More

    ರಾಜ್ಯದಲ್ಲಿ ಕಳೆಗುಂದಿದ ದನಗಳ ಜಾತ್ರೆ

    ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ: ರಾಜ್ಯಾದ್ಯಂತ ಪ್ರತಿ ವರ್ಷ ಮಾರ್ಚ್‌ನಿಂದ ಮೇವರೆಗೂ ಸಾವಿರಾರು ಜಾತ್ರಾ ಮಹೋತ್ಸವಗಳು ನಡೆಯಲಿದ್ದು, ಈ ವೇಳೆ ಜರುಗುವ ದನಗಳ ಜಾತ್ರೆ ವರ್ಷದಿಂದ ವರ್ಷಕ್ಕೆ ಕಳೆಗುಂದುತ್ತಿದೆ. ರಾಸುಗಳ ಸಂಖ್ಯೆಯೂ ಕ್ಷೀಣಿಸುತ್ತಿದ್ದು, ಸಂಭ್ರಮ ಕಣ್ಮರೆಯಾಗುತ್ತಿದೆ. ವ್ಯಾಪಾರ-ವಹಿವಾಟು ಕೂಡ ಮೊದಲಿನಂತಿಲ್ಲ….

    ಘಾಟಿ ಸುಬ್ರಮಣ್ಯ, ಹೊರ್ತಿ, ಚುಂಚನಕಟ್ಟೆ, ಮಾಗಡಿ, ಹೆಸರಘಟ್ಟ, ಬೂಕನಕಟ್ಟೆ, ತಲಕಾಯಲಬೆಟ್ಟ, ಕಲಬುರಗಿ ಶರಣ ಬಸವೇಶ್ವರ, ಅಮರೇಶ್ವರ, ರಾಯಚೂರು, ಮಂಡ್ಯ, ಮೈಸೂರು, ಹಾಸನ ಸೇರಿ ಮಧ್ಯಕರ್ನಾಟಕದ ಚಿತ್ರದುರ್ಗ ಹೊರಹೊಲಯ ಸೀಬಾರದ ಗತವೈಭವದ ದನಗಳ ಜಾತ್ರೆ ಸೊರಗುತ್ತಿವೆ. ಕೆಲವೆಡೆ ನಿಧಾನವಾಗಿ ಕಳೆಗಟ್ಟಿದರೆ, ಇನ್ನೂ ಕೆಲವೆಡೆ ಐದು ವರ್ಷವಾದರೂ ಚೇತರಿಕೆ ಕಂಡಿಲ್ಲ.

    ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ರಾಸುಗಳನ್ನು ದನಗಳ ಜಾತ್ರೆಗೆ ಕರೆತರಲಾಗುತ್ತಿತ್ತು. ಆದರೆ, ಕಳೆದ 5 ವರ್ಷದಿಂದ ಸಂಖ್ಯೆ ಕಡಿಮೆಯಾಗುತ್ತಿರುವ ಪರಿಣಾಮ ಹೊರ ರಾಜ್ಯದವರು ನಿರುತ್ಸಾಹ ತೋರುತ್ತಿದ್ದಾರೆ. ಕೋವಿಡ್ ಕಾರಣಕ್ಕೆ ಎರಡು ವರ್ಷ ದನಗಳ ಜಾತ್ರೆ ರದ್ದಾಗಿದ್ದು, ಕೂಡ ದೊಡ್ಡ ಪೆಟ್ಟು ನೀಡಿದೆ.

    ಸೀಬಾರದಲ್ಲಿ ಅನೇಕ ವರ್ಷಗಳಿಂದ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿಯ ರಥೋತ್ಸವ ಜರುಗಿದ ನಂತರ ದನಗಳ ಜಾತ್ರೆ ಆರಂಭವಾಗುವ ಪರಂಪರೆ ಬೆಳೆದು ಬಂದಿದೆ. 15 ದಿನ ನಡೆಯುತ್ತಿದ್ದ ಈ ಉತ್ಸವದಲ್ಲಿ ರಾಜ್ಯದ ನಾನಾ ಕಡೆಗಳಿಂದ ಜವಾರಿ, ನಾಟಿ, ಸೀಮೆವಾರಿ, ಹಳ್ಳಿಕಾರ್, ಅಮೃತ್ ಮಹಲ್, ಸೀಮೆ ಸೇರಿ ವಿವಿಧ ತಳಿಗಳ ರಾಸುಗಳನ್ನು ಕರೆತಂದು ಮಾರಾಟ ಮಾಡಲಾಗುತ್ತಿತ್ತು. 2013ಕ್ಕೂ ಹಿಂದೆ 3ಸಾವಿರಕ್ಕೂ ಹೆಚ್ಚು ದನಗಳಿಂದ ಮೈದಾನ ತುಂಬಿ ತುಳುಕುತ್ತಿತ್ತು. ನಡೆದಾಡಲೂ ಕೆಲವೊಮ್ಮೆ ಜಾಗ ಇರುತ್ತಿರಲಿಲ್ಲ. ಆದರೀಗ ಸಂಖ್ಯೆ 150 ದಾಟಿಲ್ಲ.

    ರಾಜ್ಯದ ಅತಿ ದೊಡ್ಡ ದನಗಳ ಜಾತ್ರೆಗಳು ಇದಕ್ಕೆ ಹೊರತಾಗಿಲ್ಲ. ರೈತರ ಬಳಿ ರಾಸುಗಳಿಲ್ಲ ಎಂಬ ಮಾತು ಕೂಡ ರೈತ ಸಮೂಹದಿಂದಲೇ ಕೇಳಿಬರುತ್ತಿದೆ. 2017ರಲ್ಲೂ ಬರದಿಂದಾಗಿ ನೀರಿನ ಸಮಸ್ಯೆ ತಲೆದೋರಿತ್ತು. ಜಾನುವಾರುಗಳಿಗೆ ಜೀವಜಲ ಇಲ್ಲದಿದ್ದರೆ, ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೂ ಹಲವೆಡೆ ದನಗಳ ಜಾತ್ರೆ ರದ್ದಾಗಿತ್ತು. ಕೆಲವೆಡೆ ಮೇವು ಬ್ಯಾಂಕ್ ತೆರೆದರೂ ಪ್ರಯೋಜನವಾಗಿರಲಿಲ್ಲ.

    ಬಡ ರೈತರಿಗೆ ಎತ್ತುಗಳು ಅನಿವಾರ್ಯ. ಹೀಗಾಗಿ ಅವರು ಮಾತ್ರ ಖರೀದಿಸಲು ಮುಂದಾಗುತ್ತಾರೆ. ಇನ್ನೂ ಜಮೀನ್ದಾರರು ಮನೆ ಮುಂದೆ ಜೋಡೆತ್ತು ಇರಲಿ ಎಂಬ ಕಾರಣಕ್ಕಾಗಿ ಕೊಂಡುಕೊಳ್ಳುವುದು ಸಹಜ. ಆದರೆ, ಬರದ ಕಾರಣಕ್ಕೆ ಪೋಷಣೆ ಸಾಧ್ಯವಾಗದೆಯೂ ಕೆಲ ರೈತರು ತಮ್ಮ ಎತ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ.

    ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವಕ್ಕೂ ರಾಸುಗಳನ್ನು ಕರೆದೊಯ್ಯಲು ಕ್ಷಣಗಣನೆ ಆರಂಭವಾಗಿದೆ. ತೀವ್ರ ಬರ, ಕೃಷಿ ಯಾಂತ್ರೀಕರಣದ ಭರಾಟೆ, ದನಗಳ ಬೆಲೆ ದುಪ್ಪಟ್ಟಾದರೂ ಮಣ್ಣಿನ ನಂಟು ಬಿಡದ ಕೆಲ ರೈತರು ಕೃಷಿ ಚಟುವಟಿಕೆಗಾಗಿ ಎತ್ತುಗಳನ್ನು ಖರೀದಿಸಲು ಮುಂದಾಗುತ್ತಿದ್ದು, ಆಶಾದಾಯಕ ಬೆಳವಣಿಗೆ ಎಂದರೆ ತಪ್ಪಲ್ಲ.

    ಹಳ್ಳಿಕಾರ್ ತಳಿಯ 15 ಜೋಡಿ ಎತ್ತು ತಂದಿದ್ದೆವು. ಎರಡು ಜತೆ ಮಾತ್ರ ಉಳಿದಿವೆ. ಎಲ್ಲವೂ 1 ಲಕ್ಷ ರೂ.ನಿಂದ 1.5 ಲಕ್ಷ ರೂ.ಗೂ ಹೆಚ್ಚು ಬೆಲೆಗೆ ಮಾರಾಟವಾಗಿವೆ. ಮೈಸೂರು, ಮಂಡ್ಯ, ಮಧುಗಿರಿ, ಸಿದ್ದಗಂಗಾ, ತಾವರಕೆರೆ ಸೇರಿ ಇತರೆಡೆಗಳಿಂದ ಎತ್ತುಗಳನ್ನು ತಂದು ಮಾರಾಟ ಮಾಡುತ್ತೇವೆ ಎನ್ನುತ್ತಾರೆ ನೀಲಯ್ಯನಹಟ್ಟಿಯ ಅಯೂಬ್‌ಸಾಬ್.

    ಕೃಷಿ ಚಟುವಟಿಕೆಗೆ ಯಂತ್ರೋಪಕರಣ ಬಳಸುತ್ತಿರುವ ಕಾರಣ ಹಸು ಸಾಕಾಣಿಕೆ ಪ್ರಮಾಣ ತೀರಾ ಕಡಿಮೆಯಾಗಿದೆ. ಹೀಗಾಗಿ ರಾಸುಗಳ ಬೆಲೆ ಹೆಚ್ಚಾಗಿದೆ. ಆಯಾ ಭಾಗಗಳಲ್ಲಿ ಸಂತೆಗಳು ನಡೆಯುತ್ತಿರುವ ಕಾರಣ, ಜಾತ್ರೆಗೆ ರಾಸುಗಳು ಸೇರುವ ಪ್ರಮಾಣ ಕಡಿಮೆಯಾಗಿದೆ ಎನ್ನುತ್ತಾರೆ ಬೆಳಗಟ್ಟದ ಅಮ್ಜದ್ ಹುಸೇನ್.

    ಲಕ್ಷದ ಮೇಲಿದ್ದರೆ ಶಾಮಿಯಾನ: ಜೋಡೆತ್ತು ಲಕ್ಷ ರೂ. ಮೇಲಿದ್ದರೆ, ಮೊದಲೆಲ್ಲ ಶಾಮಿಯಾನ ಹಾಕಿ ಪ್ರತ್ಯೇಕವಾಗಿ ಪ್ರದರ್ಶಿಸಲಾಗುತ್ತಿತ್ತು. ಆದರೆ, 2024ರ ಜಾತ್ರೆಗಳಲ್ಲಿ ಸಂಖ್ಯೆ ಕ್ಷೀಣಿಸಿರುವ ಕಾರಣ ಆರೋಗ್ಯಯುತ ಯಾವುದೇ ಜೋಡೆತ್ತು ಕೇಳಿದರೂ ಲಕ್ಷದ ಮೇಲಿವೆ. ಹೀಗಾಗಿ ಶಾಮಿಯಾನ ಕಣ್ಮರೆಯಾಗಿದೆ.

    84 ಲಕ್ಷ ದನಗಳು: 2019ರಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರಾಜ್ಯಾದ್ಯಂತ ನಡೆದ 20ನೇ ಜಾನುವಾರು ಗಣತಿಯ ಅಂತಿಮ ವರದಿಯನ್ವಯ 84,69,004 ದನಗಳು, 29,84,560 ಎಮ್ಮೆಗಳಿವೆ. 2024-25ರಲ್ಲಿ ಜಾನುವಾರು ಗಣತಿ ಆರಂಭವಾಗುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts