More

    ಹಿರಿಯ ನಾಗರಿಕರಿಗೆ ಕೋವಿಡ್ ಪರೀಕ್ಷೆ

    ಹಾವೇರಿ: ಕೋವಿಡ್ ಸೋಂಕು ಒಂದು ಸಾಮಾನ್ಯ ಕಾಯಿಲೆಯಾಗಿದೆ. ಯಾವುದೇ ಭಯ, ಆತಂಕ, ಹಿಂಜರಿಕೆ ಹಾಗೂ ಮೂಢನಂಬಿಕೆಗೆ ಒಳಗಾಗದೇ ಕೆಮ್ಮು, ಶೀತ, ನೆಗಡಿ, ಜ್ವರ ಕಂಡುಬಂದರೆ ಸ್ವಯಂ ಪ್ರೇರಣೆಯಿಂದ ಉಚಿತ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಜಿಪಂ ಸಿಇಒ ರಮೇಶ ದೇಸಾಯಿ ಮನವಿ ಮಾಡಿದರು.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಸ್ತಮಾ, ಶ್ವಾಸಕೋಶದ ಸಮಸ್ಯೆಗಳು, ಹೃದಯ ಸಂಬಂಧಿ ಕಾಯಿಲೆಗಳು, ಸಕ್ಕರೆ ಕಾಯಿಲೆ, ರಕ್ತ ದೊತ್ತಡದಂತಹ, ಟಿಬಿ, ಎಚ್​ಐವಿ ಅಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಇಂತಹ ವ್ಯಕ್ತಿಗಳಿಗೆ ಕೋವಿಡ್ ಸೋಂಕಿನ ಪರಿಣಾಮ ತೀವ್ರವಾಗಿರುತ್ತದೆ. ಸೋಂಕಿನಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಕೋವಿಡ್ ಎಂದು ಗೊತ್ತಾದರೆ ಅಕ್ಕಪಕ್ಕದವರು ನಮ್ಮನ್ನು ಕೀಳಾಗಿ ನೋಡುತ್ತಾರೆ ಎಂಬ ಭಯದಿಂದ ಪರೀಕ್ಷೆ ಮಾಡಿಸಿಕೊಳ್ಳಲು ಕೆಲವರು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ. ಕರೊನಾ ವೈರಸ್ ಒಂದು ಸಾಮಾನ್ಯ ಸೋಂಕು. ಎಚ್​ಐವಿ ಇತರ ಕಾಯಿಲೆಯಂತೆ ಭಯಾನಕವಾದುದಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು. ಸಕಾಲಕ್ಕೆ ಪರೀಕ್ಷೆ ಮತ್ತು ಸೂಕ್ತ ಚಿಕಿತ್ಸೆ ಪಡೆದರೆ ಗುಣವಾಗಬಹುದು ಎಂದು ತಿಳಿಸಿದ್ದಾರೆ.

    ಸಣ್ಣ ಪ್ರಮಾಣದ ಲಕ್ಷಣಗಳು ಕಂಡುಬಂದರೂ ಕೂಡಲೆ ಪರೀಕ್ಷೆಗೆ ಒಳಗಾಗಬೇಕು. ಎಲ್ಲ ನಗರ, ಸ್ಥಳೀಯ ಸಂಸ್ಥೆಗಳಲ್ಲಿ, ಸ್ಥಳೀಯ ಆಸ್ಪತ್ರೆಗಳಲ್ಲಿ ರ್ಯಾಪಿಡ್ ಕಿಟ್ ಹಾಗೂ ಜಿಲ್ಲಾ ಆರ್​ಟಿಪಿಸಿಆರ್ ಲ್ಯಾಬ್​ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಕೋವಿಡ್ ಖಚಿತವಾದರೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ಲಕ್ಷಣ ಕಂಡುಬಂದರೂ ಭಯದಿಂದ ಆಸ್ಪತ್ರೆಗೆ ಬರಲು ಹಿಂಜರಿಕೆ ಹಾಗೂ ವಿಳಂಬದಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕೊನೆಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.

    ಕೋವಿಡ್ ಪರೀಕ್ಷೆಗೆಗಾಗಿ ಜಿಲ್ಲೆಯಾದ್ಯಂತ 22 ಸಂಚಾರಿ ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಜಿಲ್ಲಾ ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಪಾಸಿಟಿವ್ ವ್ಯಕ್ತಿಗಳಿಗೆ ರೆಮಿಡಿ ಸಿವಿಯರ್ ಲಸಿಕೆ ನೀಡಲಾಗುತ್ತಿದೆ. ಪಾಸಿಟಿವ್ ಪ್ರಮಾಣ ಹಾಗೂ ಕೋವಿಡ್ ಸೋಂಕಿನಿಂದ ಮರಣ ಪ್ರಮಾಣ ಕಡಿಮೆ ಮಾಡಲು ಗ್ರಾಪಂ ವ್ಯಾಪ್ತಿಯಲ್ಲಿ ಎರಡನೇ ಸುತ್ತಿನ ಆರೋಗ್ಯ ತಪಾಸಣೆ ನಡೆಸಲು ಸೂಚಿಸಲಾಗಿದೆ. ವಿಶೇಷವಾಗಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ಎಚ್​ಐವಿ, ಅಸ್ತಮಾ, ಟಿಬಿ, ರಕ್ತದೊತ್ತಡ, ಮಧುಮೇಹದಂತಹ ಗಂಭೀರ ಕಾಯಿಲೆಯಿಂದ ಬಳಲುವವರ ಆರೋಗ್ಯ ತಪಾಸಣೆಗೆ ಆಶಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಇಂದಿನಿಂದಲೇ ತಪಾಸಣೆ ಆರಂಭಿಸಿ ಎರಡು ದಿನಗಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

    ಶೇ. 98.99ರಷ್ಟು ಗುಣ: ಜಿಲ್ಲೆಯ ಕೋವಿಡ್ ಅಂಕಿ-ಅಂಶಗಳನ್ನು ಗಮನಿಸಿದಾಗ ಪಾಸಿಟಿವ್ ಸಂಖ್ಯೆಗಳಿಗಿಂತ ಶೇ. 100ಕ್ಕೆ ಶೇ. 98.99ರಷ್ಟು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಪ್ರಮಾಣ ಹೆಚ್ಚಾಗಿದೆ. ಸಾವಿನ ಪ್ರಮಾಣವೂ ಅತ್ಯಂತ ಕಡಿಮೆಯಿದೆ. ಸಕಾಲದಲ್ಲಿ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆ ಪಡೆದರೆ ಸಾಮಾನ್ಯ ಕಾಯಿಲೆಯಂತೆ ಗುಣವಾಗಿ ಆರೋಗ್ಯಯುತ ಜೀವನ ನಡೆಸಬಹುದು. ಈ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts