More

    ದೇಶ ವಿಭಜಿಸುವ ತಂತ್ರಗಾರಿಕೆ ಸಲ್ಲ : ದಲಿತರು, ಅಲ್ಪಸಂಖ್ಯಾತರಿಗೆ ಅಭದ್ರತೆ : ಹನುಮಂತ ಜೀ.ಯಳಸಂಗಿ ಬೇಸರ

    ತುಮಕೂರು: ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಅಭದ್ರತೆ ಕಾಡುತ್ತಿದ್ದು, ಹಿಂದು, ಮುಸ್ಲಿಂ ಹೆಸರಿನಲ್ಲಿ ಮತ್ತೊಮ್ಮೆ ದೇಶ ವಿಭಜಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ದಲಿತಸೇನೆ ಅಧ್ಯಕ್ಷ ಹನುಮಂತ ಜೀ.ಯಳಸಂಗಿ ಅಭಿಪ್ರಾಯಪಟ್ಟರು.

    ನಗರದ ರಿಂಗ್ ರಸ್ತೆಯಲ್ಲಿರುವ ಕುವೆಂಪು ಸಭಾಂಗಣದಲ್ಲಿ ದಲಿತ ಸೇನೆ ಜಿಲ್ಲಾ ಘಟಕದಿಂದ ದಿ.ರಾಮವಿಲಾಸ್ ಪಾಸ್ವಾನ್ ಅವರ ಶ್ರದ್ಧಾಂಜಲಿ ಹಾಗೂ ದಲಿತಸೇನೆ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

    ಎಲ್ಲ ರಾಜ್ಯಗಳಲ್ಲಿಯೂ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಿರುವ, ಅತ್ಯಾಚಾರ ಪ್ರಕರಣದ ಸಾಕ್ಷಿ ನಾಶಪಡಿಸಲು ಸರ್ಕಾರವೇ ಶಾಮೀಲಾಗಿರುವುದು ನಿಜಕ್ಕೂ ಈ ದೇಶದ ದುರಂತವೇ ಸರಿ ಎಂದರು.

    ದಲಿತ ಸೇನೆ ಸಂಸ್ಥಾಪಕರ ಅಧ್ಯಕ್ಷರಾಗಿದ್ದ ದಿ.ರಾಮ್‌ವಿಲಾಸ್ ಪಾಸ್ವಾನ್ ಅವರು ಐದು ಪ್ರಧಾನ ಮಂತ್ರಿಗಳ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸರ್ಕಾರದಲ್ಲಿಯೂ ಸಚಿವರಾಗಿ ಕೆಲಸ ಮಾಡಿದ್ದರೂ ಎಂದಿಗೂ ಸಿದ್ಧಾಂತ ಮತ್ತು ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ ಎಂದರು. ಬಿಜೆಪಿ ಸರ್ಕಾರಕ್ಕೆ ಸದಾ ಎಚ್ಚರಿಕೆ ಗಂಟೆಯಾಗಿಯೇ ಕಾರ್ಯನಿರ್ವಹಿಸಿದ್ದರು.

    ಅಂತಹವರು ಹುಟ್ಟು ಹಾಕಿದ ದಲಿತ ಸೇನೆ ಮುಂದೆಯೂ ಶೋಷಿತರು, ದಲಿತರು ಹಾಗೂ ಅಲ್ಪಸಂಖ್ಯಾತರ ಹಕ್ಕು ಬಾಧ್ಯತೆಗಳಿಗಾಗಿ ಹೋರಾಟ ನಡೆಸಲಿದೆ ಎಂದು ಹನುಮಂತ ಜೀ.ಯಳಸಂಗಿ ನುಡಿದರು. ದಲಿತ ಸೇನೆಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಖಾಲಿದ್ ಖಾನ್, ರಾಜ್ಯ ಉಪಾಧ್ಯಕ್ಷ ಪರಮೇಶ್ವರಪ್ಪ ಮಾತನಾಡಿದರು.

    ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪವಿತ್ರಾ, ಜಿಲ್ಲಾಧ್ಯಕ್ಷೆ ಸುಮಿತ್ರಾ ಹರೀಶ್, ಪದಾಧಿಕಾರಿಗಳಾದ ನರುಗನಹಳ್ಳಿ ಯಶವಂತ್, ಮುನೇಶಬಾಬು, ರಘು ಹೆಗ್ಗರೆ ಮತ್ತಿತರರು ಇದ್ದರು.

    12 ವರ್ಷಗಳಿಂದ ಜಿಲ್ಲೆಯಲ್ಲಿ ದಲಿತ ಸೇನೆ ಕಟ್ಟಿ ಬೆಳೆಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳೇ ಮುಂದೆ ನಿಂತು, ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಅಟ್ರಾಸಿಟಿ ದೂರಿನ ವಿರುದ್ಧ ಆರೋಪಿಗಳಿಂದ ಮರು ದೂರು ಪಡೆದು ದಾಖಲಿಸುವ ಮೂಲಕ ದಲಿತರ ರಕ್ಷಣೆಗೆ ಇರುವ ಕಾನೂನನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ಧ ನಾವೆಲ್ಲರೂ ಸಂಘಟಿತ ಹೋರಾಟ ನಡಸಬೇಕಾಗಿದೆ.
    ಗೂಳೂರು ಸಿದ್ದರಾಜು ದಲಿತ ಸೇನೆ ಜಿಲ್ಲಾಧ್ಯಕ್ಷ

    ಕರ್ನಾಟಕ ರಾಜ್ಯವಲ್ಲದೆ ದೇಶದ ಯಾವುದೇ ಭಾಗದಲ್ಲಿ ದಲಿತರು, ಅಲ್ಪಸಂಖ್ಯಾತರು, ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆಗಳು ನಡೆದಾಗಲು ದಲಿತಸೇನೆ ಮುಂಚೂಣಿಯಲ್ಲಿದ್ದು, ಹೋರಾಟ ನಡೆಸುವ ಮೂಲಕ ನೊಂದವರಿಗೆ ನ್ಯಾಯ ಒದಗಿಸಿದೆ.
    ಬನಶಂಕರಿ ನಾಗು ದಲಿತ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts