More

    ಬೋಳೂರಿನಲ್ಲಿ ಹೆಚ್ಚುವರಿ ಚಿತಾಗಾರ

    ಭರತ್ ಶೆಟ್ಟಿಗಾರ್ ಮಂಗಳೂರು
    ಬೋಳೂರಿನ ಹಿಂದು ರುದ್ರಭೂಮಿಗೆ ಹೆಚ್ಚುವರಿ ವಿದ್ಯುತ್ ಚಿತಾಗಾರ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇದಕ್ಕೆ ಜಿಲ್ಲಾಧಿಕಾರಿ ಅಂಕಿತ ಹಾಕಿದ್ದು, ಶೀಘ್ರ ಇನ್ನೊಂದು ಚಿತಾಗಾರದ ವ್ಯವಸ್ಥೆಯಾಗಲಿದೆ.

    ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಗರದ ಬೋಳೂರಿನ ಹಿಂದು ರುದ್ರಭೂಮಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ನಡೆಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೃತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದಹನ ಪ್ರಕ್ರಿಯೆ ತಡವಾಗುತ್ತಿದೆ. ಆದ್ದರಿಂದ ಇನ್ನೊಂದು ಚಿತಾಗಾರ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ. ಈಗಿರುವ ಕಟ್ಟಡದಲ್ಲೇ ಸುಮಾರು 65 ಲಕ್ಷ ರೂ. ಮೊತ್ತದಲ್ಲಿ ಚಿತಾಗಾರ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಚಿತಾಗಾರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ದಹನ ಪ್ರಕ್ರಿಯೆಗೆ ಅಡ್ಡಿಯಾಗಿತ್ತು. ಪ್ರಸ್ತುತ ಅದನ್ನು ಸರಿಪಡಿಸಲಾಗಿದೆ. ಮಂಗಳೂರು ನಗರ ವ್ಯಾಪ್ತಿಗೆ ಸಂಬಂಧಿಸಿದರು ಮಾತ್ರವಲ್ಲದೆ ಇತರ ಕಡೆಗಳ ಕೋವಿಡ್ ಸೋಂಕಿತರು ಮೃತಪಟ್ಟರೂ, ರೋಗಿ ಕಡೆಯವರು ಜಿಲ್ಲಾಡಳಿತ ವತಿಯಿಂದ ಅಂತ್ಯ ಸಂಸ್ಕಾರಕ್ಕೆ ಇಚ್ಛಿಸಿದರೆ ಬೋಳೂರಿನಲ್ಲೇ ನಿರ್ವಹಿಸಲಾಗುತ್ತದೆ. ಆದ್ದರಿಂದ ಕೆಲವು ಸಂದರ್ಭದಲ್ಲಿ ದಿನಕ್ಕೆ ನಾಲ್ಕೈದು ಮೃತದೇಹ ದಹನ ಮಾಡಬೇಕಾದ ಅನಿವಾರ್ಯತೆ ಇರುತ್ತದೆ ಇಂತಹ ಸಂದರ್ಭ ಹೆಚ್ಚು ವಿಳಂಬವಾಗುತ್ತದೆ.
    —-
    ನಂದಿಗುಡ್ಡೆಯಲ್ಲೂ ನಿರ್ಮಿಸಲು ಚಿಂತನೆ: ಬೋಳೂರಿನ ಬಳಿಕ ನಗರದ ನಂದಿಗುಡ್ಡೆ ರುದ್ರಭೂಮಿಯಲ್ಲೂ ಮಹಾನಗರ ಪಾಲಿಕೆ ವತಿಯಿಂದ ವಿದ್ಯುತ್ ಚಿತಾಗಾರ ಅಳವಡಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ ರುದ್ರಭೂಮಿಯಲ್ಲಿ ಒಂದು ಹಂತದ ಅಭಿವೃದ್ಧಿ ಕೆಲಸಗಳನ್ನು ನಡೆದಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಪ್ರಕ್ರಿಯೆಗಳು ಆರಂಭವಾಗಲಿದೆ.

    ದಹನದ ನಡುವೆ 3 ಗಂಟೆ ಅಂತರ: ವಿದ್ಯುತ್ ಚಿತಾಗಾರದಲ್ಲಿ ಒಂದು ಮೃತದೇಹವನ್ನು ದಹನ ಮಾಡಿದ ಬಳಿಕ ಇನ್ನೊಂದರ ದಹನಕ್ಕೆ ಸುಮಾರು 2-3 ಗಂಟೆಗಳ ಅಂತರ ಬೇಕು. ಒಂದೇ ಚಿತಾಗಾರ ಇರುವುದರಿಂದ ಪ್ರಸ್ತುತ ಸಮಸ್ಯೆಯಾಗಿದ್ದು, ಮೃತದೇಹ, ಸಂಬಂಧಿಕರನ್ನು ಹಲವು ಗಂಟೆಗಳಷ್ಟು ಕಾಲ ಕಾಯಿಸಬೇಕಾಗುತ್ತದೆ. ಉದಾಹರಣೆಗೆ ಒಂದೇ ದಿನ ನಾಲ್ಕೈದು ಮಂದಿ ಮೃತಪಟ್ಟರೆ ಕೊನೇ ವ್ಯಕ್ತಿಯ ದೇಹವನ್ನು ದಹನ ಮಾಡುವಾಗ ಕನಿಷ್ಠ 12 ಗಂಟೆ ತಡವಾಗುತ್ತದೆ. ಈ ಬಗ್ಗೆ ತಿಳಿಯದ ಕೆಲವರು ಸಮಾಜಿಕ ಜಾಲತಾಣದಲ್ಲಿ ‘ಮೃತದೇಹ ತೆಗೆದುಕೊಂಡು ಹೋಗಲು ಜಿಲ್ಲಾಡಳಿತ ಆಂಬುಲೆನ್ಸ್ ನೀಡುತ್ತಿಲ್ಲ’ ಎಂದೆಲ್ಲ ಬರೆಯುತ್ತಾರೆ ಎನ್ನುತ್ತಾರೆ ಶಾಸಕ ಕಾಮತ್.

    ಒಂದು ವಿದ್ಯುತ್ ಚಿತಾಗಾರದಕ್ಕೂ ಮೃತದೇಹಗಳ ಅಂತ್ಯಸಂಸ್ಕಾರ ತಡವಾಗುತ್ತಿರುವುದರಿಂದ ಬೋಳೂರಿನಲ್ಲಿ ಹೆಚ್ಚುವರಿಯಾಗಿ ಇನ್ನೊಂದು ವಿದ್ಯುತ್ ಚಿತಾಗಾರ ಅಳವಡಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಗಳು ಅಂಕಿತ ಹಾಕಿದ್ದು, ಶೀಘ್ರ ಟೆಂಡರ್ ಕರೆದು ಅಳವಡಿಕೆ ಪ್ರಕ್ರಿಯೆ ನಡೆಯಲಿದೆ.
    ಡಿ. ವೇದವ್ಯಾಸ ಕಾಮತ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts