More

    ಮುಖವನ್ನು ಮುಚ್ಚಿಕೊಳ್ಳಿ… ಅಯುರ್ವೇದದಲ್ಲಿ ವಿವರಿಸಿರುವ ಸನ್ನಡತೆಯ ಬಗ್ಗೆ ಮಾಹಿತಿ

    ಮುಖವನ್ನು ಮುಚ್ಚಿಕೊಳ್ಳಿ... ಅಯುರ್ವೇದದಲ್ಲಿ ವಿವರಿಸಿರುವ ಸನ್ನಡತೆಯ ಬಗ್ಗೆ ಮಾಹಿತಿ

    ಸದಾಚಾರದ ಸೂಕ್ಷ್ಮ ವಿಚಾರಗಳನ್ನು ನಾಜೂಕಿನಿಂದ ವಿವರಿಸಿರುವ ಆಯುರ್ವೆದ ಸಾಮಾಜಿಕ ಸನ್ನಡತೆಯನ್ನು ಉತ್ಕೃಷ್ಟ ರೀತಿಯಲ್ಲಿ ಬಿಂಬಿಸಿದ್ದನ್ನು ಕಂಡರೆ ದಂಗಾಗುತ್ತದೆ. ಯಾವುದೋ ಕಾರಣ ನೀಡಿ ನೆಲವನ್ನು ಉಗುರಿನಿಂದ ಕೆರೆಯಬಾರದು, ಉಗುರಿನಿಂದ ಹುಲ್ಲನ್ನು ತುಂಡರಿಸಬಾರದು, ಮಣ್ಣಿನ ಹೆಂಟೆಯೊಂದಿಗೆ ಉಗುರಿನಿಂದ ಕೆಲಸಮಾಡಬಾರದು. ಅಲ್ಲಿರುವ ಮಲಿನತೆ, ಸೂಕ್ಷ್ಮಕ್ರಿಮಿಗಳು ದೇಹ ಸೇರದಂತೆ ಪುರಾತನ ಭಾರತೀಯರು ಎಚ್ಚರ ವಹಿಸುತ್ತಿದ್ದ ರೀತಿ ನೋಡಿದರೆ ಸ್ವಚ್ಛ ಭಾರತದ ಉತ್ತುಂಗ ಅಂದಿತ್ತು ಎಂಬುದರ ಅರಿವಾಗುತ್ತದೆ. ಸುಖವನ್ನು ಇನ್ನೊಬ್ಬರಿಗೆ ಹಂಚದೆ ಒಬ್ಬರೇ ಅನುಭವಿಸುವುದು ಸರಿಯಲ್ಲ. ಹಿಂದುಮುಂದು ನೋಡದೆ, ಪರಾಮಶಿಸದೆ ಎಲ್ಲ ವಿಚಾರಗಳನ್ನು ನಂಬುವುದೂ ಸರಿಯಲ್ಲ. ಹಾಗೆಂದು ಎಲ್ಲರ ಬಗ್ಗೆ, ಎಲ್ಲ ವಿಷಯಗಳ ಕುರಿತು ಅಪನಂಬಿಕೆಯೂ ಸಲ್ಲದು. ಕಾರಣದ ಬಗ್ಗೆ ಅಸಮಾಧಾನಪಡಬಹುದೇ ಹೊರತು ಫಲಿತಾಂಶದ ಕುರಿತು ಅಸಮಾಧಾನ ಮಾಡಿಕೊಳ್ಳಬಾರದು ಎಂದು ಭಾವಪ್ರಕಾಶ ಗ್ರಂಥದಲ್ಲಿ ಹೇಳಿದ್ದರೆ ಚರಕಸಂಹಿತೆಯಲ್ಲೂ ಕಾರಣದ ಕುರಿತು ಅಸೂಯೆ ಉಂಟಾದರೂ ಅದಕ್ಕೆ ಅರ್ಥವಿದೆ, ಫಲದ ಬಗ್ಗೆ ಅಸೂಯೆಪಡುವುದು ಯೋಗ್ಯವಲ್ಲ ಎಂದಿದೆ.

    ದೊಡ್ಡ ಶಬ್ದದೊಂದಿಗೆ ಗಹಗಹಿಸಿ ನಗುವುದು, ಅಸಹ್ಯ ಶಬ್ದದೊಂದಿಗೆ ಅಪಾನವಾತವನ್ನು ಹೊರಹಾಕುವುದು ಸಹ್ಯವಲ್ಲ. ಆಕಳಿಕೆ, ಸೀನು ಹಾಗೂ ನಗು ಬರುವ ಸಂದರ್ಭಗಳಲ್ಲಿ ಮುಖವನ್ನು ಮುಚ್ಚಿರಲೇಬೇಕು ಎಂದು ಆಯುರ್ವೆದದ ಆದಿಗ್ರಂಥ ಚರಕಸಂಹಿತೆಯೇ ಸಾವಿರಾರು ವರ್ಷಗಳ ಹಿಂದೆಯೇ ಸಾರಿದೆ. ಬುದ್ಧಿವಂತನಾದವನು ಬಾಯಿ ತೆರೆದು ಇರಬಾರದು. ಅದರಲ್ಲೂ ಸಭೆಗಳಲ್ಲಿರುವಾಗ, ಜನಸಮೂಹದ ಮಧ್ಯೆ ಕೆಮ್ಮು, ನಗು, ತೇಗು, ಆಕಳಿಕೆ ಹಾಗೂ ಸೀನು ಬಂದಾಗ ಬಾಯಿಯನ್ನು ಯಾವುದರಿಂದಲಾದರೂ ಮುಚ್ಚಿಕೊಳ್ಳಲೇಬೇಕು ಎಂದು ಭಾವಪ್ರಕಾಶ ಗ್ರಂಥ ಆಜ್ಞಾಪಿಸಿದೆ!

    ಇಂದು ಸಾಂಕ್ರಾಮಿಕ ರೋಗಗಳು ದರ್ಪದಿಂದ ಮೆರೆಯುತ್ತಿರುವ ಕಾಲದಲ್ಲಿ ನಮಗಿದು ಅರ್ಥವಾಗಲು ಆರಂಭವಾಗಿದೆ! ಮೂಗನ್ನು ಬೆರಳಿನಿಂದ ತುರಿಸುವುದು, ಹಲ್ಲುಗಳ ಪಂಕ್ತಿಯನ್ನು ಒಂದಕ್ಕೊಂದು ಅರೆಯಬಾರದು, ಉಗುರಿನಿಂದ ಹೊಡೆಯುವುದು, ಆಗಾಗ ಮೂಳೆಮುರಿತ ಮಾಡಿಕೊಳ್ಳುವುದು ಸನ್ನಡತೆಯಲ್ಲ. ಮೂಗಿನಿಂದ ಸಿಂಬಳವನ್ನು ಕೈಯಲ್ಲಿ ತೆಗೆಯುವುದು, ಬೆರಳನ್ನು ಮೂಗಿನೊಳಗೆ ತೂರುವುದು ತೆರನಲ್ಲ.

    ದೇಹದ ಅಸಭ್ಯ ಭಂಗಿಗಳನ್ನು ಅಭ್ಯಾಸ ಮಾಡಿಕೊಳ್ಳಬಾರದು. ಮೊಣಕಾಲನ್ನು ಎತ್ತರಿಸಿ ಇಡುವುದು, ಕಾಲನ್ನು ನೀಡಿ ತಲೆಯಿಂದ ಎತ್ತರದಲ್ಲಿಡುವುದು, ಅಸಹಜ ಅಥವಾ ವಿಕೃತ ರೀತಿಯಲ್ಲಿ ಕುಳಿತು, ನಿಂತುಕೊಳ್ಳುವುದು, ಸೀನುವಾಗ, ಊಟ ಮಾಡುವಾಗ, ನಿದ್ರಿಸುವಾಗ ಅಸ್ವಾಭಾವಿಕ ಆಸನಗಳಲ್ಲಿರುವುದೂ ಸಾಧುವಲ್ಲ. ಶರೀರಕ್ಕೆ ಕೈಗಳಿಂದ ಬಡಿದು ಶಬ್ದ ಬರಿಸುವುದು, ಕೂದಲನ್ನು ಕೈಗಳಿಂದ ಆಡಿಸುವುದೂ ತೆರನಲ್ಲ. ಕಸಬರಿಕೆಯಿಂದ ಧೂಳು ಯಾರದೇ ದೇಹಕ್ಕೂ ಸೋಕದಂತೆ ಎಚ್ಚರ ವಹಿಸಬೇಕು. ನಮ್ಮ ಬಾಯಿಯ ಉಗುಳು ರ್ಸ³ಸಿ ಶುಭ್ರವಾಗಿರುವವರು ಮಲಿನವಾಗುವಂತೆ ಆಗಕೂಡದು. ಇಂತಹ ಸಾಮಾಜಿಕ ಪ್ರಜ್ಞೆ ಇದ್ದರೆ ಮಾತ್ರ ರೋಗ ಬರದು ಬಲು ಬೇಗ!

    ಮುಖವನ್ನು ಮುಚ್ಚಿಕೊಳ್ಳಿ... ಅಯುರ್ವೇದದಲ್ಲಿ ವಿವರಿಸಿರುವ ಸನ್ನಡತೆಯ ಬಗ್ಗೆ ಮಾಹಿತಿ ಮುಖವನ್ನು ಮುಚ್ಚಿಕೊಳ್ಳಿ... ಅಯುರ್ವೇದದಲ್ಲಿ ವಿವರಿಸಿರುವ ಸನ್ನಡತೆಯ ಬಗ್ಗೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts