More

    ಮಂಗಳೂರಿನಲ್ಲಿ ಕರೊನಾ ಸವಾರಿ

    ಮಂಗಳೂರು: ಕರೊನಾ ಸೋಂಕಿಗೆ ಒಳಗಾಗುವವರ ಪೈಕಿ ಮಂಗಳೂರು ಸಹಿತ ಜಿಲ್ಲಾ ಕೇಂದ್ರ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವವರೇ ಅಧಿಕ. ಇಲಾಖೆ ಗುರುತಿಸಿದ ಅಧಿಕ ಸೋಂಕಿತರು ಇರುವ ಕಂಟೇನ್ಮೆಂಟ್ ಜೋನ್‌ಗಳು ಕೂಡ ನಗರ ಪ್ರದೇಶದಲ್ಲೇ ಹೆಚ್ಚು.

    ಜನದಟ್ಟಣೆ, ವಲಸೆ ಕಾರ್ಮಿಕರು, ವಿವಿಧ ರಾಜ್ಯ, ರಾಷ್ಟ್ರಗಳ ಜನರ ಓಡಾಟ, ಸೇರುವಿಕೆ ಅಧಿಕ ಕಂಡುಬರುತ್ತಿರುವುದು ಈ ಪರಿಸ್ಥಿತಿಗೆ ಮುಖ್ಯ ಕಾರಣ. ತಿಂಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಎರಡನೇ ಅಲೆ ಆರಂಭಗೊಂಡು ಕೋವಿಡ್ ಸೋಂಕು ವೇಗವಾಗಿ ಹರಡಲು ಆರಂಭವಾದ ಬಳಿಕ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿದೆ.

    ಸರ್ಕಾರದ ಮಾರ್ಗಸೂಚಿ ಆಧರಿಸಿ ಮದುವೆ, ಜನ್ಮದಿನ, ಅಂತ್ಯಕ್ರಿಯೆ, ಉತ್ತರಕ್ರಿಯೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದಾದ ಜನರ ಮಿತಿ ಬಗ್ಗೆ ಜಿಲ್ಲಾ ದಂಡಾಧಿಕಾರಿ ನಿರ್ದೇಶನ ನೀಡಿದ್ದಾರೆ. ಅನಿವಾರ್ಯ ಸಂದರ್ಭ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ, ಶುಭಾಶಯ ಕೋರಲು, ಭಾವನೆಗಳನ್ನು ವ್ಯಕ್ತಪಡಿಸಲು ದೂರವಾಣಿ, ಮೆಸೇಜ್ ಮುಂತಾದ ಮಾಧ್ಯಮಗಳನ್ನು ಬಳಸಿ ಎಂಬುದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಮನವಿ. ಕೇರಳದಲ್ಲಿ ಪ್ರಮುಖ ನಗರಗಳನ್ನು ಪ್ರವೇಶಿಸುವವರು ಕೋವಿಡ್ ನೆಗೆಟಿವ್ ವರದಿ ಅಥವಾ ಸೋಂಕು ನಿರೋಧಕ ಚುಚ್ಚುಮದ್ದು ಪಡೆದುಕೊಂಡಿರುವುದನ್ನು ಖಾತರಿಪಡಿಸುವ ದಾಖಲೆ ಹೊಂದಿರಬೇಕು ಎಂಬ ನಿಯಮವಿದೆ.

    ಎಲ್ಲಿ ಆರೋಗ್ಯ ಸೇವೆ?: ಎಲ್ಲ ಸರ್ಕಾರಿ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಸೋಂಕು ಪತ್ತೆ ಆರ್‌ಟಿ-ಪಿಸಿಆರ್ ಪರೀಕ್ಷೆ ಹಾಗೂ ಕೋವಿಡ್ ನಿರೋಧಕ ಚುಚ್ಚುಮದ್ದು ಸೌಲಭ್ಯಗಳಿವೆ. ಇದಲ್ಲದೆ ವಿವಿಧ ಪ್ರದೇಶಗಳಲ್ಲಿ ಏರ್ಪಡಿಸುತ್ತಿರುವ ಆರೋಗ್ಯ ಶಿಬಿರಗಳಲ್ಲಿ ಕೂಡ ಆರೋಗ್ಯ ಸೇವೆ ದೊರೆಯುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಆರ್‌ಟಿ ಪಿಸಿಆರ್ ಪರೀಕ್ಷೆಗೆ 800 ರೂ. ಹಾಗೂ ಕೋವಿಡ್ ನಿರೋಧಕ ಲಸಿಕೆಗೆ 250 ರೂ. ದರವನ್ನು ಸರ್ಕಾರ ನಿಗದಿಪಡಿಸಿದೆ. ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೆ ಈಗ ಹಿಂಜರಿಯುವ ಅಗತ್ಯ ಇಲ್ಲ. ಸೋಂಕಿಗೆ ಒಳಗಾದವರು ಮನೆಯಲ್ಲೇ ಪ್ರತ್ಯೇಕವಾಗಿದ್ದು ಚೇತರಿಸಿಕೊಳ್ಳುವ ಅವಕಾಶವಿದೆ. ಅವರನ್ನು ಸಮಾಜದಿಂದ ಪ್ರತ್ಯೇಕಿಸಿ ಇಡುವ ವ್ಯವಸ್ಥೆ ಈಗ ಇಲ್ಲ.

    ಪಾಸ್ ಸ್ವರೂಪ ತೀರ್ಮಾನವಾಗಿಲ್ಲ: ಮದುವೆ, ವಿವಿಧ ಸಭೆ ಸಮಾರಂಭಗಳಲ್ಲಿ ಭಾಗವಹಿಸುವವರಿಗೆ ಪಾಸ್ ನೀಡುವ ತೀರ್ಮಾನವಾಗಿದ್ದರೂ, ಮಂಗಳವಾರ ಸಾಯಂಕಾಲ ತನಕ ಪಾಲಿಕೆ ವ್ಯಾಪ್ತಿಯಲ್ಲಿ ವಿತರಿಸುವ ಪಾಸ್ ಯಾವ ರೀತಿಯಲ್ಲಿ ಇರುತ್ತದೆ ಎನ್ನುವ ಬಗ್ಗೆ ಚಿತ್ರಣವಿಲ್ಲ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತರು, ನಗರ, ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿಗಳು ಹಾಗೂ ಗ್ರಾಪಂನಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಪಾಸ್ ವಿತರಿಸುವ ಜವಾಬ್ದಾರಿ ಹೊಂದಿದ್ದಾರೆ. ಪಾಸ್‌ಗಳಿಗೆ ಬೇಡಿಕೆ ಬರುತ್ತಿವೆ. ಪಾಸ್‌ಗಳ ಸ್ವರೂಪ ಬಗ್ಗೆ ಶೀಘ್ರ ತೀರ್ಮಾನ ಆಗಲಿದ್ದು, ಬಳಿಕ ವಿತರಣೆ ಎಂದು ಪಾಲಿಕೆ ಆರೋಗ್ಯ ಅಧಿಕಾರಿ ಡಾ.ಮಂಜಯ್ಯ ಶೆಟ್ಟಿ ತಿಳಿಸಿದ್ದಾರೆ.

    ಸ್ವ ರಕ್ಷಣೆಗೆ ಇಲ್ಲಿದೆ ವಿಧಾನ: ಯಾವುದೇ ರೀತಿಯ ಜ್ವರ, ಮೈಕೈ ನೋವು, ವಿಪರೀತ ಶೀತ ಮುಂತಾದ ಲಕ್ಷಣ ಇರುವವರು ಸ್ವಯಂಪ್ರೇರಿತವಾಗಿ ಸರ್ಕಾರಿ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿಕೊಳ್ಳಬೇಕು. ಲಕ್ಷಣ ಇಲ್ಲದವರು ಕೂಡ ಕುಡಿಯಲು ಬಿಸಿ ನೀರನ್ನೇ ಬಳಸಬೇಕು. ಬಿಸಿ ನೀರಿನ ಹಬೆ ತೆಗೆದುಕೊಳ್ಳುವುದು ಸೂಕ್ತ. ಹೊರಗೆ ಓಡಾಡುವ ಸಂದರ್ಭ ಮಾಸ್ಕ್ ಧರಿಸುವುದು, ನಿಯಮಿತವಾಗಿ ಸ್ಯಾನಿಟೈಸರ್ ಬಳಸುವುದು ಮತ್ತು ಸಾಬೂನು ಬಳಸಿ ಕೈ ತೊಳೆದುಕೊಳ್ಳುವುದು, ದೈಹಿಕ ಅಂತರ ಪಾಲನೆ ಮುಂತಾದ ಹಳೇ ಮಾರ್ಗಸೂಚಿಯಲ್ಲಿದ್ದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

    ಹೊರಗೆ ಓಡಾಡುವ ಹೆಚ್ಚಿನ ಯುವಜನರಲ್ಲಿ ಕೋವಿಡ್ ಬಗ್ಗೆ ನಿರ್ಲಕ್ಷ್ಯ ಕಂಡುಬರುತ್ತಿದೆ. ಸಭೆ, ಸಮಾರಂಭ ಮತ್ತು ವೈಯಕ್ತಿಕ ಭೇಟಿ ಸಂದರ್ಭ ಸರ್ಕಾರದ ಮಾರ್ಗಸೂಚಿ ನಿರ್ಲಕ್ಷಿಸಲಾಗುತ್ತಿದೆ. ಸೋಂಕು ತಗುಲಿದರೂ, ಹೆಚ್ಚಿನ ಅಪಾಯವಿಲ್ಲದೆ ಗುಣ ಹೊಂದಬಹುದು. ಆದರೆ ಸೋಂಕಿಗೊಳಗಾದವರ ಸಂಪರ್ಕದಿಂದ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಹಿರಿಯರು ಪ್ರಾಣಾಪಾಯಕ್ಕೆ ಒಳಗಾಗಬಹುದು. ಸೋಂಕಿನ ಬಾಹ್ಯ ಲಕ್ಷಣಗಳೇ ಇಲ್ಲದೆ ಕೋವಿಡ್‌ಗೆ ತುತ್ತಾದವರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿದ್ದಾರೆ. ಯುವಜನತೆ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    ಡಾ.ಕಿಶೋರ್ ಜಿಲ್ಲಾ ಆರೋಗ್ಯ ಅಧಿಕಾರಿ.ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts