More

    ಕರೊನಾ ಕರ್ತವ್ಯ ನಿರ್ವಹಿಸಿದ ಟ್ಯಾಕ್ಸಿಗಳಿಗೆ ಸಿಗಲಿಲ್ಲ ಬಾಡಿಗೆ

    ಹರೀಶ್ ಮೋಟುಕಾನ, ಮಂಗಳೂರು
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಕ್ವಾರಂಟೈನ್ ಪರಿಶೀಲನೆಗೆ ತೆರಳಲು ಬಾಡಿಗೆಗೆ ಪಡೆದ ಟ್ಯಾಕ್ಸಿಗಳ ಬಾಡಿಗೆ ನಾಲ್ಕು ತಿಂಗಳು ಕಳೆದರೂ ಪಾವತಿಯಾಗಿಲ್ಲ. ಟ್ಯಾಕ್ಸಿ ಮಾಲೀಕರು, ಚಾಲಕರು ಬ್ಯಾಂಕ್ ಸಾಲದ ಕಂತು ಪಾತಿಸಲು, ಕುಟುಂಬ ನಿರ್ವಹಣೆಗೆ ಮಾಡಲು ಪರದಾಡುವಂತಾಗಿದೆ.

    ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಹಾಗೂ ವಿದೇಶಗಳಿಂದ ಆಗಮಿಸಿದವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಆಶಾ ಕಾರ್ಯಕರ್ತರು, ಪೊಲೀಸರು, ಆರೋಗ್ಯ ಸಹಾಯಕಿಯರು ದಿನಕ್ಕೆ 80 ಮನೆಗಳಿಗೆ ತೆರಳಿ ಆರೋಗ್ಯ ಪರಿಶೀಲನೆ ಮಾಡಬೇಕಾಗಿತ್ತು. ಕ್ವಾರಂಟೈನ್‌ನಲ್ಲಿ ಇದ್ದವರು ಮನೆಯಿಂದ ಹೊರಗೆ ತಿರುಗಾಡದಂತೆ ಎಚ್ಚರಿಕೆ ನೀಡಿ ಬರುತ್ತಿದ್ದರು. ಮೇಲ್ವಿಚಾರಣಾ ತಂಡದವರಿಗೆ ಓಡಾಡಲು ಜಿಲ್ಲಾಡಳಿತದ ವತಿಯಿಂದ ಬಾಡಿಗೆ ಟ್ಯಾಕ್ಸಿಗಳನ್ನು ನೀಡಲಾಗಿತ್ತು.

    ಮನವಿ ಮಾಡಿದರೂ ಪ್ರಯೋಜನವಿಲ್ಲ: ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಶನ್ ಮೂಲಕ ಜಿಲ್ಲಾಡಳಿತ ಮೊದಲ ಹಂತದಲ್ಲಿ 80 ಟ್ಯಾಕ್ಸಿಗಳನ್ನು ಪಡೆದಿತ್ತು. 21 ದಿನಗಳ ಕರ್ತವ್ಯ ನಿರ್ವಹಿಸಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು. ದಿನಕ್ಕೆ ತಲಾ 2,350 ರೂ.ಬಾಡಿಗೆ ಪಾವತಿಯಾಗಿದೆ. 8 ದಿನದ ಬಳಿಕ ಮತ್ತೆ 20 ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಏ.28ರಿಂದ ಜು.9 ತನಕ ಅವರನ್ನು 73 ದಿನಗಳ ಕಾಲ ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿದೆ. ಕರೊನಾ ಭಯದ ನಡುವೆಯೂ ಕರ್ತವ್ಯ ನಿರ್ವಹಿಸಿದ್ದೇವೆ. ವಿವರಗಳನ್ನು ವ್ಯವಸ್ಥಿತವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ದಾಖಲಿಸಲಾಗಿದೆ. ಈವರೆಗೆ ಬಿಲ್ ಪಾವತಿಯಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಟ್ಯಾಕ್ಸಿ ಮಾಲೀಕರು ತಿಳಿಸಿದ್ದಾರೆ.

    ಲೋನ್ ಕಟ್ಟಲು ಸಂಕಷ್ಟ: ಬ್ಯಾಂಕುಗಳಿಂದ ಲೋನ್ ಮಾಡಿ ಟ್ಯಾಕ್ಸಿ ಖರೀದಿಸಿದ್ದೇನೆ. ಪ್ರತಿ ತಿಂಗಳು ಕಂತು ಕಟ್ಟಬೇಕು. ತೆರಿಗೆ, ಇನ್ಸೂರೆನ್ಸ್ ಪಾವತಿಸಬೇಕು. ನಾಲ್ಕು ತಿಂಗಳು ಕಳೆದರೂ ಬಾಡಿಗೆ ಪಾವತಿಯಾಗದ ಕಾರಣ ಸಾಲದ ಕಂತು ಪಾವತಿ ಮಾಡಿಲ್ಲ. ಬ್ಯಾಂಕ್ ಮ್ಯಾನೇಜರ್ ಕರೆ ಮಾಡಿ ಲೋನ್ ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ. ಬಡ್ಡಿಯ ಮೇಲೆ ಬಡ್ಡಿ ಹಾಕುತ್ತಿದ್ದಾರೆ. ಮನೆ ಬಾಡಿಗೆ ಸೇರಿ ಕುಟುಂಬದ ನಿರ್ವಹಣೆಗೆ ಸಮಸ್ಯೆಯಾಗಿದೆ. ನಮಗೆ ಬರಬೇಕಾದ ಹಣ ಆದಷ್ಟು ಬೇಗ ಸಿಕ್ಕಿದರೆ ಸಾಲದಿಂದ ಮುಕ್ತಿ ಹೊಂದಬಹುದು ಎಂದು ಟ್ಯಾಕ್ಸಿ ಚಾಲಕ ಜನಾರ್ದನ ತಿಳಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20ಕ್ಕಿಂತಲೂ ಅಧಿಕ ಟ್ಯಾಕ್ಸಿ ಮಾಲೀಕ, ಚಾಲಕರಿಗೆ ಕರೊನಾ ಕರ್ತವ್ಯದ 73 ದಿನಗಳ ಬಾಡಿಗೆ ಪಾವತಿಗೆ ಬಾಕಿ ಇದೆ. ಜಿಲ್ಲಾಧಿಕಾರಿ, ಆರ್‌ಟಿಒಗೆ ಸಲ್ಲಿಸಿದ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ಬ್ಯಾಂಕ್ ಸಾಲ ಇರುವವರಿಗೆ ಬಡ್ಡಿಯ ಮೇಲೆ ಬಡ್ಡಿ ಬೀಳುತ್ತಿದೆ. ಸಾಲದ ಕಂತು ಪಾವತಿ ಮಾಡಲು ಬ್ಯಾಂಕ್‌ಗಳಿಂದ ಒತ್ತಡ ಬರುತ್ತಿದೆ. ಆದಷ್ಟು ಶೀಘ್ರ ಬಾಡಿಗೆ ಪಾವತಿಯಾಗಬೇಕು.
    -ಜನಾರ್ದನ ವಿಟ್ಲ, ಟ್ಯಾಕ್ಸಿ ಚಾಲಕ

    ಉಡುಪಿ ಜಿಲ್ಲೆಯಲ್ಲಿ ಕರೊನಾ ಸಂದರ್ಭ ಜಿಲ್ಲಾಡಳಿತ ಪಡೆದಿದ್ದ ಟ್ಯಾಕ್ಸಿಗಳ ಬಾಡಿಗೆ ಸಕಾಲದಲ್ಲಿ ಪಾವತಿಯಾಗಿದೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಟ್ಯಾಕ್ಸಿಗಳ ಬಾಡಿಗೆ ಬಿಡುಗಡೆಗೆ ಸಿದ್ಧವಾಗಿದೆ. ಒಂದೆರಡು ದಿನಗಳಲ್ಲಿ ಅವರ ಕೈಸೇರಲಿದೆ.
    -ರಮೇಶ್ ಕೋಟ್ಯಾನ್, ಅಧ್ಯಕ್ಷರು, ಟ್ಯಾಕ್ಸಿ ಅಸೋಸಿಯೇಶನ್ ಉಡುಪಿ

    ಕರೊನಾ ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆಗೆ ಪಡೆದುಕೊಂಡ ಕೆಲವು ಟ್ಯಾಕ್ಸಿಗಳ ಬಾಡಿಗೆ ಪಾವತಿಗೆ ಬಾಕಿ ಇರುವುದು ನಿಜ. ಕೆಲವರು ಬೇಕಾಬಿಟ್ಟಿಯಾಗಿ ಬಿಲ್ ಮಾಡಿ ಕೊಟ್ಟಿದ್ದಾರೆ. ಕರೊನಾ ಸಂದರ್ಭದಲ್ಲಿ ಹಣದ ದುರ್ಬಳಕೆ ತಡೆಯುವ ಉದ್ದೇಶದಿಂದ ನಿಜವಾಗಿ ಎಷ್ಟು ಬಳಕೆಯಾಗಿದೆ ಎನ್ನುವುದನ್ನು ಪರಿಶೀಲಿಸಿ ಅಷ್ಟು ಬಾಡಿಗೆಯನ್ನು ವಾರದೊಳಗೆ ನೀಡಲಾಗುವುದು.
    -ಡಾ.ರಾಜೇಂದ್ರ ಕೆ.ವಿ, ಜಿಲ್ಲಾಧಿಕಾರಿ ದಕ್ಷಿಣ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts