More

    ಜಿಲ್ಲಾ ಮಟ್ಟದ ತಜ್ಞ ವೈದ್ಯರ ತಂಡ ರಚಿಸಿ

    ಹಾವೇರಿ: ಜಿಲ್ಲಾ ಮಟ್ಟದಲ್ಲಿ ತಜ್ಞ ವೈದ್ಯರನ್ನೊಳಗೊಂಡ ತಂಡ ರಚಿಸಿ ಜಿಲ್ಲೆಯ ತಾಲೂಕು ಆಸ್ಪತ್ರೆಗಳಿಂದ ಕೋವಿಡ್ ತುರ್ತು ಪ್ರಕರಣಗಳಲ್ಲಿ ಚಿಕಿತ್ಸೆಗೆ ಕರೆ ಬಂದಾಗ ಜಿಲ್ಲಾ ತಜ್ಞರ ತಂಡವನ್ನು ಕಳುಹಿಸಬೇಕು ಎಂದು ಗೃಹ, ಸಂಸದೀಯ ವ್ಯವಹಾರ, ಶಾಸನ ರಚನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.

    ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಅನಸ್ತೇಶಿಯಾ, ಫಿಜಿಷಿಯನ್ ಹಾಗೂ ಟೆಕ್ನಿಷಿಯನ್ ಒಳಗೊಂಡ ಜಿಲ್ಲಾಮಟ್ಟದಲ್ಲಿ ತಜ್ಞ ವೈದ್ಯರ ತಂಡ ರಚಿಸಿ ಚಿಕಿತ್ಸೆ ಆರಂಭಿಸಿ ಎಂದರು.

    ತಜ್ಞ ವೈದ್ಯರು, ವೈದ್ಯರು, ಟೆಕ್ನಿಷಿಯನ್, ಪ್ಯಾರಾಮೆಡಿಕಲ್ ಹಾಗೂ ಡಿ ಗ್ರೂಪ್ ಸಿಬ್ಬಂದಿ ಕೊರತೆಯನ್ನು ನೀಗಿಸಲು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. ನೇಮಕಾತಿಗೆ ತಕ್ಷಣ ಕ್ರಮವಹಿಸಬೇಕು. ಕಷ್ಟಕರ ಸಮಯದಲ್ಲಿ ಖಾಸಗಿ ವೈದ್ಯರು, ಕೋವಿಡ್ ಕರ್ತವ್ಯಕ್ಕೆ ಬರದಿದ್ದರೆ ಕ್ರಮ ಕೈಗೊಳ್ಳಿ. 2ನೇ ಅಲೆಯಲ್ಲಿ ಆರ್​ಟಿಪಿಸಿಆರ್ ವರದಿ ನೆಗಟಿವ್ ಬಂದರೂ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸಾರಿ ಪ್ರಕರಣ, ಉಸಿರಾಟದ ಸಮಸ್ಯೆಗಳ ಚಿಕಿತ್ಸೆಗೆ ಆಕ್ಸಿಜನ್ ಬೆಡ್​ಗಳ ಸಂಖ್ಯೆಯನ್ನು ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಹೆಚ್ಚಿಸಬೇಕು. ಕೋವಿಡ್ ಚಿಕಿತ್ಸೆಗೆ ತಾಲೂಕುವಾರು ಬೆಡ್​ಗಳ ಸಂಖ್ಯೆ, ಐಸಿಯು ಹಾಗೂ ಆಕ್ಸಿಜನ್ ಬೆಡ್, ಸೋಂಕಿತರ ಸಂಖ್ಯೆ ವಿವರ ಪಡೆದು ವಾರಕ್ಕೊಮ್ಮೆ ಯೋಜನೆ ರೂಪಿಸಬೇಕು. ಕೋವಿಡ್ ಪ್ರಕರಣಗಳ ಪ್ರಮಾಣಕ್ಕೆ ತಕ್ಕಂತೆ ಹಾಸಿಗೆ, ವ್ಯಾಕ್ಸಿನ್, ಔಷಧ, ಆಕ್ಸಿಜನ್ ಬೆಡ್​ಗಳ ಹೆಚ್ಚಳಕ್ಕೆ ಕ್ರಮವಹಿಸಬೇಕು ಎಂದರು.

    ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 150 ಹಾಗೂ ಜಿಲ್ಲಾಸ್ಪತ್ರೆಯಲ್ಲಿ 250 ವೈಲ್ ದಾಸ್ತಾನಿರಬೇಕು. ಜಿಲ್ಲೆಯಲ್ಲಿ 1,734 ರೆಮ್ೆಸಿವಿರ್ ವೈಲ್ ಬಂದಿದ್ದು, ಇದರಲ್ಲಿ 933 ವೈಲ್ ದಾಸ್ತಾನಿದೆ. ಹೆಚ್ಚುವರಿಯಾಗಿ 1 ಸಾವಿರ ವೈಲ್ ಬೇಡಿಕೆ ಸಲ್ಲಿಸಿದರೆ 3 ದಿನದೊಳಗಾಗಿ ಸರಬರಾಜಿಗೆ ಕ್ರಮವಹಿಸಲಾಗಿಸುವುದು ಎಂದರು.

    ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಎಸ್.ವಿ. ಸಂಕನೂರ, ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಎಸ್​ಪಿ ಕೆ.ಜಿ. ದೇವರಾಜ್, ಸಿಇಒ ಮಹಮ್ಮದ ರೋಷನ್ ಇತರರಿದ್ದರು. ವಿಡಿಯೋ ಸಂವಾದದ ಮೂಲಕ ಸಂಸದ ಶಿವಕುಮಾರ ಉದಾಸಿ ಪಾಲ್ಗೊಂಡು ಮಾಹಿತಿ ಪಡೆದರು.

    ಜಿಲ್ಲಾ ವಾರ್ ರೂಂ ರಚಿಸಿ

    ಜಿಲ್ಲಾಮಟ್ಟದಲ್ಲಿ ವಾರ್​ರೂಂ ಸ್ಥಾಪಿಸಿ ಕೋವಿಡ್ ಸಂಬಂಧ ಎಲ್ಲ ಮಾಹಿತಿ ದೊರಕುವಂತೆ ಕ್ರಮವಹಿಸಬೇಕು. ಹೋಮ್ ಐಸೋಲೇಷನ್ ಆಗುವವರಿಗೆ ಪ್ರತ್ಯೇಕ ಕೊಠಡಿ, ಬಾತ್​ರೂಂ ಹೊಂದಿರುವ ಬಗ್ಗೆ ಪರಿಶೀಲಿಸಿ, ಪ್ರತಿದಿನ 2 ಬಾರಿ ರೋಗಿಗಳಿಗೆ ಕರೆ ಮಾಡಿ ವೈದ್ಯರು ನಿಗಾವಹಿಸಬೇಕು. ಜನತಾ ಕರ್ಫ್ಯೂ ಉಲ್ಲಂಘನೆಯಾಗದಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.

    ಮಾಧ್ಯಮದವರಿಗೆ ನಿರ್ಬಂಧ

    ಕರೊನಾ 2ನೇ ಅಲೆ ಆರಂಭಗೊಂಡ ನಂತರ ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಕರೊನಾ ನಿಯಂತ್ರಣ ಕುರಿತು ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದರು. ಈ ಸಭೆಗೆ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ, ಸಭೆಯಲ್ಲಿ ಕೇವಲ ಜಿಲ್ಲಾಮಟ್ಟದ ಅಧಿಕಾರಿಗಳಲ್ಲದೆ, ಕೆಲ ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸಭೆಯ ನಂತರ ಈ ಕುರಿತು ಸಚಿವರನ್ನು ಮಾಧ್ಯಮದವರು ಪ್ರಶ್ನಿಸಿದಾಗ ನಾನು ಮಾಧ್ಯಮದವರನ್ನು ಸಭೆಗೆ ಆಹ್ವಾನಿಸಬೇಡಿ ಎಂದು ಹೇಳಿಲ್ಲ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts