More

    ಕೋವಿಡ್ ಲಸಿಕೆ ತಾಲೀಮು ಯಶಸ್ವಿ

    ಬೆಳಗಾವಿ: ಕರೊನಾ ವೈರಸ್ ನಿಯಂತ್ರಣಕ್ಕಾಗಿ ಕೋವಿಡ್-19 ಲಸಿಕೆ ವಿತರಿಸುವ ಮುನ್ನ ಜಿಲ್ಲೆಯ ಮೂರು ಆರೋಗ್ಯ ಕೇಂದ್ರಗಳಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಸಿಕೆ ವಿತರಣೆಯ ತಾಲೀಮು (ಡ್ರೈ ರನ್) ಪ್ರಕ್ರಿಯೆ ಯಶಸ್ವಿಯಾಗಿ ಜರುಗಿತು.

    ಕರೊನಾ ಲಸಿಕೆ ಬಂದ ಬಳಿಕ ಅದರ ವಿತರಣೆಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬುದನ್ನು ಪರೀಕ್ಷಿಸಲು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿಯೂ ತಾಲೀಮು ಆಯೋಜಿಸಲು ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಲಸಿಕೆ ವಿತರಣೆ ತಾಲೀಮು ಹಮ್ಮಿಕೊಂಡಿತ್ತು.

    ತಲಾ 25 ಸಿಬ್ಬಂದಿ: ಬೆಳಗಾವಿಯ ವಂಟಮೂರಿಯಲ್ಲಿರುವ ನಗರ ಆರೋಗ್ಯ ಕೇಂದ್ರ, ಹುಕ್ಕೇರಿ ಪಟ್ಟಣದ ತಾಲೂಕು ಆರೋಗ್ಯ ಕೇಂದ್ರ ಮತ್ತು ಚನ್ನಮ್ಮ ಕಿತ್ತೂರು ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಗೆ ಲಸಿಕೆ ತಾಲೀಮು ನಡೆಸಲಾಯಿತು. ಈ ಮೂರು ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯ ತಲಾ 25 ಸಿಬ್ಬಂದಿಯನ್ನು ಪ್ರಾಯೋಗಿಕ ತಾಲೀಮಿಗೆ ಬಳಸಿಕೊಳ್ಳಲಾಯಿತು.

    ಸಕಲ ಸಿದ್ಧತೆ: ಜಿಲ್ಲಾ, ತಾಲೂಕು ಮಟ್ಟದ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಯಿತು. ಅಲ್ಲದೆ, ಸಾವಿರಾರು ಜನರು ಈಗಾಗಲೇ ಲಸಿಕೆ ಪಡೆದುಕೊಳ್ಳಲು ನೋಂದಣಿ ಮಾಡಿಕೊಂಡಿದ್ದಾರೆ. ತಾಲೀಮು ಪ್ರಕ್ರಿಯೆಯ ಆರಂಭದಲ್ಲಿ ವ್ಯಾಕ್ಸಿನ್ ಪಡೆದುಕೊಳ್ಳುವ ಫಲಾನುಭವಿಗಳ ದಾಖಲಾತಿ ಪರಿಶೀಲನೆ, ಲಸಿಕೆ ನೀಡುವ ಕೇಂದ್ರ ಹಂಚಿಕೆ, ನಂತರ ಲಸಿಕಾ ಕೊಠಡಿಗೆ ಕರೆದೊಯ್ದು ಲಸಿಕೆ ಹಾಕುವ ಮತ್ತು ಲಸಿಕೆ ಪಡೆದುಕೊಂಡವರನ್ನು ನಿರೀಕ್ಷಣೆಯಲ್ಲಿಡುವ ಚಟುವಟಿಕೆಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮಾಡಿದರು. ಒಟ್ಟಾರೆಯಾಗಿ ತಾಲೀಮು ಪ್ರಕ್ರಿಯೆಯಲ್ಲಿ ಯಾವುದೇ ಅಡೆತಡೆ ಉಂಟಾಗದೆ ಯಶಕಂಡಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಡಾ.ಅಪ್ಪಾಸಾಹೇಬ ನರಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿಕಾಂತ ಮುನ್ಯಾಳ, ಆರ್‌ಸಿಎಚ್ ಡಾ.ಈಶ್ವರಪ್ಪ ಗಡಾದ, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

    ಪ್ರಥಮ ಹಂತದಲ್ಲಿ ಬೆಳಗಾವಿ ಜಿಲ್ಲೆಗೆ 3 ಲಕ್ಷ ವ್ಯಾಕ್ಸಿನ್

    ಲಸಿಕೆ ತಾಲೀಮು ಪ್ರಕ್ರಿಯೆ ಚಟುವಟಿಕೆ ವೀಕ್ಷಣೆ ಬಳಿಕ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಕರೊನಾ ಲಸಿಕೆ ಸಂಗ್ರಹಣೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಒಟ್ಟು 16 ಲಕ್ಷ ಡೋಸ್ ಲಸಿಕೆ ಸಂಗ್ರಹ ವ್ಯವಸ್ಥೆ ಹೊಂದಿರುವ ವ್ಯಾಕ್ಸಿನ್ ಡಿಪೋಕ್ಕೆ ಪ್ರಥಮ ಹಂತದಲ್ಲಿ 3 ಲಕ್ಷ ವ್ಯಾಕ್ಸಿನ್ ಡೋಸ್ ಬರುವ ಸಾಧ್ಯತೆ ಇದೆ. ಈ ಪ್ರಥಮ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಆರೋಗ್ಯ ಕಾರ್ಯಕರ್ತರನ್ನೊಳಗೊಂಡ 28 ಸಾವಿರ ಜನರಿಗೆ ಲಸಿಕೆ ನೀಡಲು ಸಹ ಎಲ್ಲ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts