ಬೆಂಗಳೂರು: ಬ್ರಿಟನ್ನಲ್ಲಿ ಕಂಡುಬಂದಿರುವ ರೂಪಾಂತರಿ ಕರೊನಾ ಹೆಚ್ಚು ತೀಕ್ಷ್ಣತೆ ಹೊಂದಿಲ್ಲದ ಕಾರಣ ಜನರು ಭಯಪಡುವ ಅಗತ್ಯವಿಲ್ಲ. ಈಗಿರುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೆ ಸಾಕು ಎಂದು ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸದಸ್ಯರು ಖಚಿತಪಡಿಸಿದ್ದಾರೆ. ಇದು ಸಾರ್ವಜನಿಕರಿಗೆ ತುಸು ನಿರಾಳತೆ ನೀಡಿದೆ. ರೂಪಾಂತರಿ ಕರೊನಾ ಹರಡುವಿಕೆ ಪ್ರಮಾಣ ಶೇ.70 ಹೆಚ್ಚಿದೆ. ಮೂಲ ವೈರಸ್ನ ಹೊರಕವಚದ ಮೇಲಿರುವ ಚಾಚುವಿಕೆ ಹೆಚ್ಚಿನದಾಗಿದೆ.
ಹಾಗಾಗಿ ಇದು ಮನುಷ್ಯನ ಜೀವಕೋಶದಲ್ಲಿ ಸುಲಭವಾಗಿ ಸೇರಿಕೊಳ್ಳುತ್ತದೆ. ಆದರೆ, ರೋಗದ ತೀವ್ರತೆ ತೀಕ್ಷ್ಣವಾಗಿ ರುವುದಿಲ್ಲ. ಹೊಸ ಪ್ರಭೇದಕ್ಕೂ ಈಗಿರುವ ಚಿಕಿತ್ಸೆಯೇ ಮುಂದುವರಿಯಲಿದ್ದು, ಪ್ರಸ್ತುತ ಸಿದ್ಧವಾಗುತ್ತಿರುವ ಲಸಿಕೆಯನ್ನೇ ಬಳಸಲಾಗುವುದು ಎಂದು ಸಮಿತಿ ಸದಸ್ಯರು ಹೇಳಿದ್ದಾರೆ. ಕರೊನಾ ರೂಪಾಂತರಿತ ಸೋಂಕು ತಡೆಯುವ ಕುರಿತು ಮಂಗಳವಾರ ಸಮಿತಿ ಸದಸ್ಯರು ವಿಡಿಯೋ ಕಾನ್ಪರೆನ್ಸ್ ಮೂಲಕ ಚರ್ಚೆ ನಡೆಸಿದರು.
ವಿದೇಶಿ ಪ್ರಯಾಣಿಕರಿಗೆ ತಪಾಸಣೆ
ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ, ರಾಜ್ಯಕ್ಕೆ ಬ್ರಿಟನ್ ಸೇರಿ ವಿದೇಶಗಳಿಂದ ನ. 25ರ ನಂತರ ಆಗಮಿಸಿರುವ ಎಲ್ಲಾ ಪ್ರಯಾಣಿಕರನ್ನು ಪತ್ತೆ ಮಾಡಿ ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು. ಸೋಂಕು ದೃಢಪಟ್ಟವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಬೇಕು. ಸೋಂಕು ದೃಢಪಡದವರನ್ನು 14 ದಿನಗಳ ಕಾಲ ಮನೆಯಲ್ಲೇ ನಿಗಾದಲ್ಲಿ ಇರಿಸಬೇಕು. ನಿಗಾ ಅವಧಿ ಹಾಗೂ ನಂತರದ 14 ದಿನಗಳ ಕಾಲ ವಿಚಕ್ಷಣಾ ಅಧಿಕಾರಿಗಳಿಂದ ಶಂಕಿತರ ಆರೋಗ್ಯ ಕುರಿತು ನಿರಂತರ ಮಾಹಿತಿ ಪಡೆಯಲು ಸೂಚಿಸಲಾಗಿದೆ.
ಭಾರತಕ್ಕೆ ಇನ್ನೂ ಕಾಲಿಟ್ಟಿಲ್ಲ…
ಬ್ರಿಟನ್ನಲ್ಲಿ ವ್ಯಾಪಕವಾಗಿ ಪಸರಿಸುತ್ತಿರುವ ರೂಪಾಂತರಿ ವೈರಸ್ ಭಾರತದಲ್ಲಿ ಇನ್ನೂ ಕಂಡುಬಂದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರಿಂದ ಭಾರತೀಯರು ತುಸು ನಿರಾಳರಾಗಿದ್ದಾರೆ. ರೋಗಿಗಳ ಆರೋಗ್ಯ ಹಾಗೂ ಸಾವಿನ ಪ್ರಮಾಣದ ಮೇಲೆ ಹೊಸ ವೈರಸ್ ಯಾವುದೇ ಪರಿಣಾಮ ಬೀರಿಲ್ಲ. ಪ್ರಸ್ತುತ ಸಿದ್ಧವಾಗುತ್ತಿರುವ ಲಸಿಕೆಯಿಂದಲೇ ಈ ವೈರಸ್ ಕೂಡ ಗುಣವಾಗುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.
ಶಾಲೆಗೆ ಅಡ್ಡಿಯಿಲ್ಲ
ಸರ್ಕಾರದ ಮಾರ್ಗಸೂಚಿ ಗಳನ್ನು ಕಡ್ಡಾಯವಾಗಿ ಅನುಸರಿಸುವ ಮೂಲಕ ಶಾಲೆಗಳನ್ನು ನಡೆಸಬಹುದಾಗಿದೆ. ಆದರೆ ಕ್ರಿಸ್ಮಸ್ ಹಬ್ಬ, ಹೊಸ ವರ್ಷ ಆಚರಣೆ ಸೇರಿ ಸಭೆ ಸಮಾರಂಭಗಳ ಹೆಸರಿನಲ್ಲಿ ಗುಂಪು ಸೇರದಂತೆ ಕ್ರಮ ವಹಿಸಲು ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.
ಸದ್ಯ ರಾತ್ರಿ ಕರ್ಫ್ಯೂ ವಿಧಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ನಾನಾ ಕಡೆ ರೂಪಾಂತರಿ ಕರೊನಾ ಅನಾಹುತ ಸೃಷ್ಟಿಸುವ ಲಕ್ಷಣಗಳು ಕಂಡುಬರುತ್ತಿವೆ. ಪ್ರಧಾನಿಯೂ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತದೆ.
| ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ
ಕರೊನಾ ವೈರಸ್ ನಿಯಂತ್ರಣಕ್ಕೆ ಜನಸಾಮಾನ್ಯರು ಎಸ್ಎಂಎಸ್ ನಿಯಮ (ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸಿ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು) ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ.
ನಿಮ್ಹಾನ್ಸ್ನಲ್ಲಿ ಜಿನೆಟಿಕ್ ಸೀಕ್ವೆಂನ್ಸಿಸ್
ಕರೊನಾ ವೈರಸ್ ಹೊಸ ಪ್ರಭೇದ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ. ಹಾಗಾಗಿ ಯುಕೆ ಸೇರಿ ವಿದೇಶಿ ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾದರೆ, ಅವರ ಮಾದರಿ ಸಂಗ್ರಹಿಸಿ ಅದು ಹೊಸ ಪ್ರಭೇದವೇ ಅಥವಾ ಹಳೆಯದೇ ಎಂಬುದನ್ನು ಪತ್ತೆ ಮಾಡಬೇಕು. ಇದಕ್ಕಾಗಿ ನಿಮ್ಹಾನ್ಸ್ ಪ್ರಯೋಗಾಲಯದಲ್ಲಿ ಜಿನೆಟಿಕ್ ಸೀಕ್ವೆಂನ್ಸಿಸ್ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ.
ಸಮಿತಿಯಲ್ಲಿ ಯಾರ್ಯಾರಿದ್ದರು?: ವಿಡಿಯೋ ಕಾನ್ಪರೆನ್ಸ್ನಲ್ಲಿ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ವೈರಾಣು ತಜ್ಞ ಡಾ. ರವಿ, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜ್ ಮತ್ತಿತರರು ಇದ್ದರು.
ತಾಯಿ-ಮಗಳಿಗೆ ಸೋಂಕು
ಡಿ.19ರಂದು ಇಂಗ್ಲೆಂಡ್ನಿಂದ ಬೆಂಗಳೂರಿಗೆ ಆಗಮಿಸಿರುವ, ವಾರ್ಡ್ ನಂ. 197ರ ವಸಂತಪುರದ ವಿಠ್ಠಲನಗರ ನಿವಾಸಿಗಳಾದ 35 ವರ್ಷದ ಮಹಿಳೆ ಮತ್ತು ಆಕೆಯ 6 ವರ್ಷದ ಮಗಳಿಗೆ ಸೋಂಕು ದೃಢಪಟ್ಟಿದೆ. ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇವರಲ್ಲಿ ಕರೊನಾ ವೈರಸ್ನ ಹೊಸ ಪ್ರಭೇದ ಇದೆಯೇ ಎಂಬುದನ್ನು ತಿಳಿಯಲು ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಬ್ರಿಟನ್ ಅಲ್ಲದೆ ಇತರ ದೇಶಗಳಲ್ಲೂ ಕರೊನಾ ವೈರಸ್ನ ಹೊಸ ಪ್ರಭೇದ ಕಾಣಿಸಿಕೊಂಡಿರುವುದರಿಂದ, ರಾಜ್ಯಕ್ಕೆ ಬೇರೆ ಬೇರೆ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನೂ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು.
| ಡಾ. ಸಿ.ಎನ್. ಮಂಜುನಾಥ್ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ
ಬ್ರಿಟನ್ನಿಂದ ಬಂದವರಿಗಾಗಿ ಶೋಧ
ಬ್ರಿಟನ್ ಸಹಿತ ವಿದೇಶಗಳಿಂದ ಬಂದಿರುವವರನ್ನು ಪತ್ತೆ ಮಾಡಿ, ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಬೆಂಗಳೂರಿಗೆ 211 ಮಂದಿ ಆಗಮಿಸಿದ್ದು, ಎಲ್ಲರನ್ನೂ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. 32 ವರ್ಷದ ಮಹಿಳೆ ಡಿ.14ರಂದು ಇಂಗ್ಲೆಂಡ್ನಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿಗೆ ಆಗಮಿಸಿದ್ದಾರೆ. ಮಹಿಳೆಯನ್ನು ಪತ್ತೆ ಹಚ್ಚಿ, 14 ದಿನಗಳ ಕ್ವಾರಂಟೈನ್ಗೆ ಒಳಪಡಿಸಿ, ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಲಂಡನ್ನಿಂದ 23 ಮಂದಿ ಆಗಮಿಸಿದ್ದಾರೆ. ಎಲ್ಲರೂ ಲಂಡನ್ನಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿಯನ್ನು ತಂದಿದ್ದಾರೆ. ಇಂಗ್ಲೆಂಡ್ನಿಂದ ಧಾರವಾಡ ಜಿಲ್ಲೆಗೆ ಐವರು ಮರಳಿದ್ದು, ಎಲ್ಲರನ್ನೂ ಗುರುತಿಸಿ ಹೋಮ್ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಮೈಸೂರು ಹಾಗೂ ಕಲಬುರಗಿಗೆ 7, ವಿಜಯಪುರ ಜಿಲ್ಲೆಗೆ 8, ಮಂಗಳೂರಿಗೆ 56, ಗದಗ ಹಾಗೂ ರಾಮನಗರಕ್ಕೆ ಒಬ್ಬರು, ಹಾಸನಕ್ಕೆ ಇಬ್ಬರು, ತುಮಕೂರಿಗೆ ಐವರು ಬ್ರಿಟನ್ನಿಂದ ಬಂದಿದ್ದಾರೆ. ಎಲ್ಲರನ್ನೂ ಪತ್ತೆ ಮಾಡಿ, ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೈಟ್ ಕರ್ಫ್ಯೂ ಸದ್ಯಕ್ಕಿಲ್ಲ ಎಂದ ಸಿಎಂ
ರೂಪಾಂತರಿ ಕರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸದ್ಯ ರಾತ್ರಿ ಕರ್ಫ್ಯೂ ವಿಧಿಸುವ ಆಲೋಚನೆ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆಯನ್ನು ಬಿಬಿಎಂಪಿ, ಕಂದಾಯ, ಆರೋಗ್ಯ ಇಲಾಖೆ ನಿರ್ಬಂಧ ವಿಧಿಸಿವೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ನಿಬಂಧನೆಗಳನ್ನು ಪ್ರತಿಯೊಬ್ಬ ನಾಗರಿಕರು ಪಾಲನೆ ಮಾಡಲೇಬೇಕು ಎಂದಿದ್ದಾರೆ.
ಕಡ್ಡಾಯ ತಪಾಸಣೆ: ವಿದೇಶದಿಂದ ಬರುವವರು ವಿಮಾನ ನಿಲ್ದಾಣದಲ್ಲೇ ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕು. ಕರೊನಾ ಪರೀಕ್ಷೆ, ಹೋಂ ಕ್ವಾರಂಟೈನ್ ಸೇರಿ ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದೇವೆ. ಜನ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಸಿಎಂ ಹೇಳಿದರು.
ರಾತ್ರಿ ಕರ್ಫ್ಯೂ ಬಗ್ಗೆ ಸಿಎಂ ಜತೆ ಚರ್ಚೆ
ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಸಿಎಂ ಜತೆಗೆ ಚರ್ಚೆ ನಡೆಸುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಅಗತ್ಯವಿದ್ದಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡುವ ಅಧಿಕಾರವನ್ನು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ನೀಡಿದೆ. ಆದರೆ ಮತ್ತೆ ಲಾಕ್ಡೌನ್ ಅಗತ್ಯವಿಲ್ಲ. ವಿದೇಶದಿಂದ ಬಂದಿರುವ 138 ಮಂದಿಯನ್ನು ಪತ್ತೆ ಹಚ್ಚಿ, ಕ್ವಾರಂಟೈನ್ ಮಾಡಲಾಗಿದೆ. ಈಗಾಗಲೇ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿರುವವರ ವರದಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
Video | ನಿಮ್ಮ ವಾಹನದ ಮೇಲೆ ‘ಆರ್ಎಸ್ಎಸ್’ ಸ್ಟಿಕ್ಕರ್ ಇದ್ಯಾ?; ಹಾಗಿದ್ದರೆ ಇಲ್ಲಿಗೆ ಹೋಗುವಾಗ ಒಮ್ಮೆ ಯೋಚಿಸಿ…
ವಾಟರ್ ಟ್ಯಾಂಕ್ನಲ್ಲಿದ್ದವು ನಾಲ್ಕು ಹೆಣ! ವೈರಿಗಳೇ ಇಲ್ಲದ ಕುಟುಂಬದ ನಿಗೂಢ ಸಾವು!
ಈಗಷ್ಟೇ ಮದುವೆಯಾಗಿರುವ ಗಾಯಕಿಗೆ ಯೌವನದ ಮಗ! ಅಭಿಮಾನಿಗಳಿಗೆ ಶಾಕ್ ನೀಡಿದ ನೇಹಾ ಕಕ್ಕರ್!