More

    ಬೋರ್‌ವೆಲ್ ಕೊರೆಸಲು ಡಿಸಿ ಮೀನಾ ನಾಗರಾಜ್ ಸೂಚನೆ

    ಬೀರೂರು: ಜೋಡಿತಿಮ್ಮಾಪುರ ಗ್ರಾಪಂ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಬರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತು ಅಧಿಕಾರಿಗಳು ಮಂಗಳವಾರ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹೊಸ ಕೊಳವೆಬಾವಿ ಕೊರೆಸುವುದು ಸೇರಿದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್‌ಗೆ ಸೂಚಿಸಿದರು.

    ಏ.28ರಂದು ‘ಜೋಡಿತಿಮ್ಮಾಪುರ ವ್ಯಾಪ್ತಿಯಲ್ಲಿ ಜಲತತ್ವಾರ’ ಎಂಬ ಶೀರ್ಷಿಕೆಯಲ್ಲಿ ವಿಜಯವಾಣಿಯಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ವಿನಾಯಕ್, ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರ್ ರವಿಶಂಕರ್, ತಾಪಂ ಇಒ ಪ್ರವೀಣ್, ಗಣಿ ಮತ್ತು ಭೂ ವಿಜ್ಞಾನಿ ಸಚಿನ್ ಅವರು ಗ್ರಾಪಂ ಕಚೇರಿ, ದೊಡ್ಡಘಟ್ಟ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಂದ ಮತ್ತು ಪಿಡಿಒಗಳಿಂದ ಪರಿಸ್ಥಿತಿ ಮಾಹಿತಿ ಪಡೆದರು.
    ಗಣಿ ಮತ್ತು ಭೂ ವಿಜ್ಞಾನಿ ಸಚಿನ್ ಅವರು ಜೋಡಿತಿಮ್ಮಾಪುರ, ದೊಡ್ಡಘಟ್ಟ ಹಾಗೂ ಬಿ.ಕಾರೇಹಳ್ಳಿ ಗ್ರಾಮಗಳಲ್ಲಿ ಸರ್ವೇ ನಡೆಸಿ ಅಂತರ್ಜಲ ಪರಿಶೀಲಿಸಿದಾಗ ಎಲ್ಲಿಯೂ ನೀರಿನ ಲಭ್ಯತೆ ಇರಲಿಲ್ಲ. ಜೋಡಿತಿಮ್ಮಾಪುರ ಗ್ರಾಮದ ಹೊರವಲಯದಲ್ಲಿ ಸ್ವಲ್ಪಮಟ್ಟಿನ ನೀರಿನ ಹರಿವು ಕಂಡುಬಂದಿದೆ. ಅಲ್ಲಿ ಪಾಯಿಂಟ್ ಮಾಡಿದ್ದು, ಅಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
    ಜಿಲ್ಲಾ ಮಟ್ಟದವರೆಗೆ ವರದಿ ತಲುಪುವವರೆಗೆ ನೀವು ಕ್ರಮಕೈಗೊಳ್ಳಲಿಲ್ಲ ಏಕೆ? ಎಂದು ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರ್ ರವಿಶಂಕರ್ ಅವರನ್ನು ಡಿಸಿ ತರಾಟೆಗೆ ತೆಗೆದುಕೊಂಡರು. ಸ್ಥಳೀಯವಾಗಿ ಪರಿಹರಿಸಬಹುದಾದ ಸಮಸ್ಯೆಗಳನ್ನು ನಿರ್ಲಕ್ಷಿೃಸದಂತೆ ಎಚ್ಚರಿಸಿದರು. ಕೊಳವೆಬಾವಿ ಕೊರೆಯುವ ಬೋರ್‌ವೆಲ್ ಏಜೆನ್ಸಿ ಬದಲಿಸಿ, ಕಡಿಮೆ ದರದಲ್ಲಿ ಬೋರ್‌ವೆಲ್ ಕೊರೆಯುವವರಿಗೆ ನೀಡುವಂತೆ ಸೂಚಿಸಿದರು.
    ಬೀರೂರು ಪಟ್ಟಣದ ಮಾರ್ಗದ ಕ್ಯಾಂಪ್‌ನಲ್ಲಿ ತೆರವಾದ ಓವರ್‌ಹೆಡ್ ಟ್ಯಾಂಕ್ ವಿಷಯವಾಗಿ ಮಾಹಿತಿ ಪಡೆದು ಕಾರ್ಯ ಯೋಜನೆಯಲ್ಲಿ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ನೇರವಾಗಿ ಪೈಪ್‌ಲೈನ್‌ಗೆ ಬಿಡುತ್ತಿರುವುದು ಸರಿಯಲ್ಲ ಎನ್ನುವುದು ತಿಳಿದಿದ್ದು ಈ ಬಗ್ಗೆ ಶೀಘ್ರವಾಗಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
    ಕುಡಿಯುವ ನೀರು ಪೂರೈಸುತ್ತಿದ್ದ 4 ಕೊಳವೆ ಬಾವಿಗಳಲ್ಲಿ ನೀರು ಬತ್ತಿಹೋಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಈ ಗ್ರಾಮಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಹೆದ್ದಾರಿ ಕಾಮಗಾರಿಯಿಂದ ಸ್ವಲ್ಪಮಟ್ಟಿನ ಅಡ್ಡಿಯಾಗಿದೆ. ನೀರಿನ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಜಾಗ ಬಿಟ್ಟಿಲ್ಲ ಎಂದು ಇಂಜಿನಿಯರ್ ಮಾಹಿತಿ ನೀಡಿದ್ದಾರೆ. ನಾನು ಸಂಬಂಧಪಟ್ಟವರೊಂದಿಗೆ ಮಾತನಾಡಿದ್ದು, ಇನ್ನು ಎರಡು ದಿನದ ಒಳಗೆ ಸರಿಪಡಿಸಿಕೊಡುವಂತೆ ತಿಳಿಸಿದ್ದೇನೆ. ಅದಾದ ತಕ್ಷಣ ನೀರಿನ ಸಂಪರ್ಕ ಕಲ್ಪಿಸಲು ಕೆಲಸ ಆರಂಭಿಸಲಾಗುವುದು. ಅಲ್ಲಿವರೆಗೆ ಟ್ಯಾಂಕರ್‌ನಿಂದ ನೀರು ಪೂರೈಸುವಂತೆ ತಿಳಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾಹಿತಿ ನೀಡಿದರು.
    ಗ್ರಾಮದ ಸಮಸ್ಯೆ ಕುರಿತು ವರದಿ ಮಾಡಿ ಜಿಲ್ಲಾಡಳಿತವನ್ನು ಗ್ರಾಮಕ್ಕೆ ಭೇಟಿ ನೀಡುವಂತೆ ಮಾಡಿದ ವಿಜಯವಾಣಿ ಪತ್ರಿಕೆಗೆ ಗ್ರಾಮಸ್ಥರು ಧನ್ಯವಾದ ಸಲ್ಲಿಸಿದರು.
    ಪಿಡಿಒ ದಯಾನಂದ್, ಸದಸ್ಯ ವೆಂಕಟೇಶ್, ಗ್ರಾಮದ ರಾಜಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts