More

    ಕೋವಿಡ್​ನಿಂದಾಗಿ ಅಡಕತ್ತರಿಯಲ್ಲಿ ಕಿರುತೆರೆ: ಸದ್ಯಕ್ಕೆ ಸಮಸ್ಯೆ ಇಲ್ಲ, ಮುಂದೆ ಗೊತ್ತಿಲ್ಲ…

    ಬೆಂಗಳೂರು: ಬಣ್ಣದ ಲೋಕಕ್ಕೆ ಮತ್ತೆ ಕರೊನಾ ಎರಡನೇ ಅಲೆಯ ಹೊಡೆತ ಬೀಳುವುದಕ್ಕೆ ಶುರುವಾಗಿದೆ. ಈಗಾಗಲೇ ಸಿನಿಮಾತಂಡದವರು ತಂತಮ್ಮ ಚಿತ್ರಗಳ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ, ಎಲ್ಲವೂ ಸರಿಯಾದ ಮೇಲೆ ಮತ್ತೆ ಕ್ಯಾಮರಾ ಆನ್ ಮಾಡಲು ನಿರ್ಧರಿಸಿದ್ದಾರೆ. ಈ ನಡುವೆ ಕಿರುತೆರೆಯ ಸ್ಥಿತಿ ಮಾತ್ರ ಭಿನ್ನ. ಒಂದು ರೀತಿ ಅಡಕತ್ತರಿಗೆ ಸಿಲುಕಿರುವ ಅಡಕೆಯಂತಾಗಿದೆ. ಮೇ 4ರವರೆಗೆ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ, ಅದಾದ ಬಳಿಕ ಸರ್ಕಾರದ ನಿರ್ಧಾರದ ಮೇಲೆ ಕಿರುತೆರೆ ವರ್ಗ ಮುಂದಿನ ನಡೆಯನ್ನು ಸ್ಪಷ್ಟಪಡಿಸಲಿದೆ.

    ಒಂದು ವೇಳೆ ಶೂಟಿಂಗ್ ಸ್ಥಗಿತ ಮಾಡುವಂತೆ ಸರ್ಕಾರ ಆದೇಶಿಸಿದರೆ ಕಿರುತೆರೆಯ ಮುಂದಿನ ನಡೆ ಏನು? ಎಪಿಸೋಡ್​ಗಳ ಬ್ಯಾಂಕಿಂಗ್ ಕೆಲಸ ಮತ್ತೆ ಶುರುವಾಗಲಿದೆಯೇ? ಎಂಬ ಪ್ರಶ್ನೆಗಳು ಈಗಾಗಲೇ ಪ್ರೇಕ್ಷಕರನ್ನು ಕಾಡುತ್ತಿವೆ.

    ‘ಕಳೆದ ವರ್ಷದ ಸ್ಥಿತಿ ಗೊತ್ತಿರುವುದರಿಂದ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡೇ ಶೂಟಿಂಗ್ ಮುಂದುವರಿಸಿದ್ದೇವೆ’ ಎನ್ನುವ ಜೀ ಕನ್ನಡದ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು, ‘ಸಾಧ್ಯವಾದಷ್ಟು ಒಳಾಂಗಣದಲ್ಲಿಯೇ ಚಿತ್ರೀಕರಣ ಮಾಡುತ್ತಿದ್ದೇವೆ. ಹೊರಾಂಗಣದ ಸೀನ್​ಗಳನ್ನೇ ಬರೆಯುತ್ತಿಲ್ಲ. ಎಪಿಸೋಡ್ ಬ್ಯಾಂಕಿಂಗ್ ವಿಚಾರಕ್ಕೆ ಬಂದರೆ, ಗರಿಷ್ಠ ಒಂದು ವಾರದ ಸಂಚಿಕೆಗಳನ್ನು ಬ್ಯಾಂಕಿಂಗ್ ಮಾಡಬಹುದು. ಅದರಿಂದಾಚೆಗೆ ಯಾವುದೂ ನಮ್ಮ ಕೈಯಲ್ಲಿಲ್ಲ. ಸದ್ಯದ ಸ್ಥಿತಿಗತಿಗೆ ಅನುಸಾರವಾಗಿ, ಡಬ್ಬಿಂಗ್ ಪ್ರಾಜೆಕ್ಟ್​ಗಳತ್ತ ಗಮನಹರಿಸಿದ್ದೇವೆ. ಅದರ ಜತೆಗೆ ರಿಯಾಲಿಟಿ ಶೋಗಳಲ್ಲಿಯೂ ಕಡಿಮೆ ಜನರ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಡಾನ್ಸ್ ಶೋಗಳಲ್ಲಿ ಸ್ಪರ್ಧಿಗಳಷ್ಟೇ ಭಾಗವಹಿಸುತ್ತಿದ್ದಾರೆ. ರಾತ್ರಿ 9 ಗಂಟೆಯಿಂದ ಕರ್ಫ್ಯೂ ಇರುವುದರಿಂದ 7ಕ್ಕೆ ಧಾರಾವಾಹಿಗಳ ಶೂಟಿಂಗ್ ಪ್ಯಾಕ್​ಅಪ್ ಮಾಡುತ್ತಿದ್ದೇವೆ’ ಎನ್ನುತ್ತಾರವರು.

    ಈ ಕುರಿತು ಮಾತನಾಡುವ ಕಲರ್ಸ್ ಕನ್ನಡದ ಬಿಜಿನೆಸ್ ಹೆಡ್ ಪರಮೇಶ್ವರ್, ‘ಏನೇ ಗುದ್ದಾಡಿದರೂ ಐದರಿಂದ ಏಳು ದಿನಗಳ ಎಪಿಸೋಡ್ ಬ್ಯಾಂಕಿಂಗ್ ಅಷ್ಟೇ ಮಾಡಬಹುದು. ಅದಕ್ಕಿಂತ ಹೆಚ್ಚು ಮಾಡಲು ಸಾಧ್ಯವೇ ಇಲ್ಲ. ಸರ್ಕಾರ ಶೂಟಿಂಗ್ ಸ್ಥಗಿತಗೊಳಿಸಿ ಎಂದು ಇಲ್ಲಿವರೆಗೂ ಹೇಳಿಲ್ಲ. ಸಿನಿಮಾದವರು ಚಿತ್ರೀಕರಣ ಬಂದ್ ಮಾಡಿದ್ದಾರೆ ನಿಜ. ಆದರೆ, ಅವರ ಕೆಲಸದ ಶೈಲಿಯೇ ಬೇರೆ, ಕಿರುತೆರೆಯ ಕೆಲಸವೇ ಬೇರೆ. ನಮ್ಮದು ನಿತ್ಯದ ಕಥೆ. ಹಾಗಾಗಿ ಏನೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದೆಲ್ಲವನ್ನೂ ಸೆಟ್​ನಲ್ಲಿ ಪಾಲಿಸುತ್ತಿದ್ದೇವೆ. ಸಾಧ್ಯವಾದಷ್ಟು ಕಡಿಮೆ ಸಂಖ್ಯೆಯ ಕಲಾವಿದರು ಮತ್ತು ತಂತ್ರಜ್ಞರಷ್ಟೇ ಬಳಸಿಕೊಳ್ಳುತ್ತಿದ್ದೇವೆ. ಒಂದು ವೇಳೆ ಕೋವಿಡ್ ಪಾಸಿಟಿವ್ ಬಂದರೆ, ಮುಲಾಜಿಲ್ಲದೆ ಶೂಟಿಂಗ್ ಸ್ಥಗಿತಗೊಳಿಸುತ್ತಿದ್ದೇವೆ. ಇನ್ನುಳಿದಂತೆ ‘ಬಿಗ್​ಬಾಸ್’ ರಿಯಾಲಿಟಿ ಶೋ ಅದೊಂದು ಪ್ರತ್ಯೇಕ ಲೋಕ. ಅಲ್ಲಿ ಯಾರ ಹಸ್ತಕ್ಷೇಪವೂ ಇಲ್ಲದಿರುವುದರಿಂದ ಅದರ ಪಾಡಿಗೆ ಅದು ನಡೆಯುತ್ತಿದೆ’ ಎನ್ನುತ್ತಾರೆ.

    ನಾಗಿಣಿಯ ರೀಲ್ ಆರತಕ್ಷತೆ; ಜೀ ಕನ್ನಡದಿಂದ ಹೀಗೊಂದು ಪ್ರಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts