More

    ಹಸುವಿನ ಸಗಣಿ ಬಳಸುವ ಮನೆಗಳ ಮೇಲೆ ಪರಮಾಣು ವಿಕಿರಣ ಪರಿಣಾಮ ಬೀರಲ್ಲ: ಗುಜರಾತ್​ ಕೋರ್ಟ್​

    ಅಹಮದಾಬಾದ್​: ಹಸುವಿನ ಸಗಣಿಯಿಂದ ಆವರಿಸಿದ ಮನೆಗಳ ಮೇಲೆ ಪರಮಾಣು ವಿಕಿರಣ ಪರಿಣಾಮ ಬೀರುವುದಿಲ್ಲ ಎಂಬುದು ವಿಜ್ಞಾನದಿಂದ ಸಾಬೀತಾಗಿದೆ ಎಂದು ಹೇಳುತ್ತಲೇ ದೇಶದಲ್ಲಿ ಗೋವುಗಳ ಸಂರಕ್ಷಣೆ ಮಾಡಬೇಕಿದೆ ಅಂತಾ ಗುಜರಾತಿನ ತಾಪಿ ಜಿಲ್ಲೆಯ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಒತ್ತಿ ಹೇಳಿದ್ದಾರೆ.

    ಕಳೆದ ವರ್ಷ ನವೆಂಬರ್‌ನಲ್ಲಿ ಗುಜರಾತ್‌ನಿಂದ ಮಹಾರಾಷ್ಟ್ರಕ್ಕೆ ವಿವಿಧ ಕಾನೂನುಗಳನ್ನು ಉಲ್ಲಂಘಿಸಿ, ಹಸುಗಳು ಮತ್ತು ಹೋರಿಗಳನ್ನು ಸಾಗಿಸಿದ್ದಕ್ಕಾಗಿ 22 ವರ್ಷದ ಯುವಕನಿಗೆ ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಈ ಪ್ರಕರಣದ ವಿಚಾರಣೆ ವೇಳೆ ಗೋಹತ್ಯೆಯ ಬಗ್ಗೆ ತಾಪಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಸಮೀರ್ ವ್ಯಾಸ್ ಬೇಸರ ಹೊರಹಾಕಿದರು. ಅಲ್ಲದೆ, ಗೋವು ಕೇವಲ ಒಂದು ಪ್ರಾಣಿಯಲ್ಲ, ಅದು ನಮ್ಮ ತಾಯಿ ಎಂದರು. ಗೋಮೂತ್ರ ಅನೇಕ ರೋಗಗಳನ್ನು ವಾಸಿ ಮಾಡಬಲ್ಲದು ಎಂದು ಹೇಳಿದರು.

    ಗೋವಿನ ರಕ್ತದ ಹನಿ ಭೂಮಿಯ ಮೇಲೆ ಬೀಳದ ದಿನ ಭೂಮಿಯ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ನಾವು ಗೋಸಂರಕ್ಷಣೆ ಬಗ್ಗೆ ಮಾತನಾಡಿದರೂ ಈ ನೆಲದಲ್ಲಿ ಅದು ಜಾರಿಯಾಗುತ್ತಿಲ್ಲ. ಬದಲಾಗಿ ಗೋಹತ್ಯೆ, ಅಕ್ರಮ ಸಾಗಣೆ ಘಟನೆಗಳು ನಿತ್ಯ ನಡೆಯುತ್ತಿವೆ. ಸುಸಂಸ್ಕೃತ ಸಮಾಜಕ್ಕೆ ಇದು ಅವಮಾನ ಎಂದು ಕೋರ್ಟ್​ನ ಆದೇಶದಲ್ಲಿ ಉಲ್ಲೇಖಿಸಿದೆ.

    ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಗೋಹತ್ಯೆ ಪ್ರಕರಣಗಳು ಕಡಿಮೆಯಾಗುವ ಬದಲು ಹೆಚ್ಚುತ್ತಿವೆ ಎಂದು ನ್ಯಾಯಾಧೀಶರು ಅಸಮಧಾನ ಹೊರಹಾಕಿದರು.

    ಗೋವು ನಮ್ಮ ಧರ್ಮದ ಸಂಕೇತ. ಗೋವು ಆಧಾರಿತ ಸಾವಯವ ಕೃಷಿಯಿಂದ ತಯಾರಾದ ಆಹಾರಗಳು ನಮ್ಮನ್ನು ಅನೇಕ ರೋಗಗಳಿಂದ ರಕ್ಷಣೆ ಮಾಡುತ್ತದೆ. ಹಸುವಿನ ಸಗಣಿಯಿಂದ ಮಾಡಿದ ಮನೆಗಳ ಮೇಲೆ ಪರಮಾಣು ವಿಕಿರಣ ಪರಿಣಾಮ ಬೀರುವುದಿಲ್ಲ ಎಂಬುದು ವಿಜ್ಞಾನದಿಂದ ಸಾಬೀತಾಗಿದೆ ಮತ್ತು ಹಸುವಿನ ಮೂರ್ತ ಅನೇಕ ರೋಗಗಳನ್ನು ವಾಸಿ ಮಾಡುತ್ತದೆ ಎಂದು ನ್ಯಾಯಾಧೀಶರು ಹೇಳಿದರು.

    ಇಂದು ಯಾಂತ್ರೀಕೃತ ಕಸಾಯಿಖಾನೆಗಳಲ್ಲಿ ಗೋವನ್ನು ವಧೆ ಮಾಡಲಾಗುತ್ತಿದ್ದು, ಮಾಂಸಾಹಾರಿಗಳಿಗೆ ಮಾಂಸದ ಜೊತೆಗೆ ಗೋಮಾಂಸವನ್ನು ನೀಡುತ್ತಿರುವುದರಿಂದ ಗೋವುಗಳು ಅಪಾಯದಲ್ಲಿವೆ. ಜನರಿಗೆ ಗೋವಿನ ಮಹತ್ವದ ಬಗ್ಗೆ ಅರ್ಥ ಮಾಡಿಸಬೇಕಿದೆ ಎಂದು ಸಂಸ್ಕೃತ ಶ್ಲೋಕ ಹೇಳಿದ ನ್ಯಾಯಾಧೀಶರು, ಧರ್ಮವು ಗೋವಿನಿಂದ ಹುಟ್ಟಿದೆ” ಏಕೆಂದರೆ ಧರ್ಮವು ಗೋವಿನ ಮಗನಾದ ‘ವೃಷಭ’ (ಗೂಳಿ) ರೂಪದಲ್ಲಿದೆ ಎಂದರು.

    2020ರ ಆಗಸ್ಟ್ ತಿಂಗಳಲ್ಲಿ ಟ್ರಕ್‌ನಲ್ಲಿ 16 ಹಸುಗಳು ಮತ್ತು ಹೋರಿಗಳನ್ನು ಗುಜರಾತ್‌ಗೆ ಸಾಗಿಸಲು ಯತ್ನಿಸಿದ ಆರೋಪದ ಮೇಲೆ ಮಹಾರಾಷ್ಟ್ರ ಮಾಲೆಗಾಂವ್ ಪಟ್ಟಣದ ನಿವಾಸಿ ಮೊಹಮ್ಮದ್ ಅಮೀನ್ ಅಂಜುಮ್ ಎಂಬಾತನನ್ನು ತಾಪಿ ಪೊಲೀಸರು ಬಂಧಿಸಿದ್ದರು. ಪೊಲೀಸರು ಟ್ರಕ್ ಅನ್ನು ತಡೆದು ನೋಡಿದಾಗ, ಜಾನುವಾರುಗಳಿಗೆ ವಾಹನದಲ್ಲಿ ಸಾಕಷ್ಟು ಸ್ಥಳಾವಕಾಶ ಮತ್ತು ಆಹಾರವಿಲ್ಲದೆ ಒಂದು ಹಸು ಮತ್ತು ಒಂದು ಹೋರಿ ಸತ್ತಿತ್ತು. ಚಾಲಕ ಮೊಹಮ್ಮದ್ ಅಂಜುಮ್ ತನ್ನ ಟ್ರಕ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದ. ನಂತರದಲ್ಲಿ ಆತನನ್ನು ಬಂಧಿಸಲಾಯಿತು.

    ವಿಚಾರಣೆಯ ನಂತರ ತಾಜಿ ಜಿಲ್ಲೆಯ ಸೆಷನ್ಸ್ ನ್ಯಾಯಾಲಯವು ಗುಜರಾತ್ ಪ್ರಾಣಿ ಸಂರಕ್ಷಣೆ ಕಾಯಿದೆ 2011, ಗುಜರಾತ್ ಪ್ರಾಣಿ ಸಂರಕ್ಷಣೆ (ತಿದ್ದುಪಡಿ) ಕಾಯಿದೆ 2017 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ 1960ರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿತು. ತಿದ್ದುಪಡಿ ಕಾಯ್ದೆಯಡಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ, 5 ಲಕ್ಷ ದಂಡವನ್ನೂ ವಿಧಿಸಿದೆ. (ಏಜೆನ್ಸೀಸ್​)

    ಕ್ಲಿನಿಕ್​ನಲ್ಲಿ ನರ್ಸ್​-ಡಾಕ್ಟರ್​ ಲವ್​! ನಂಬಿಸಿ ಮದ್ವೆಯಾದ ಬಳಿಕ ನಡು ನೀರಲ್ಲಿ ಕೈಬಿಟ್ಟ ಪತಿಗಾಗಿ ಕಣ್ಣೀರಿಟ್ಟ ಪತ್ನಿ

    ಅಮೆರಿಕದಲ್ಲಿ ಭಾರತೀಯ ಟೆಕ್ಕಿಗಳ ಸಂಕಷ್ಟ: ಅರವತ್ತು ದಿನಗಳ ಗಡುವು, ಅಡಕತ್ತರಿಯಲ್ಲಿ ಟೆಕ್ಕಿಗಳು

    ಅಷ್ಟೊಂದು ಹಣ ಇಟ್ಕೊಂಡು ಏನು ಮಾಡ್ತೀಯಾ ನಮಗೊಂದಿಷ್ಟು ಕೊಡು! ಸಿಐಡಿ ಡಿವೈಎಸ್ಪಿ ವಿರುದ್ಧ ಪಾಟೀಲ್ ವಿಡಿಯೋ ಬಾಂಬ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts