More

    ಸಂಕ್ರಾಂತಿ ವೇಳೆಗೆ ನಿಗಮ-ಮಂಡಳಿ ನೇಮಕ ಪೂರ್ಣ; ಡಿಸಿಎಂ

    ಬೆಂಗಳೂರು: ನಿಗಮ, ಮಂಡಳಿಗಳಿಗೆ ನೇಮಕ ಸಂದರ್ಭದಲ್ಲಿ ಶಾಸಕರಷ್ಟೇ ಸಂಖ್ಯೆಯಲ್ಲಿ ಕಾರ್ಯಕರ್ತರಿಗೂ ಸಮಾನ ಅವಕಾಶ ಸಿಗಲಿದೆ. ಅದಕ್ಕಾಗಿ ಎಲ್ಲ ನಾಯಕರು ಕೂತು ಚರ್ಚೆ ಮಾಡುತ್ತೇವೆ. ಸಂಕ್ರಾಂತಿ ಹಬ್ಬದ ವೇಳೆಗೆ ನೇಮಕವಾಗುವ ನಿರೀಕ್ಷೆಯಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

    ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನದ ಕುರಿತು ವ್ಯವಸ್ಥೆ ಮಾಡಲಾಗುವುದು. ಕೇಂದ್ರ ನಾಯಕರು ಕೂಡ ಕೆಲವರಿಗೆ ಅಧಿಕಾರ ನೀಡುವ ಮಾತು ನೀಡಿದ್ದು, ಎಲ್ಲರ ಜತೆ ಚರ್ಚೆ ಮಾಡಬೇಕು ಎಂದರು.

    ಜನವರಿಯಲ್ಲಿ ದಿನಕ್ಕೆ ಎರಡು ಅಥವಾ ಮೂರು ವಿಧಾನಸಭೆ ಕ್ಷೇತ್ರಗಳಂತೆ ಬೆಂಗಳೂರಿನ 28 ಕ್ಷೇತ್ರಗಳ ಜನರ ಅಹವಾಲು ಸ್ವೀಕರಿಸಿ, ಅವರ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ದೆಹಲಿ ಹಾಗೂ ಬೇರೆ ಕಡೆ ಪ್ರವಾಸ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಬಿಡುವು ನೀಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

    ಸಿದ್ಧತೆಗೆ ಜ.10ರಂದು ಸಭೆ

    ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಜ.10ರಂದು ಪಕ್ಷದ ನಾಯಕರು, ಶಾಸಕರು, ಎಐಸಿಸಿ ನಾಯಕರ ಜತೆಗೆ ಸಭೆ ನಡೆಯಲಿದೆ. ಜ.4ರಂದು ದೆಹಲಿಯಲ್ಲಿ ಇದೇ ವಿಷಯವಾಗಿ ಸಭೆ ನಿಗದಿಯಾಗಿದ್ದು, ಕೆಲವು ಸಚಿವರು ವರದಿ ನೀಡಿದ್ದಾರೆ. ಅದರಂತೆಯೇ ಸಮೀಕ್ಷೆ ಮಾಡಬೇಕಿದ್ದು, ದೆಹಲಿ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಲಿದೆ ಎಂದರು.

    ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿ, ಬದುಕು ಸುಧಾರಿಸಲು ಒಂದು ಸಾವಿರ ಕೋಟಿ ರೂ. ಮಂಜೂರು ಮಾಡುವ ಸಿಎಂ ಸಿದ್ದರಾಮಯ್ಯ ನಿರ್ಧಾರ ಸರಿಯಾಗಿದೆ. ರಾಮನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಆ ಕಾಲೊನಿ ನಿವಾಸಿಗಳ ಪರಿಸ್ಥಿತಿ ಹೇಗಿದೆ ಎಂಬುದು ಗೊತ್ತಿದೆ.

    ಅಲ್ಪಸಂಖ್ಯಾತ ಸಮುದಾಯದ ಜನರು ನಗರ-ಪಟ್ಟಣಗಳಲ್ಲಿ ಹೆಚ್ಚಾಗಿ ವಾಸವಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ ಉದ್ಯೋಗ ಖಾತರಿ ಸೇರಿ ಬೇರೆ ಯೋಜನೆಗಳ ನೆರವು ಸಿಗುತ್ತದೆ. ನಗರ-ಪಟ್ಟಣಗಳಿಗೆ ಇಂತಹ ಅವಕಾಶಗಳಿಲ್ಲವೆಂದು ಸಿಎಂ ನಿರ್ಧಾರವನ್ನು ಸಮರ್ಥಿಸಿಕೊಂಡರು.

    ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬುನಾಯ್ಡು ಪ್ರತಿನಿಧಿಸುತ್ತಿರುವ ಕ್ಷೇತ್ರ ಬೆಂಗಳೂರಿಗೆ ಹತ್ತಿರದಲ್ಲಿದೆ. ತವರು ಕ್ಷೇತ್ರಕ್ಕೆ ಮರಳುವಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಸಿಕ್ಕರು. ಅವರ ಆರೋಗ್ಯ ವಿಚಾರಿಸಿದೆ, ಇದೊಂದು ಸೌಜನ್ಯದ ಭೇಟಿಯಷ್ಟೇ ಎಂದು ಡಿ.ಕೆ.ಶಿವಕುಮಾರ್ ಸಮಜಾಯಿಷಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts