More

    ಅಮೆರಿಕದಲ್ಲಿ ಭಾರತೀಯ ಟೆಕ್ಕಿಗಳ ಸಂಕಷ್ಟ: ಅರವತ್ತು ದಿನಗಳ ಗಡುವು, ಅಡಕತ್ತರಿಯಲ್ಲಿ ಟೆಕ್ಕಿಗಳು

    ವಾಷಿಂಗ್ಟನ್: ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉದ್ಯೋಗ ಕಡಿತ ಪ್ರವೃತ್ತಿ ಹೆಚ್ಚುತ್ತಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಟೆಕ್ಕಿಗಳು ಲೇಆಫ್​ನಿಂದ ಹೈರಾಣಗೊಳ್ಳುತ್ತಿದ್ದಾರೆ. ಉದ್ಯೋಗ ನಷ್ಟದಿಂದ ಅವರಿಗೆ ಇಲ್ಲಿ ನೆಲೆಸುವುದೇ ಕಷ್ಟಕರವಾಗಿ ಪರಿಣಮಿಸುತ್ತಿದೆ. ಉದ್ಯೋಗಹೀನ ವಲಸಿಗರು ನಿರ್ದಿಷ್ಟ ಅವಧಿಯೊಳಗೆ ಹೊಸ ಉದ್ಯೋಗ ಹುಡುಕಿಕೊಳ್ಳದಿದ್ದರೆ ಅಮೆರಿಕದಿಂದ ಗಂಟುಮೂಟೆ ಕಟ್ಟಬೇಕೆಂಬ ನಿಯಮ ಅವರ ತಲೆಮೇಲೆ ತೂಗುಕತ್ತಿಯಾಗಿದೆ.

    ಉದ್ಯೋಗ ವೀಸಾದ (ವರ್ಕ್ ವೀಸಾ) ಅವಧಿಯೊಳಗೇ ಬೇರೆ ಕೆಲಸವನ್ನು ಹುಡುಕಲು ಪರದಾಡುತ್ತಿದ್ದಾರೆ. ವರ್ಕ್ ವೀಸಾ ಹೊಂದಿರುವವರು ಅಮೆರಿಕದಲ್ಲೇ ಇರಬೇಕಾದರೆ ಉದ್ಯೋಗದಲ್ಲಿರುವುದು ಅಗತ್ಯ. ಎಚ್-1ಬಿ ಮತ್ತು ಎಲ್1ನಂಥ ವಲಸೆಯೇತರ ವರ್ಕ್ ವೀಸಾದ ಮೇಲಿರುವ ಗಣನೀಯ ಸಂಖ್ಯೆಯ ಭಾರತೀಯ ಐಟಿ ವೃತ್ತಿಪರರು ಅಮೆರಿಕದಲ್ಲಿ ಉಳಿದುಕೊಳ್ಳುವ ನಿಟ್ಟಿನಲ್ಲಿ ತಲೆ ಬಿಸಿ ಮಾಡಿಕೊಂಡು ಪರ್ಯಾಯ ಕೆಲಸಗಳನ್ನು ಹುಡುಕಾಡುತ್ತಿದ್ದಾರೆ. ಕೆಲಸ ಕಳೆದುಕೊಂಡ ಕೆಲವೇ ತಿಂಗಳಲ್ಲಿ ಪರ್ಯಾಯ ಕೆಲಸ ಹುಡುಕುವುದು ಅನಿವಾರ್ಯ ಹಾಗೂ ವೀಸಾ ಸ್ಥಾನಮಾನವನ್ನು ಕೂಡ ಬದಲಾಯಿಸಬೇಕಾಗುತ್ತದೆ. ಅಮೆಜಾನ್ ಉದ್ಯೋಗಿ ಸವಿತಾ (ಹೆಸರು ಬದಲಾಯಿಸಲಾಗಿದೆ) ಮೂರು ತಿಂಗಳ ಹಿಂದೆಯಷ್ಟೇ ಅಮೆರಿಕಕ್ಕೆ ಆಗಮಿಸಿದ್ದರು. ಮಾರ್ಚ್ 20 ಅವರ ಕೆಲಸದ ಕೊನೆಯ ದಿನವಾಗಲಿದೆ ಎಂದು ಕಂಪನಿ ಈ ವಾರ ಅವರಿಗೆ ಆಘಾತದ ಸಂದೇಶ ನೀಡಿದೆ.

    2 ಲಕ್ಷ ಮಂದಿ ಲೇ ಆಫ್
    ಅಮೆರಿಕದಲ್ಲಿ ಕಳೆದ ವರ್ಷ ನವೆಂಬರ್​ನಿಂದೀಚೆಗೆ ಸುಮಾರು 2 ಲಕ್ಷ ನೌಕರರನ್ನು ಲೇ ಆಫ್ ಮಾಡಲಾಗಿದೆ. ಗೂಗಲ್, ಮೈಕ್ರೋಸಾಫ್ಟ್, ಫೇಸ್​ಬುಕ್ ಮತ್ತು ಅಮೆಜಾನ್​ನಂಥ ಕಂಪನಿಗಳು ದಾಖಲೆ ಪ್ರಮಾಣದಲ್ಲಿ ನೌಕರರನ್ನು ತೆಗೆದು ಹಾಕಿವೆ. ಲೇ ಆಫ್ ಆದವರಲ್ಲಿ ಶೇಕಡ 30ರಿಂದ 40ರಷ್ಟು ಭಾರತೀಯರಾಗಿದ್ದಾರೆ. ಅವರಲ್ಲಿ ಗಣನೀಯ ಸಂಖ್ಯೆಯ ಟೆಕ್ಕಿಗಳು ಎಚ್-1ಬಿ ಮತ್ತು ಎಲ್1 ವೀಸಾ ಮೇಲೆ ಇರುವವರಾಗಿದ್ದಾರೆ.

    ಅರವತ್ತು ದಿನಗಳ ಗಡುವು
    ಎಚ್-1ಬಿ ವೀಸಾ ಹೊಂದಿರುವವರ ಪಾಡಂತೂ ದಯನೀಯವಾಗಿದೆ. ಅವರು 60 ದಿನದೊಳಗೆ ಹೊಸ ಕೆಲಸ ಪಡೆಯದಿದ್ದರೆ ಭಾರತಕ್ಕೆ ಹಿಂತಿರುಗುವುದಷ್ಟೇ ಉಳಿದ ಆಯ್ಕೆಯಾಗಲಿದೆ. ಎಚ್-1ಬಿ ವಲಸೆಯೇತರ ವೀಸಾ ಆಗಿದ್ದು, ತಾತ್ವಿಕ ಅಥವಾ ತಾಂತ್ರಿಕ ಪರಿಣತಿ ಬೇಕಾದ ವಿಶೇಷ ಉದ್ಯೋಗಗಳಲ್ಲಿ ಅವಶ್ಯವಿರುವ ವಿದೇಶಿಯರನ್ನು ನೇಮಿಸಿಕೊಳ್ಳಲು ಅದು ಅಮೆರಿಕ ಕಂಪನಿಗಳಿಗೆ ಅವಕಾಶ ನೀಡುತ್ತದೆ. ತಂತ್ರಜ್ಞಾನ ಕಂಪನಿಗಳು ಭಾರತ ಮತ್ತು ಚೀನಾದಂಥ ದೇಶಗಳಿಂದ ಪ್ರತಿ ವರ್ಷ ಇಂಥ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ. ಆಡಳಿತ ಸ್ಥಾನಗಳು ಅಥವಾ ವಿಶೇಷ ಜ್ಞಾನ ಹೊಂದಿರುವ ಉದ್ಯೋಗಿಗಳ ಕಂಪನಿಯೊಳಗಿನ ತಾತ್ಕಾಲಿಕ ವರ್ಗಾವಣೆಗೆ ಎಲ್-1ಎ ಮತ್ತು ಎಲ್-1ಬಿ ವೀಸಾ ನೀಡಲಾಗುತ್ತದೆ.

    ಯುರೋಪ್​ನಲ್ಲಿ ಉದ್ಯೋಗ ಕಡಿತ
    ಬ್ರಿಟನ್, ಜರ್ಮನಿ ಸೇರಿ ಯುರೋಪ್​ನಲ್ಲೂ ಸಾವಿರಾರು ಜನರನ್ನು ಕೆಲಸದಿಂದ ತೆಗೆಯಲಾಗಿದ್ದು, ಭಾರತೀಯರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಏವೆನ್, ಬ್ರೖೆನ್ಲಿ, ಬ್ರಿಟಿಷ್​ವೋಲ್ಟ್, ಕ್ಲೂ, ಪೆಡಲ್ ಕಂಪನಿಗಳು ಲೇ ಆಫ್ ಘೋಷಿಸಿವೆ.

    ಅಷ್ಟೊಂದು ಹಣ ಇಟ್ಕೊಂಡು ಏನು ಮಾಡ್ತೀಯಾ ನಮಗೊಂದಿಷ್ಟು ಕೊಡು! ಸಿಐಡಿ ಡಿವೈಎಸ್ಪಿ ವಿರುದ್ಧ ಪಾಟೀಲ್ ವಿಡಿಯೋ ಬಾಂಬ್​​

    ದಮ್ಮಯ್ಯ ಅಂತೀನಿ ಭ್ರಷ್ಟ ಸುಧಾಕರ್​​ನನ್ನ ಸೋಲಿಸಿ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

    ಕೇಂದ್ರದ ಬಜೆಟ್ ರಾಜ್ಯಕ್ಕೆ ಬಂಪರ್?; ಡಬಲ್ ಇಂಜಿನ್ ಫೀಲ್ ಕೊಡಲು ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts