More

    ಕರೊನಾನಿಯಮ ಉಲ್ಲಂಘನೆಗೆ ದಂಡಾಸ್ತ್ರ: ಅಂಗಡಿಮಾಲೀಕರಿಗೆ 5 ಸಾವಿರ ರೂ. ದಂಡ

    ಕರೊನಾ ನಿಯಮ ಅಲಕ್ಷಿಸಿದ ಜನತೆಗೆ ದ.ಕ ಮತ್ತು ಉಡುಪಿ ಜಿಲ್ಲಾಡಳಿತ ಮಂಗಳವಾರ ಇನ್ನಷ್ಟು ಬಿಸಿ ಮುಟ್ಟಿಸಿವೆ. ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಎರಡನೇ ದಿನವೂ ಕಾರ್ಯಾಚರಣೆ ಮುಂದುವರಿಸಿದರು. ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಕೂಡ ಜನಜಾಗೃತಿ ಮೂಡಿಸಿ, ಎಚ್ಚರಿಕೆ ನೀಡಿದರು. ನಿಯಮೋಲ್ಲಂಘಿಸಿದ ಅಂಗಡಿ ಮಾಲೀಕರು, ಜನರು ದಂಡ ಭರಿಸಬೇಕಾಯಿತು.

    ಮಂಗಳೂರು: ನಗರ ವ್ಯಾಪ್ತಿಯ ಬಂದರು ಪ್ರದೇಶ, ಸ್ಟೇಟ್ ಬ್ಯಾಂಕ್ ರಸ್ತೆ, ನೆಲ್ಲಿಕಾಯಿ ರಸ್ತೆ, ಅಜೀಜುದ್ದೀನ್ ರಸ್ತೆ ಮತ್ತಿತರ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಂಗಳವಾರ ಭೇಟಿ ನೀಡಿ ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸುವಂತೆ ತಿಳಿಸಿ, ಉಲ್ಲಂಘಿಸಿದ ಕೆಲವು ಟ್ರೇಡರ್ಸ್‌ಗಳಿಗೆ ದಂಡ ವಿಧಿಸಲು ಸೂಚಿನೆ ನೀಡಿದರು.

    ತಮ್ಮ ಕಚೇರಿ ಆವರಣದಲ್ಲಿ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ಪ್ರವೇಶವಿಲ್ಲ, ಸರ್ಕಾರಿ ಸೇರಿದಂತೆ ಖಾಸಗಿ ಕಚೇರಿಗಳಲ್ಲಿಯೂ ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು. ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಮಾಸ್ಕ್ ನೀಡಿ ಎಚ್ಚರಿಕೆ ನೀಡಿದರು.

    ಸ್ಟೇಟ್ ಬ್ಯಾಂಕ್ ವೃತ್ತದ ಬಳಿ ಕೆಲ ಖಾಸಗಿ ಬಸ್‌ಗಳು ಹಾಗೂ ಬೈಕ್ ಸವಾರರನ್ನು ತಡೆದು ಮಾಸ್ಕ್ ಧರಿಸುವಂತೆ ಹೇಳಿದರು. ಮಾಸ್ಕ್ ಇಲ್ಲದೇ ಬಸ್‌ನಲ್ಲಿ ಪ್ರಯಾಣಿಸುವ ಜನರಿಗೆ ಬಸ್ ಒಳಗಡೆ ಪ್ರವೇಶಿಸಲು ಬಿಡಬೇಡಿ ಎಂದು ಚಾಲಕ ಹಾಗೂ ಕಂಡಕ್ಟರ್‌ಗೆ ಸೂಚನೆ ನೀಡಿದರು.

    ಬಂದರು ಪ್ರದೇಶದ ಜೆ.ಎಂ ರಸ್ತೆಯಲ್ಲಿ ಮಾಸ್ಕ್ ಧರಿಸದ ಆಟೋ ಚಾಲಕನ ವಾಹನ ಸಂಖ್ಯೆ ನಮೂದಿಸಿ ದಂಡ ವಿಧಿಸಲು ತಿಳಿಸಿದರು. ಕೋವಿಡ್ ನಿಯಮ ಉಲ್ಲಂಘನೆ ಮಾಡುವ ಪ್ರಯಾಣಿಕರನ್ನು ಆಟೋದಲ್ಲಿ ಹತ್ತಿಸಬಾರದು ಎಂದು ಸೂಚನೆ ನೀಡಿದರು.
    ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಉಪ ವಿಭಾಗ ಅಧಿಕಾರಿ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಚಂದ್ರ ಬಾಯಾರಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

    ಕಂಪನಿ ಬಂದ್ ಮಾಡಿಸಿವೆ!: ನಗರದ ಅಜೀಜುದ್ದೀನ್ ರಸ್ತೆಯ ಕಂಪನಿಯೊಂದರ ಮಳಿಗೆಗೆ ಭೇಟಿ ನೀಡಿ ಮಾಸ್ಕ್ ಧರಿಸದವರನ್ನು ತರಾಟೆಗೆ ತೆಗೆದುಕೊಂಡರು. ಮಾಲೀಕನಿಗೆ 5,000 ರೂ.ದಂಡ ವಿಧಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಮಾಸ್ಕ್ ಧರಿಸದೆ ಕೆಲಸ ಮಾಡುವುದು ಕಂಡುಬಂದರೆ ಕಂಪನಿ ಬಂದ್ ಮಾಡುವ ಎಚ್ಚರಿಕೆಯನ್ನೂ ನೀಡಿದರು. ಅದೇ ರಸ್ತೆಯ ಇನ್ನೊಂದು ಅಂಗಡಿಯ ಮಾಲೀಕ ಹಾಗೂ ಸಿಬ್ಬಂದಿ ಮಾಸ್ಕ್ ಧರಿಸದೆ ಕುಳಿತಿರುವುದನ್ನು ಕಂಡು ಮಾಲೀಕರಿಗೆ 5,000 ರೂ.ದಂಡ ವಿಧಿಸಲು ಸೂಚಿಸಿದರು. ಗ್ರಾಹಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆಯಾ ಅಂಗಡಿ ಮಾಲೀಕರು ನಿಗಾ ವಹಿಸಬೇಕು ಇಲ್ಲದಲ್ಲಿ, ಮಾಲೀಕರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.ಬಂದರಿನ ಮತ್ತೊಂದು ಅಂಗಡಿಗೂ ದಾಳಿ ನಡೆಸಿ, ಮಾಸ್ಕ್ ಧರಿಸದೆ ಕೆಲಸ ಮಾಡುತ್ತಿದ್ದ ಮಾಲೀಕನಿಗೆ ದಂಡ ಕಟ್ಟಲು ತಿಳಿಸಿದರು.

    ಉಲ್ಲಂಘನೆ ಪ್ರಮಾಣಕ್ಕೆ ತಕ್ಕಂತೆ ದಂಡ: ಎರಡು ಪ್ರತ್ಯೇಕ ಮಳಿಗೆಗಳಿಗೆ ಪ್ರತ್ಯೇಕ ದರವಾಗಿ 1,000 ರೂ.ಹಾಗೂ 5,000 ರೂ.ದಂಡ ವಿಧಿಸಿರುವ ಹಿನ್ನೆಲೆ ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ. ಈ ಬಗ್ಗೆ ವಿಜಯವಾಣಿಗೆ ಮಾಹಿತಿ ನೀಡಿದ ಮನಪಾ ಪ್ರಭಾರ ಆಯುಕ್ತ ದಿನೇಶ್ ಕುಮಾರ್, ಉಲ್ಲಂಘನೆ ಪ್ರಮಾಣಕ್ಕೆ ಅನುಗುಣವಾಗಿ 50 ಸಾವಿರ ರೂ.ವರೆಗೂ ದಂಡ ವಿಧಿಸಲು ಅವಕಾಶ ಇದೆ. ಆದರೆ ಜನರಲ್ಲಿ ಅರಿವು ಮೂಡಿಸುವುದೇ ನಮ್ಮ ಉದ್ದೇಶ. ಹಾಗಾಗಿ ಕನಿಷ್ಠ ಮೊತ್ತದ ದಂಡ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸೋಮವಾರ ಬಟ್ಟೆ ಮಳಿಗೆಯಲ್ಲಿ ಪರಿಶೀಲನೆಗೆ ತೆರಳಿದ ವೇಳೆ ಕೆಲವರು ಮಾಸ್ಕ್ ಹಾಕಿದ್ದರೂ, ಮೂಗಿನ ಕೆಳಗಿತ್ತು. ನಿರ್ಲಕ್ಷೃ ಹಿನ್ನೆಲೆ ಹಾಗೂ ಕಾರ್ಯಾಚರಣೆಯ ಮೊದಲ ದಿನವಾದ್ದರಿಂದ 1,000 ರೂ. ದಂಡ ಹಾಕಲಾಗಿತ್ತು, ಎರಡನೇ ದಿನವಾದ ಮಂಗಳವಾರ ಬಂದರು ಪ್ರದೇಶದ ಮಳಿಗೆಯಲ್ಲಿ ಪರಿಶೀಲಿಸದಾಗ ಉಲ್ಲಂಘನೆಯ ಪ್ರಮಾಣ ಹೆಚ್ಚಿದ್ದರಿಂದ 5,000 ರೂ.ಹಾಕಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts