More

    3 ತಿಂಗಳಲ್ಲಿ ಕಾಟನ್​ಪೇಟೆ ಟೆಂಡರ್​ಶ್ಯೂರ್ ಪೂರ್ಣ: 400 ಮೀ. ಉದ್ದದ ರಸ್ತೆ ಕಾಮಗಾರಿ ಬಾಕಿ, ಚಿಕ್ಕಪೇಟೆ ಸುತ್ತಮುತ್ತ ಪ್ರದೇಶದಲ್ಲಿ ಮೇಯರ್ ತಪಾಸಣೆ

    ಬೆಂಗಳೂರು: ಕಾಟನ್​ಪೇಟೆ ಮುಖ್ಯರಸ್ತೆಯಲ್ಲಿ ಟೆಂಡರ್ ಶ್ಯೂರ್ ಯೋಜನೆಯಡಿ ಕೈಗೊಳ್ಳಲಾಗಿರುವ 1.1 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ 700 ಮೀಟರ್ ಪೂರ್ಣಗೊಂಡಿದೆ. ಉಳಿದ ಭಾಗದ ಕಾಮಗಾರಿಯನ್ನು 3 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮೇಯರ್ ಗೌತಮ್​  ಕುಮಾರ್ ತಿಳಿಸಿದ್ದಾರೆ.

    ಬಿ.ವಿ.ಕೆ ಅಯ್ಯಂಗಾರ್ ರಸ್ತೆ, ಅವೆನ್ಯೂ ರಸ್ತೆ, ಮಾಮೂಲ್​ಪೇಟೆ, ಸುಲ್ತಾನ್​ಪೇಟೆ, ತರಗುಪೇಟೆ, ಕಾಟನ್​ಪೇಟೆ ವ್ಯಾಪ್ತಿಯಲ್ಲಿ ಸಂಸದ ಪಿ.ಸಿ. ಮೋಹನ್ ಜತೆ ಬುಧವಾರ ತಪಾಸಣೆ ನಡೆಸಿದರು. ಇನ್ನು 3 ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

    ಈಗಾಗಲೇ ಶೇ.65 ಕಾಮಗಾರಿ ಪೂರ್ಣಗೊಂಡಿದೆ. 400 ಮೀ. ಉದ್ದದ ರಸ್ತೆಯ ಕಾಮಗಾರಿ ಬಾಕಿಯಿದೆ. ಇದರಲ್ಲಿ ಮಳೆನೀರುಗಾಲುವೆಗಳು, ವಿದ್ಯುತ್ ತಂತಿ ಹಾಗೂ ಒಳಚರಂಡಿಯ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದರು.

    ಚಿಕ್ಕಪೇಟೆ ಹಾಗೂ ಕಾಟನ್​ಪೇಟೆ ವಾರ್ಡ್​ನಲ್ಲಿ ಕಸದ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿರುವ 50 ಸಾವಿರಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಕಸದ ಸಮಸ್ಯೆಗೆ ಕಾರಣ. ವ್ಯಾಪಾರಿಗಳ ಸಂಘದ ಜತೆ ರ್ಚಚಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದರು.

    ಒಳಚರಂಡಿ ಹೂಳು ಅವರೇ ತೆಗೆಯಲಿ!: ಜಲಮಂಡಳಿ ಕಾರ್ವಿುಕರು ಒಳಚರಂಡಿ ಹೂಳು ತೆಗೆದು ಅಲ್ಲೇ ಬಿಟ್ಟು ಹೋಗುತ್ತಾರೆ. ಇದರಿಂದ ದುರ್ವಾಸನೆ ಹಬ್ಬುವ ಜತೆಗೆ ವಾಹನಸಂಚಾರಕ್ಕೂ ತೊಂದರೆಯಾಗುತ್ತದೆ. ಹಾಗಾಗಿ ಇನ್ನುಮುಂದೆ ಒಳಚರಂಡಿಗಳಿಂದ ತೆಗೆಯುವ ಹೂಳನ್ನು ತಮ್ಮ ಸಿಬ್ಬಂದಿಯಿಂದಲೇ ತೆರವುಗೊಳಿಸಲು ಜಲಮಂಡಳಿ ಅಧ್ಯಕ್ಷರಿಗೆ ಪತ್ರ ಬರೆಯುವಂತೆ ಪಾಲಿಕೆ ಆಯುಕ್ತರಿಗೆ ಮೇಯರ್ ಸೂಚಿಸಿದರು. ರಸ್ತೆಗಳ ಮೇಲೆ ಒಳಚರಂಡಿ ನೀರು ನಿಂತಿದೆ. ಮಳೆನೀರುಗಾಲುವೆಗಳಲ್ಲಿ ಒಳಚರಂಡಿ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಸುತ್ತೆಲ್ಲ ದುರ್ವಾಸನೆ ಹಬ್ಬಿದೆ, ಕೂಡಲೇ ದುರಸ್ತಿಗೊಳಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಕಾಟನ್​ಪೇಟೆ ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಪಾದಚಾರಿ ಮಾರ್ಗವನ್ನು ಹಿಗ್ಗಿಸಿ, ರಸ್ತೆ ಮಾರ್ಗದ ಅಗಲ ಕಡಿಮೆ ಮಾಡಲಾಗಿದೆ. ಇದರಿಂದ ವಾಹನ ಸವಾರರಿಗೆ ಹೆಚ್ಚು ತೊಂದರೆಯಾಗಲಿದೆ. ಈ ವಿಷಯವನ್ನು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಜತೆಗೆ ಚಿಕ್ಕಪೇಟೆ, ಗಾಂಧಿನಗರ ಹಾಗೂ ಕಾಟನ್​ಪೇಟೆ ವಾರ್ಡ್​ನ ಕೆಲ ರಸ್ತೆಗಳನ್ನು ದುರಸ್ತಿ ಮಾಡಲು ಸೂಚನೆ ನೀಡಲಾಗಿದೆ. ಇಲ್ಲಿ ಸ್ವಚ್ಛತೆ ಕಾಪಾಡಬೇಕಾದರೆ ವ್ಯಾಪಾರಿಗಳ ಸಂಘದ ಸಹಕಾರ ಅಗತ್ಯವಿದೆ.

    | ಪಿ.ಸಿ. ಮೋಹನ್ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts