More

    ಕೋವಿಡ್ ಸುರಕ್ಷತೆ ಕ್ರಮಗಳಿಗೆ ಆದ್ಯತೆ

    ಧಾರವಾಡ: ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ 6ರಿಂದ 9ನೇ ತರಗತಿ ವರೆಗೆ ವಿದ್ಯಾಗಮ, 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಶುಕ್ರವಾರದಿಂದ ಆರಂಭಗೊಂಡವು. ಮೊದಲ ದಿನ ಶೇ. 60ರಷ್ಟು ವಿದ್ಯಾರ್ಥಿ ಗಳು ಹಾಜರಾಗಿದ್ದರು. ಎಲ್ಲ ಶಾಲೆಗಳಲ್ಲಿ ಕೋವಿಡ್ ಸುರಕ್ಷತೆ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

    ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣ ಬಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಹಾಗೂ ನಗರ ಪ್ರದೇಶದ ಶಾಲೆಗಳಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಕುರಿತು ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕ ಪಾಲಕರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಗಿದೆ. ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯಿಂದ ಎಲ್ಲ ಶಾಲೆಗಳಿಗೆ ಸ್ಯಾನಿಟೈಸರ್, ಆರೋಗ್ಯ ತಪಾಸಣೆಗಾಗಿ ಥರ್ಮಲ್ ಸ್ಕ್ರೀನರ್ ನೀಡಲಾಗಿದೆ. ಮಕ್ಕಳು ತರಗತಿಗಳಿಗೆ ಹಾಜರಾಗುವುದು ಕಡ್ಡಾಯವಲ್ಲ. ಪಾಲಕರು ಒಪ್ಪಿಗೆ ನೀಡಿದರೆ ಮಾತ್ರ ಹಾಜರಾಗಬಹುದು ಎಂದರು.

    ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 45 ನಿಮಿಷದ 3 ತರಗತಿಗಳು ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ನಡೆಯುತ್ತವೆ. 6 ಮತ್ತು 7ನೇ ತರಗತಿಗಳು ಮಂಗಳವಾರ, ಗುರುವಾರ, ಶುಕ್ರವಾರ ಮತ್ತು 8ನೇ ವರ್ಗದ ತರಗತಿಗಳು ಮಂಗಳವಾರ, ಗುರುವಾರ, ಶನಿವಾರ ನಡೆಯುತ್ತವೆ. 10ನೇ ತರಗತಿಗಳು 6 ದಿನವೂ ನಡೆಯುತ್ತವೆ. ವಾರದ 6 ದಿನ ಬೆಳಗ್ಗೆ 10ರಿಂದ 1.30ರವರೆಗೆ ದ್ವಿತೀಯ ಪಿಯುಸಿಯ 4 ತರಗತಿಗಳು ನಡೆಯುತ್ತವೆ. ಕೊಠಡಿ ಲಭ್ಯತೆ ಹಾಗೂ ವಿದ್ಯಾರ್ಥಿಗಳ ಹಾಜರಾತಿ ಪರಿಗಣಿಸಿ ಸಮಯ ಹೊಂದಾಣಿಕೆ ಮಾಡಿಕೊಂಡು ಹೆಚ್ಚುವರಿ ತರಗತಿಗಳನ್ನು ನಡೆಸುವಂತೆ ಪಿಯು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಸೂಚಿಸಲಾಗಿದೆ ಎಂದರು. ಜಿ.ಪಂ. ಸಿಇಒ ಡಾ. ಸುಶೀಲಾ ಬಿ. ಮಾತನಾಡಿ, ಶಿಕ್ಷಕರು ಮತ್ತು ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ. ಯಾರಿಗಾದರೂ ಕೋವಿಡ್ ಲಕ್ಷಣ ಕಂಡುಬಂದಲ್ಲಿ ತುರ್ತು ಆರೋಗ್ಯ ಸೇವೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

    ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಎಲ್. ಹಂಚಾಟೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ. ಚಿದಂಬರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಶಿಕ್ಷಣಾಧಿಕಾರಿಗಳಾದ ಮಂಜುನಾಥ ಅಡವೇರ, ಶಿವಲೀಲಾ ಕಳಸಣ್ಣವರ, ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಎಸ್.ಎಸ್. ಲದ್ದಿಮಠ, ಇತರರಿದ್ದರು.

    ಆರು ತಿಂಗಳಿಗೊಮ್ಮೆ ಪೋಷಕರ ಸಭೆ ನಡೆಸಿ

    ಹುಬ್ಬಳ್ಳಿ: ನಗರದ ಪೆಂಡಾರಗಲ್ಲಿಯ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ (ನಂ.2)ಯಲ್ಲಿ ಶುಕ್ರವಾರ ವಿದ್ಯಾಗಮ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಸರ್ಕಾರಿ ಶಾಲೆಗಳ ಸುಧಾರಣೆಗಾಗಿ ಪ್ರತಿ 6 ತಿಂಗಳಿಗೊಮ್ಮೆ ಪೋಷಕರ ಸಭೆ ಆಯೋಜಿಸುವಂತೆ ಬಿಇಒ ಅವರಿಗೆ ಸೂಚಿಸಿದರು.

    ಬಿಇಒ ಶ್ರೀಶೈಲ ಕರಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಎಸ್. ಶಿವಳ್ಳಿಮಠ, ಮುಖ್ಯ ಶಿಕ್ಷಕರಾದ ದೀಪಾ ಹಿರೇಗೌಡ್ರ, ಜಿ.ಬಿ. ಹೊಸಮನಿ, ಎಸ್​ಡಿಎಂಸಿ ಸದಸ್ಯರಾದ ಲಕ್ಷ್ಮಣಸಾ ಖೋಡೆ, ಹನುಮಂತಸಾ ಖೋಡೆ, ಗಂಗಪ್ಪ ಅಂಗಡಿ, ಇತರರು ಇದ್ದರು. ಇದಕ್ಕೂ ಮುನ್ನ ಉಭಯ ಶಾಸಕರು ಶಾಲಾರಂಭದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.

    ಪ್ರಾಚಾರ್ಯರಿಗೆ ಸನ್ಮಾನ: ಇಲ್ಲಿನ ಕನಕದಾಸ ಶಿಕ್ಷಣ ಸಂಸ್ಥೆಯ ವಿಜಯನಗರ ಪಿಯು ಕಾಲೇಜಿನಲ್ಲಿ ತರಗತಿಗಳು ಆರಂಭಗೊಂಡಿದ್ದರಿಂದ ಜೈಂಟ್ಸ್ ಗ್ರುಪ್ ಆಫ್ ಹುಬ್ಬಳ್ಳಿ ಮೇನ್ ಪರಿವಾರ ಮತ್ತು ಕೆಎಸ್​ಎಸ್ ಮಹಾವಿದ್ಯಾಲಯದ ವತಿಯಿಂದ ಪ್ರಾಚಾರ್ಯರಾದ ಪಿಯು ಕಾಲೇಜಿನ ಸಂದೀಪ ಬೂದಿಹಾಳ, ಪದವಿ ಕಾಲೇಜಿನ ಬಸವರಾಜ ಮಡ್ಲಿ ಹಾಗೂ ಎಂ.ಇಡಿ ವಿಭಾಗದ ಸಂಯೋಜಕ ಡಾ. ಎಚ್.ವಿ ಬೆಳಗಲಿ ಅವರನ್ನು ಸನ್ಮಾನಿಸಲಾಯಿತು. ಜೈಂಟ್ಸ್ ಗ್ರುಫ್ ಆಫ್ ವಿದ್ಯಾನಗರ ಪರಿವಾರ ಹಾಗೂ ಜೈಂಟ್ಸ್ ಗ್ರುಫ್ ಆಫ್ ಹುಬ್ಬಳ್ಳಿ ಘಟಕಗಳು ಸಹಯೋಗ ನೀಡಿದ್ದವು.

    ಹುಬ್ಬಳ್ಳಿ ಜೈಂಟ್ಸ್ ವೇಲ್​ಫೇರ್ ಮೇನ್ ಪರಿವಾರದ ಅಧ್ಯಕ್ಷ ಶಾಂತಣ್ಣ ಕಡಿವಾಲ, ವಿದ್ಯಾನಗರ ಪರಿವಾರದ ಅಧ್ಯಕ್ಷ ಎಸ್.ಕೆ. ಬುರಡಿ, ಆರ್.ಎಂ. ಹಿರೇಮಠ, ವಿದ್ಯಾನಗರ ಪರಿವಾರದ ಅಧ್ಯಕ್ಷೆ ಸುಮಂಗಲಾ ಹಿರೇಮಠ, ನೇತ್ರದಾನ ಮತ್ತು ನೇತ್ರ ಚಿಕಿತ್ಸೆ ವಿಭಾಗದ ಅಧ್ಯಕ್ಷ ಸತೀಶ ನೂಲ್ವಿ, ಆಡಳಿತಾಧ್ಯಕ್ಷ ವಿ.ಎಸ್. ಸೊಪ್ಪಿಮಠ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts