ್ಟಣದ ಪದ್ಮರಾಜ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಹಂತಕ್ಕೆ ಬಂದ ನಿಮ್ಮೆಲ್ಲರ ಬದುಕು, ಕಲಿಕೆಯೊಂದಿಗೆ ಶೈಕ್ಷಣಿಕ ಸಾಧನೆಯತ್ತ ಸಾಗಬೇಕು. ಈ ದಿಸೆಯಲ್ಲಿ ತಾವು ಎಚ್ಚರಿಕೆಯಿಂದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಪವಿವ ಸಂಸ್ಥೆಯ ಆಡಳಿತಾಧಿಕಾರಿ ಡಾ. ಬಿ.ಜಿ. ಮಠ ಮಾತನಾಡಿ, ಶಿಕ್ಷಣ ಕಲೆಯುವ ಪ್ರತಿ ವಿದ್ಯಾರ್ಥಿಯೂ ಸ್ವಾವಲಂಬಿ ಉದ್ಯೋಗಗಳನ್ನು ಸೃಜಿಸಬೇಕು. ಆ ಮೂಲಕ ಸುಶಿಕ್ಷಿತ ಉದ್ಯೋಗಿಗಳಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕಾಲೇಜಿನ ಪ್ರಾಚಾರ್ಯ ಎಸ್.ಎಂ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಜಿ.ಎ. ನಂದಿಮಠ, ಪಿ.ಎಂ. ಮಾಲಿಪಾಟೀಲ, ಎಸ್.ಎಂ. ಹೂಗಾರ, ಮಹಾಂತೇಶ ನೂಲಾನವರ, ಎಸ್.ಸಿ. ದುದ್ದಗಿ, ಜಿ.ವಿ.ಪಾಟೀಲ, ಡಿ.ಎಂ. ಪಾಟೀಲ, ಮಂಗಳಾ ಈಳಗೇರ, ಮಮತಾ ಹರನಾಳ, ಶಂಕರ ಕುಂಬಾರ ಇತರರಿದ್ದರು.
ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಯು.ಸಿ. ಪೂಜೇರಿ ಸ್ವಾಗತಿಸಿದರು. ಈರಮ್ಮ ಹಿರೇಮಠ ಪ್ರಾರ್ಥಿಸಿದರು. ನೀಲಗಂಗಾ ದೇವರಮನಿ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಕಾವೇರಿ ರೇವೂರ ವಂದಿಸಿದರು.