More

    ಮಕ್ಕಳಿಗೆ ಹರಡುತ್ತಿದೆ ಸೋಂಕು

    ಕರೊನಾ ನಿಯಂತ್ರಣಕ್ಕೆ ಸರ್ಕಾರ ಹೇರಿದ್ದ ವಾರಾಂತ್ಯ ಕರ್ಫ್ಯೂ ನಿರ್ಬಂಧವನ್ನು ತೆರವುಗೊಳಿಸುತ್ತಿದ್ದಂತೆ ಜಿಲ್ಲೆಯಲ್ಲಿ ಕರೊನಾ ಸೋಂಕು ತೀವ್ರವಾಗಿ ಏರಿಯಾಗುತ್ತಿದೆ. ಅದರಲ್ಲಿಯೂ ಮಕ್ಕಳಲ್ಲಿ ಈ ಸೋಂಕು ವೇಗವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

    ಜಿಲ್ಲೆಯಲ್ಲಿ ಡಿಸೆಂಬರ್ ಹಾಗೂ ಹೊಸ ವರ್ಷದ ಆರಂಭದಿಂದ ಜ. 9ರವರೆಗೆ ಕರೊನಾ ಸೋಂಕು ಶೂನ್ಯಕ್ಕಿಳಿದಿತ್ತು. ರಾಜ್ಯ ಹಾಗೂ ದೇಶದ ವಿವಿಧೆಡೆ ಸೋಂಕು ಏರಿಕೆ ಕಾಣುತ್ತಿದ್ದರೂ ಜಿಲ್ಲೆಯಲ್ಲಿ ಅದರ ಪ್ರಭಾವ ಬೀರಿರಲಿಲ್ಲ. ಆದರೆ ಜ. 9ರಿಂದ ಆರಂಭಗೊಂಡ ಸೋಂಕಿನ ಪ್ರಮಾಣ ದಿನೇದಿನೇ ಏರುತ್ತಲೇ ಸಾಗುತ್ತಿದೆ. ಜ. 9ರಿಂದ 21ರವರೆಗೆ ಒಟ್ಟು 479 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಅಲ್ಲದೆ, ಇಬ್ಬರು ಮೃತಪಟ್ಟಿದ್ದಾರೆ.

    ಜನವರಿ 9ರಿಂದ 16ರವರೆಗೆ ಒಂದು ವಾರದಲ್ಲಿ ಒಟ್ಟು 146 ಪ್ರಕರಣಗಳು ಪತ್ತೆಯಾಗಿದ್ದವು. ಅದರಲ್ಲಿ 29ಕ್ಕೂ ಅಧಿಕ ಪ್ರಕರಣಗಳು 18 ವರ್ಷದೊಳಗಿನವರಲ್ಲಿ ಕಾಣಿಸಿಕೊಂಡಿದ್ದವು. ಇದಾದ ನಂತರ ಸೋಂಕಿನ ಪ್ರಮಾಣ ಏರುವ ಜೊತೆಗೆ ಮಕ್ಕಳಿಗೆ ಹರಡುವುದು ಏಕಾಏಕಿ ದುಪ್ಪಟ್ಟಾಗುತ್ತಿದೆ. ಜ. 17ರಂದು 4, 18ರಂದು 7, 19ರಂದು 11, 20ರಂದು 20, ಜ. 21ರಂದು 46 ಮಕ್ಕಳಿಗೆ ಸೋಂಕು ತಗುಲಿದೆ. 5 ದಿನಗಳ ಅವಧಿಯಲ್ಲಿ 88 ಮಕ್ಕಳಿಗೆ ಸೇರಿ ಒಟ್ಟು 117 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಶೇ. 25ಕ್ಕೂ ಅಧಿಕ ಪ್ರಮಾಣದಲ್ಲಿ ಮಕ್ಕಳಿಗೆ ಕರೊನಾ ಕಾಣಿಸಿಕೊಂಡಿದೆ. ಹೀಗಾಗಿ ಸದ್ಯದ ಸೋಂಕು ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾಡುವ ಆತಂಕ ಪಾಲಕರಲ್ಲಿ ಮೂಡಿದೆ.

    ವೈರಲ್ ಫಿವರ್ ಕಾಟವೂ ವಿಪರೀತ: ಜಿಲ್ಲೆಯಲ್ಲಿ ಮಕ್ಕಳು ಸೇರಿ ಬಹುತೇಕ ಎಲ್ಲ ವಯಸ್ಸಿನವರಿಗೆ ಶೀತ, ಜ್ವರ, ಕೆಮ್ಮಿನ ಲಕ್ಷಣಗಳು ಹೆಚ್ಚಾಗುತ್ತಿವೆ. ಆಸ್ಪತ್ರೆಗಳಿಗೆ ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಜನತೆ ಧಾವಿಸುತ್ತಿದ್ದಾರೆ. ಈ ವೈರಲ್ ಫಿವರ್​ನ ಲಕ್ಷಣಗಳು ಬಹುತೇಕ ಕರೊನಾ ಸೋಂಕಿನ ಲಕ್ಷಣಗಳೇ ಆಗಿದ್ದು, ಬಹುತೇಕರು ಕರೊನಾ ಟೆಸ್ಟ್​ಗೆ ಒಳಪಡದೇ ಸಾಮಾನ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಗುಣವಾಗದೇ ಇರುವವರು ಅನಿವಾರ್ಯವಾಗಿ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ.

    ಹೊಸಳ್ಳಿ ಪ್ರೌಢಶಾಲೆಯಲ್ಲಿ 5 ವಿದ್ಯಾರ್ಥಿಗಳಿಗೆ ಸೋಂಕು: ಹಿರೇಕೆರೂರ ತಾಲೂಕು ಹೊಸಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ಐವರು ವಿದ್ಯಾರ್ಥಿಗಳಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ದಾಖಲಾತಿಗಳ ಪ್ರಕಾರ ಈವರೆಗೆ ಒಟ್ಟು 31 ವಿದ್ಯಾರ್ಥಿಗಳಿಗೆ 14 ಜನ ಶಿಕ್ಷಕರಿಗೆ ಪಾಸಿಟಿವ್ ದೃಢಪಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts