More

    ಮಗುವಿಗೂ ಟೆಸ್ಟ್ ಮಂಗಳೂರು ನಿಯಮ!, ಕುವೈತ್ ಘಟನೆ ಬಗ್ಗೆ ಆರೋಗ್ಯ ಸಚಿವರಿಗೆ ಯುಎಇ ಫೋರಂ ದೂರು

    ಮಂಗಳೂರು: ತಾಯಿ ಜತೆಗಿದ್ದ ಆರು ತಿಂಗಳ ಮಗುವಿಗೆ ಕೋವಿಡ್ ದೃಢೀಕರಿಸುವ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿಲ್ಲ ಎನ್ನುವ ಕಾರಣಕ್ಕೆ ಕುವೈತ್‌ನಿಂದ ವಿಮಾನ ಪ್ರಯಾಣಕ್ಕೆ ಅವಕಾಶ ನಿರಾಕರಿಸಿದ ಘಟನೆಗೆ ಕಾರಣವಾಗಿರುವುದು ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳ ಆದೇಶ.

    ಹೌದು, ಈ ಬಗ್ಗೆ ಯುಎಇ ಎನ್‌ಆರ್‌ಐ ಫೋರಂ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಆರೋಗ್ಯ ಸಚಿವ ಸುಧಾಕರ್ ಅವರಿಗೆ ದೂರು ನೀಡಿದ್ದಾರೆ.

    ಅಂತಾರಾಷ್ಟ್ರೀಯ ಕೋವಿಡ್ ಮಾರ್ಗಸೂಚಿ ಪ್ರಕಾರ ವಿಮಾನ ಯಾನ ಸಂದರ್ಭ ಎರಡು ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಪರೀಕ್ಷೆ ವರದಿ ಅಗತ್ಯವಿಲ್ಲ. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಎಪಿಎಚ್‌ಒ ಡಾ.ಕೆ.ಎ.ಶ್ಯಾಮಿನಿ ಅವರ ಸಲಹೆಯಂತೆ ಎರಡು ವರ್ಷದ ಕೆಳಗಿನ ಮಕ್ಕಳಿಗೆ ಕೂಡ ಪರೀಕ್ಷೆ ನಡೆಸಲಾಗುತ್ತಿದೆ. ಇದೇ ಕಾರಣಕ್ಕೆ ಕುವೈತ್ ವಿಮಾನ ನಿಲ್ದಾಣದ ಅಧಿಕಾರಿಗಳು ಪರೀಕ್ಷೆ ವರದಿ ಇಲ್ಲದೆ ಮಂಗಳೂರು ಪ್ರಯಾಣಕ್ಕೆ ಅವಕಾಶ ನೀಡುತ್ತಿಲ್ಲ. ಇಲ್ಲೂ ಅಂತಾರಾಷ್ಟ್ರೀಯ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಸಲಹೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಈ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ ಪ್ರವೀಣ್ ಕುಮಾರ್ ಶೆಟ್ಟಿ, ಮುಂಬೈ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಮಸ್ಯೆ ಬಗ್ಗೆ ರಾಜ್ಯ ಆರೋಗ್ಯ ಸಚಿವರ ಗಮನ ಸೆಳೆಯಲಾಗಿದ್ದು, ಸಂಬಂಧಪಟ್ಟವರ ಗಮನ ಸೆಳೆದು ಸಮಸ್ಯೆ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರಿಂದ ಭರವಸೆ ದೊರೆತಿರುವುದಾಗಿ ತಿಳಿಸಿದರು.
    ವಿಮಾನ ಯಾನ ಸಂದರ್ಭ ಎರಡು ವರ್ಷದ ಒಳಗಿನ ಮಕ್ಕಳಿಗೆ ಆರ್‌ಟಿಪಿಸಿಆರ್ ಪರೀಕ್ಷೆ ವರದಿ ಅಗತ್ಯ ಇರುವುದಿಲ್ಲ. ಮಗುವಿನ ಜತೆಗೆ ಪ್ರಯಾಣಿಸುವ ತಂದೆ ಅಥವಾ ತಾಯಿಯ ನೆಗೆಟಿವ್ ವರದಿ ಇದ್ದರೆ ಸಾಕು. ಕುವೈತ್ ಪ್ರಕರಣದಲ್ಲಿ ಯಾವುದೋ ರೀತಿಯ ಸಂವಹನ ಸಮಸ್ಯೆ ಉಂಟಾಗಿರಬೇಕು ಎಂದು ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ ಪ್ರತಿಕ್ರಿಯಿಸಿದ್ದಾರೆ.

    ಕಳೆದ ಶನಿವಾರ ತಾಯಿ ಅದಿತಿ ನಾಯಕ್ ಜತೆ ಮಂಗಳೂರಿಗೆ ಹೊರಟಿದ್ದ ಅವರ ಆರು ತಿಂಗಳ ಮಗುವಿನ ವಿಮಾನ ಪ್ರಯಾಣಕ್ಕೆ ಕುವೈತ್ ವಿಮಾನ ನಿಲ್ದಾಣದ ಭಾರತೀಯ ಅಧಿಕಾರಿಗಳು ನಿರಾಕರಿಸಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಧ್ಯ ಪ್ರವೇಶಿಸಿ ವಿದೇಶಾಂಗ ಸಚಿವಾಲಯ ಸಂಪರ್ಕಿಸಿದ ಬಳಿಕ ಮಗು ಮತ್ತು ತಾಯಿಗೆ ವಿಮಾನ ಪ್ರಯಾಣಕ್ಕೆ ಕೊನೆಯ ಕ್ಷಣದಲ್ಲಿ ಅವಕಾಶ ದೊರೆತಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts