More

    ಮುಂದುವರಿದ ಕರೊನಾ ಕಾಟ

    ಮಂಗಳೂರು: ದ.ಕ ಜಿಲ್ಲೆಯಲ್ಲಿ ಕರೊನಾ ಕಾಟ ಮುಂದುವರಿದಿದ್ದು, ಗುರುವಾರ 90 ಮಂದಿಗೆ ಸೋಂಕು ದೃಢಪಟ್ಟಿದೆ.
    ಕುವೈತ್, ಸೌದಿ, ದುಬೈನಿಂದ ಮರಳಿರುವ 15 ಮಂದಿ, ಪ್ರಥಮ ಸಂಪರ್ಕದಲ್ಲಿ ತಗುಲಿರುವವರು 31 ಮಂದಿಯಾದರೆ, ಇನ್‌ಫ್ಲುಯೆಂಜಾ ಮಾದರಿಯ ಲಕ್ಷಣವಿದ್ದ 19 ಮಂದಿ ತೀವ್ರ ಉಸಿರಾಟ ತೊಂದರೆಯಿದ್ದ 8 ಮಂದಿಗೆ ಕರೊನಾ ಸೋಂಕು ತಗುಲಿದೆ. ಸರ್ಜರಿ ಪೂರ್ವ ಸ್ಯಾಂಪಲ್ ಪರೀಕ್ಷೆ ಮಾಡಿದಾಗ ಇಬ್ಬರಿಗೆ ದೃಢಪಟ್ಟಿದ್ದರೆ, ಇಬ್ಬರ ಸಂಪರ್ಕದ ವಿವರ ಶೋಧಿಸಲಾಗುತ್ತಿದೆ.
    ಕರೊನಾ ಚಿಕಿತ್ಸೆ ಪೂರ್ತಿಗೊಂಡ 33 ಮಂದಿಯನ್ನು ಆಸ್ಪತ್ರೆಯಿಂದ ಗುರುವಾರ ಬಿಡುಗಡೆಗೊಳಿಸಲಾಗಿದೆ. 113 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು 293 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಬಂದಿರುವ 130ರಲ್ಲಿ 90 ಪಾಸಿಟಿವ್. ಇನ್ನೂ 427 ಸ್ಯಾಂಪಲ್ ಪರೀಕ್ಷೆ ವರದಿ ಬರಲು ಬಾಕಿ ಇದೆ. 84 ಮಂದಿಯನ್ನು ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಲಾಗಿದೆ.
    ಲಿವರ್ ಕಾಯಿಲೆ, ಡಯಾಬಿಟಿಸ್, ಹೃದ್ರೋಗ, ನ್ಯುಮೋನಿಯಾ ಇರುವ 57ರ ಮಹಿಳೆಯನ್ನು ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಪಾರ್ಕಿನ್ಸನ್ ಕಾಯಿಲೆ, ನ್ಯುಮೋನಿಯಾ ಇರುವ 78ರ ಗಂಡಸು, ಮಧುಮೇಹ ಹಾಗೂ ಹೃದ್ರೋಗ ಇರುವ 52ರ ಹೆಂಗಸು ಮತ್ತು ಅಸ್ತಮಾ ರೋಗ ಇರುವ 38ರ ವ್ಯಕ್ತಿಯನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಶಾಸಕ ಭರತ್ ಶೆಟ್ಟಿಗೆ ಸೋಂಕು
    ದ.ಕ ಜಿಲ್ಲೆಯಲ್ಲಿ ಗುರುವಾರ ವೈದ್ಯರೂ ಆಗಿರುವ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರಿಗೆ ಸೋಂಕು ತಗುಲಿದೆ. ಕೋವಿಡ್ ನಿರ್ವಹಣೆಯ ಪೂರ್ತಿ ಉಸ್ತುವಾರಿ ವಹಿಸಿದ್ದ ದ.ಕ ಜಿಲ್ಲಾ ಆರೋಗ್ಯಾಧಿಕಾರಿ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ, ಕೋವಿಡ್ ಪ್ರಯೋಗಾಲಯದ ಮುಖ್ಯಸ್ಥರೂ ಕರೊನಾ ಪಾಸಿಟಿವ್ ಆಗಿದ್ದಾರೆ. ಎರಡು ದಿನಗಳ ಹಿಂದೆ ಉಳ್ಳಾಲದಲ್ಲಿ ನಡೆಸಲಾಗಿದ್ದ ರ‌್ಯಾಂಡಮ್ ಕರೊನಾ ಟೆಸ್ಟ್‌ನಲ್ಲಿ ಒಟ್ಟು 13 ಮಂದಿಗೆ ಕರೊನಾ ದೃಢಪಟ್ಟಿದೆ. ಮಂಗಳೂರಿನಲ್ಲಿ 7 ದಿನ ಹಿಂದೆ ಹುಟ್ಟಿದ ಮಗುವಿಗೆ ಕರೊನಾ ಸೋಂಕು ದೃಢಪಟ್ಟಿದೆ.ತಾಯಿಯಿಂದಲೇ ಮಗುವಿಗೆ ಹರಡಿರಬಹುದು ಎನ್ನಲಾಗಿದೆ.

    ಕಲ್ಲಡ್ಕದ ವೃದ್ಧ ಸಾವು
    ದ.ಕ ಜಿಲ್ಲೆಯಲ್ಲಿ ಬಂಟ್ವಾಳ ತಾಲೂಕಿನ ಕಲ್ಕಡ್ಕ ನಿವಾಸಿ 49 ವರ್ಷದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಕರೊನಾಗೆ ಬಲಿಯಾಗಿದ್ದಾರೆ. ಕಿಡ್ನಿ, ಟಿ.ಬಿ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಕರೊನಾಗೆ ಬಲಿಯಾದವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

    ಬಂಟ್ವಾಳದಲ್ಲಿ ಮುಂದುವರಿದ ಸಾವಿನ ಸರಣಿ
    ಬಂಟ್ವಾಳ: ಕಲ್ಲಡ್ಕದ ವ್ಯಕ್ತಿಯೊಬ್ಬರು ಗುರುವಾರ ಅಸುನೀಗುವ ಮೂಲಕ ತಾಲೂಕಿನಲ್ಲಿ ಈವರೆಗೆ ಕರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿದೆ. ಈ ವ್ಯಕ್ತಿಯ ಪುತ್ರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ. ಕೋವಿಡ್ ಬಾಧಿತ ಇಬ್ಬರು ರೋಗಿಗಳು ಚಿಕಿತ್ಸೆಗೆ ದಾಖಲಾದ ಹಿನ್ನೆಲೆಯಲ್ಲಿ ತುಂಬೆಯ ಖಾಸಗಿ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಮೊಡಂಕಾಪಿನಲ್ಲಿ ವೃದ್ಧರೊಬ್ಬರಿಗೆ ಕರೊನಾ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಅವರ ಮನೆ ಹಾಗೂ ಅಂಗಡಿ ಸೀಲ್‌ಡೌನ್ ಮಾಡಲಾಗಿದೆ. ಇದೇ ಪರಿಸರದ ವಿದ್ಯಾಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವೂ ಇದ್ದು ಜನರ ಆತಂಕ ಹೆಚ್ಚಾಗಿದೆ. ತಲಪಾಡಿ ಎಂಬಲ್ಲಿ ವ್ಯಕ್ಯಿಯೊಬ್ಬರ ವರದಿ ಪಾಸಿಟಿವ್ ಬಂದ ಕಾರಣ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.

    ಕಾಸರಗೋಡಿನಲ್ಲಿ ಯುವಕ ಮೃತ್ಯು: ನಗರದ ವಸತಿಗೃಹದಲ್ಲಿ ಕೋವಿಡ್-19 ನಿಗಾದಲ್ಲಿದ್ದ ಉತ್ತರಪ್ರದೇಶ ಕನೌಜ್ ಜಿಲ್ಲೆಯ ನಿವಾಸಿ ಬಂಟಿ(23) ಎಂಬುವರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವಸತಿಗೃಹವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಬಂಟಿ ಅವರ ಕೋವಿಡ್ ತಪಾಸಣಾ ವರದಿ ಇನ್ನಷ್ಟೇ ಲಭಿಸಬೇಕಿದೆ. ಬಂಟಿ ಇಬ್ಬರೊಂದಿಗೆ ಮಂಗಳಾ ಎಕ್ಸ್‌ಪ್ರೆಸ್ ರೈಲಲ್ಲಿ ಬುಧವಾರ ಬೆಳಗ್ಗೆ ಕಾಸರಗೋಡಿಗೆ ಬಂದಿದ್ದು, ಇವರನ್ನು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯ ವಸತಿಗೃಹದಲ್ಲಿ ನಿಗಾದಲ್ಲಿರಿಸಲಾಗಿತ್ತು.
    ಐವರಲ್ಲಿ ದೃಢ: ಜಿಲ್ಲೆಯ ಐದು ಮಂದಿ ಸಹಿತ ಕೇರಳದಲ್ಲಿ ಗುರುವಾರ 160 ಮಂದಿ ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಬಾಧಿಸಿದವರಲ್ಲಿ 4 ಮಂದಿ ವಿದೇಶಗಳಿಂದ, ಒಬ್ಬರು ಬೆಂಗಳೂರಿನಿಂದ ಬಂದವರಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

    ಕಲ್ಲಡ್ಕ, ತಲಪಾಡಿ ಮಸೀದಿ ಬಂದ್: ಕರೊನಾ ಸೋಂಕಿನಿಂದ ಮೃತಪಟ್ಟ ಕಲ್ಲಡ್ಕದ ನಿವಾಸಿ ಕಲ್ಲಡ್ಕದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದು, ಈ ಆಸ್ಪತ್ರೆಗೆ ಪರಿಸರದ ಹೆಚ್ಚಿನವರು ತೆರಳುತ್ತಾರೆ. ಇವರು ಮಸೀದಿಗೂ ಆಗಮನಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಲ್ಲಡ್ಕ ಜುಮಾ ಮಸೀದಿಯನ್ನೂ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಹಾಗೆಯೇ ಬಿ.ಸಿ.ರೋಡ್ ತಲಪಾಡಿಯ ಮಹಿಳೆಯೊಬ್ಬರಿಗೆ ಕರೊನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ತಲಪಾಡಿ ಮಸೀದಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಮಸೀದಿಗಳಲ್ಲಿ ಕೆಲಸ ನಿರ್ವಹಿಸುವ ಗುರುಗಳನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts