More

    ದ.ಕ. ಪ್ರವೇಶಕ್ಕೆ ‘ನೆಗೆಟಿವ್’ ಕಡ್ಡಾಯ, ಕಾಸರಗೋಡು ನಿವಾಸಿಗಳಿಗೆ ಮತ್ತೆ ಸಂಕಷ್ಟ

    ಮಂಜೇಶ್ವರ/ಉಳ್ಳಾಲ: ಕೇರಳದಲ್ಲಿ ಕರೊನಾ ಸೋಂಕು ವ್ಯಾಪಕ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವೇಶಕ್ಕೆ ಕಠಿಣ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ಶನಿವಾರದಿಂದ ಕೋವಿಡ್ ನೆಗೆಟಿವ್ ಆರ್‌ಟಿ-ಪಿಸಿಆರ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ.

    ಗಡಿಭಾಗ ತಲಪಾಡಿಯಲ್ಲಿ ಶುಕ್ರವಾರ ಬೆಳಗ್ಗೆ ಕೋವಿಡ್ ಚೆಕ್ ಪಾಯಿಂಟ್ ತೆರೆದು ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದ ತಂಡ ಬಸ್‌ಗಳನ್ನು ತಡೆದು ಪ್ರಯಾಣಿಕರಲ್ಲಿ ಆರ್‌ಟಿ ಪಿಸಿಆರ್ ವರದಿ ಕೇಳಿರುವುದು ಗೊಂದಲ ಸೃಷ್ಟಿಸಿತು. ಪ್ರಯಾಣಿಕರು ವರದಿ ಇಲ್ಲ ಎಂದಾಗ, ಮಂಗಳೂರಿಗೆ ತೆರಳಲು ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ಪಟ್ಟು ಹಿಡಿದರು. ಗೊಂದಲದಿಂದಾಗಿ ವಾಹನಗಳ ಸರತಿ ಸಾಲು ಕಂಡು ಬಂತು. ಬಳಿಕ ಪೊಲೀಸರು ಧಾವಿಸಿ ಪರಿಸ್ಥಿತಿ ಹತೋಟಿಗೆ ತಂದರಲ್ಲದೆ, ಶನಿವಾರ ಕೇರಳದಿಂದ ಬರುವವರು ಆರ್‌ಟಿಪಿಸಿಆರ್ ವರದಿ ಕಡ್ಡಾಯವಾಗಿ ತರುವಂತೆ ಸೂಚಿಸಿದರು.

    ಕೇರಳ ಗಡಿ ಪ್ರದೇಶದಲ್ಲಿ ಆರ್‌ಟಿ ಪಿಸಿಆರ್ ಪರೀಕ್ಷೆ ನೆಗೆಟಿವ್ ವರದಿ ಇಲ್ಲದೆ ಯಾರೂ ಕರ್ನಾಟಕ ಪ್ರವೇಶಿಸಲು ಅವಕಾಶವಿಲ್ಲ. 4-5 ದಿನಗಳ ಮಟ್ಟಿಗೆ ನೆಗೆಟಿವ್ ವರದಿ ಇಲ್ಲದವರಿಗೆ ಗಡಿ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಆರ್‌ಟಿ ಪಿಸಿಆರ್ ಪರೀಕ್ಷೆ ನಡೆಸಿ ಕರ್ನಾಟಕ ಪ್ರವೇಶಿಸಲು ಅವಕಾಶ ಒದಗಿಸಲಾಗುವುದು. ವರದಿಗೆ 15 ದಿನಗಳ ಮಾನ್ಯತೆ ಇರುತ್ತದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

    ಮಂಗಳೂರು ತಹಸೀಲ್ದಾರ್ ಗುರುಪ್ರಸಾದ್, ತಾಲೂಕು ವೈದ್ಯಾಧಿಕಾರಿ ಡಾ.ಸುಜಯ್ ಭಂಡಾರಿ, ಕಂದಾಯ ನಿರೀಕ್ಷಕ ಸ್ಟೀಫನ್, ತಲಪಾಡಿ ಪಿಡಿಒ ಕೇಶವ ಪೂಜಾರಿ, ಗೃಹರಕ್ಷಕ ದಳ ಹಾಗೂ ಉಳ್ಳಾಲ ಪೊಲೀಸರು ಉಪಸ್ಥಿತರಿದ್ದರು.

    ದ.ಕ. ಜಿಲ್ಲಾಡಳಿತದ ಕಠಿಣ ನಿಯಮದಿಂದಾಗಿ ಕಾಸರಗೋಡು ಜಿಲ್ಲೆಯ ಸಾವಿರಾರು ಉದ್ಯೋಗಿಗಳು, ವಿದ್ಯಾರ್ಥಿಗಳು, ಇತರ ಅಗತ್ಯಗಳಿಗೆ ಪ್ರತಿದಿನ ತೆರಳುವ ಜನರು ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಲಪಾಡಿ ಗಡಿ ಪ್ರದೇಶದಲ್ಲಿ ಶುಕ್ರವಾರ 300 ಮಂದಿಯ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ಶನಿವಾರದಿಂದ ವರದಿ ಕಡ್ಡಾಯವಾಗಿರುವ ಹಿನ್ನೆಲೆ ಗಡಿ ಪ್ರದೇಶದಲ್ಲಿ ವಾಹನ ಹಾಗೂ ಜನದಟ್ಟಣೆ ಅಧಿಕಗೊಳ್ಳುವ ಸಾಧ್ಯತೆಗಳಿವೆ.

    ಈ ನಡುವೆ, ಇತರ ಗಡಿಗಳಾದ ಸಾರಡ್ಕ, ಪಾಣಾಜೆ, ಜಾಲ್ಸೂರುಗಳಲ್ಲಿ ಶುಕ್ರವಾರ ಯಾವುದೆ ತಪಾಸಣೆ ಇಲ್ಲದೆ ದೈನಂದಿನಂತೆ ವಾಹನ ಸಂಚಾರ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts