More

    ಕರೊನಾ ಹೋರಾಟಕ್ಕೆ 3ಟಿ ಸೂತ್ರ

    ಬೆಂಗಳೂರು: ವಿದೇಶಗಳಿಂದ ರಾಜ್ಯಕ್ಕೆ ಬಂದಿರುವ 1.25 ಲಕ್ಷ ಪ್ರಯಾಣಿಕರ ಮಾಹಿತಿ ಇದ್ದು, ಟ್ರೇಸ್, ಟೆಸ್ಟ್, ಟ್ರೀಟ್ಮೆಂಟ್ ಎಂಬ 3 ಟಿ ಆಧಾರದಲ್ಲಿ ಕರೊನಾ ನಿಯಂತ್ರಣಕ್ಕೆ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

    ಎಲ್ಲ ರೀತಿಯ ಮಾನವ ಪ್ರಯತ್ನ ನಡೆಸಿದ್ದೇವೆ. ನಾಗರಿಕರು ಮನೆಯಿಂದ ಹೊರ ಬರದಂತೆ ಜಾಗರೂಕರಾಗಿರಬೇಕು. ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ರೋಗದ ಲಕ್ಷಣ ಇರಲಿ ಅಥವಾ ಇಲ್ಲದಿರಲಿ ತಪಾಸಣೆಯನ್ನಂತೂ ಮಾಡ ಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಈಗಾಗಲೇ 1500 ರಕ್ತದ ಮಾದರಿಗಳನ್ನು ತಪಾಸಣೆ ಮಾಡಲಾಗಿದೆ. ಇನ್ನೊಂದು ವಾರದೊಳಗೆ 25ರಿಂದ 30 ಸಾವಿರ ರಕ್ತದ ಮಾದರಿಗಳ ತಪಾಸಣೆ ಮಾಡಿದರೆ ಹಬ್ಬುತ್ತಿರುವ ವೇಗದ ಪ್ರಮಾಣ ಎಷ್ಟು ಎಂಬುದನ್ನು ಅಂದಾಜು ಮಾಡಬಹುದಾಗಿದೆ. ಈ ಹಂತದಲ್ಲಿ ನಾವು ಎಡವಿದರೆ ಇಟಲಿ ಪರಿಸ್ಥಿತಿ ಆಗಬಹುದೆಂದು ಆತಂಕ ವ್ಯಕ್ತಪಡಿಸಿದರು.

    ಕ್ವಾರಂಟೈನ್​ನಲ್ಲಿ ಇರುವವ ರಿಗಾಗಿ ಹೋಟೆಲ್, ರೆಸಾರ್ಟ್, ಕ್ರೀಡಾಂಗಣಗಳನ್ನು ಸಿದ್ಧಪಡಿಸ ಲಾಗುವುದು. ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿಯೂ ಮೂಲ ಸೌಕರ್ಯ ಒದಗಿಸಲಾಗುವುದು. ಪ್ರತ್ಯೇಕ ಐಸೋಲೇಷನ್ ವಾರ್ಡ್​ಗಳನ್ನು ಸ್ಥಾಪಿಸಲಾಗುವುದು ಎಂದರು.

    ಫೀವರ್ ಕ್ಲಿನಿಕ್: ಸರ್ಕಾರ ಇರುವ ವೈದ್ಯಕೀಯ ಸಿಬ್ಬಂದಿ ಬಳಸಿಕೊಂಡು ಬೆಂಗಳೂರಿನಲ್ಲಿ 31 ಫೀವರ್ ಕ್ಲಿನಿಕ್​ಗಳನ್ನು ಶುಕ್ರವಾರದಿಂದ ಆರಂಭಿಸುತ್ತಿದೆ. ಇಲ್ಲಿ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ರೋಗದ ಲಕ್ಷಣಗಳು ಕಂಡುಬಂದಲ್ಲಿ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ ಎಂದ ಸುಧಾಕರ್, ಈಗಾಗಲೇ ಕಲಬುರಗಿಯಲ್ಲಿ ಲ್ಯಾಬ್ ಆರಂಭವಾಗಿದೆ. ಬೆಳಗಾವಿಯಲ್ಲಿ ಶುಕ್ರವಾರದಿಂದ ಲ್ಯಾಬ್ ಕಾರ್ಯಾರಂಭ ಮಾಡಲಿದೆ ಎಂದು ವಿವರಿಸಿದರು.

    ಹ್ಯಾಂಡ್ ಸ್ಯಾನಿಟೈಜರ್: ರಾಜ್ಯದ ಬ್ರೀವರಿಗಳ ಮುಖ್ಯಸ್ಥರನ್ನು ಕರೆದು ಸರ್ಕಾರಿ ಕಚೇರಿಗಳಿಗೆ ಅಗತ್ಯವಿರುವಷ್ಟು ಹ್ಯಾಂಡ್ ಸ್ಯಾನಿಟೈಜರ್ ಒದಗಿಸಲು ಕೋರಿದ್ದೇವೆ. ಉಚಿತವಾಗಿ ನೀಡಲು ಒಪ್ಪಿದ್ದಾರೆ ಎಂದರು.

    ಆಪ್ ಅಭಿವೃದ್ಧಿ: ಸರ್ಕಾರದ ಜತೆ ಕೆಲಸ ಮಾಡಲು ಆಸಕ್ತರಾಗಿರುವ ಮೆಡಿಕಲ್, ಪ್ಯಾರಾಮೆಡಿಕಲ್, ಇಂಜಿನಿಯರಿಂಗ್ ಸಿಬ್ಬಂದಿ ನೋಂದಾಯಿಸಿಕೊಳ್ಳಲು ಪ್ರತ್ಯೇಕ ಆಪ್ ಅಭಿವೃದ್ಧಿ ಮಾಡಿದ್ದೇವೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಡ್ಯಾಶ್​ಬೋರ್ಡ್ ಮಾಡಿದ್ದೇವೆ. ಹೀಟ್ ಮ್ಯಾಪ್ ಸಹ ಮಾಡಲಿದ್ದೇವೆ. ಅದರಲ್ಲಿ ಸಂಪೂರ್ಣ ವಿವರ ಲಭ್ಯವಾಗಲಿದೆ ಎಂದು ಸುಧಾಕರ್ ತಿಳಿಸಿದರು.

    ಹಣಕಾಸಿನ ಅಗತ್ಯ: ಸರ್ಕಾರಕ್ಕೆ ಹಣಕಾಸಿನ ಅಗತ್ಯ ಬಹಳ ಇದೆ. ವೇತನ ಸೇರಿ ಬದ್ಧ ವೆಚ್ಚಗಳಿಗೆ 80 ಸಾವಿರ ಕೋಟಿ ರೂ. ವೆಚ್ಚವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಸರ್ಕಾರಕ್ಕೆ ದೇಣಿಗೆ ನೀಡಲು ಮುಂದಾಗಬೇಕು ಎಂದರು.

    ಕ್ವಾರಂಟೈನ್ ಆದವರು ಅಥವಾ ಸೋಂಕಿತರ ಫೋಟೋ ಗಳನ್ನು ಪ್ರಕಟಿಸುವುದು ತಪ್ಪಾಗುತ್ತದೆ. ಈ ರೀತಿ ಕಂಡುಬಂದರೆ ಕ್ರಮಕೈಗೊಳ್ಳಲು ಗೃಹ ಇಲಾಖೆಗೆ ತಿಳಿಸಲಾಗುತ್ತದೆ.

    | ಡಾ.ಸುಧಾಕರ್ ಸಚಿವ

    ಕೈ ಚೆಲ್ಲಿರುವ ಇಟಲಿ

    ಇಟಲಿ ದೇಶದಲ್ಲಿ ಈಗಾಗಲೇ 7,500 ಜನ ಸಾವನ್ನಪ್ಪಿದ್ದಾರೆ. ಅಲ್ಲಿನ ಪ್ರಧಾನಿ, ನಾವು ಮಾನವ ಪ್ರಯತ್ನಗಳನ್ನೆಲ್ಲ ಮಾಡಿದ್ದೇವೆ. ಇನ್ನು ದೇವರ ಇಚ್ಛೆ ಎಂಬುದಾಗಿ ಕೈಚೆಲ್ಲಿದ್ದಾರೆ. ಆ ಪರಿಸ್ಥಿತಿ ನಮ್ಮ ದೇಶಕ್ಕೂ ಬರಬಾರದು. ಜನತೆ ಎಚ್ಚರದಿಂದಿರಬೇಕು ಎಂದು ಸುಧಾಕರ್ ಅಭಿಪ್ರಾಯಪಟ್ಟರು.

    ಖಾಸಗಿ ಕ್ಲಿನಿಕ್ ತೆರೆಯುವುದು ಕಡ್ಡಾಯ

    ಲಾಕ್​ಡೌನ್ ಸ್ಥಿತಿಯಲ್ಲಿರುವ ರಾಜ್ಯದಲ್ಲಿ ಜನರಿಗೆ ಅನುಕೂಲವಾಗಲು ಸರ್ಕಾರ ಮತ್ತೊಂದು ಕ್ರಮಕೈಗೊಂಡಿದೆ. ಪ್ರಮುಖ ವಾಗಿ ಪಡಿತರವನ್ನು ಕಾರ್ಡ್​ದಾರರ ಮನೆ ಬಾಗಿಲಿಗೇ ತಲುಪಿಸಲು ಸರ್ಕಾರ ತೀರ್ವನಿಸಿದೆ. ಈ ಬಗ್ಗೆ ವೈದ್ಯಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದರು. ಆರೋಗ್ಯ ಇಲಾಖೆಗಳಿಗೆ ಅಗತ್ಯ ಸಲಕರಣೆ ಶೇಖರಣೆ ಮಾಡಲು ಸಿಎಂ ಸೂಚನೆ ನೀಡಿದ್ದು, ಹೆಚ್ಚಿನ ಅಂದಾಜು ಮಾಡಿ 2-3 ತಿಂಗಳಿಗೆ ಬೇಕಾಗುವಷ್ಟು ಖರೀದಿ ಮಾಡಲು ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ ಎಂದರು.

    ಸಂಕಷ್ಟ ಕಾಲದಲ್ಲಿ ಸ್ತುತ್ಯರ್ಹ ನೆರವು

    ಬೆಂಗಳೂರು: ಜನ-ಸಾಮಾನ್ಯರ ಸಂಕಷ್ಟಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕ್ಷಿಪ್ರಗತಿಯಲ್ಲಿ ಸ್ಪಂದಿಸಿ, ಕೈಗೊಂಡಿರುವ ಪರಿಹಾರ ಕ್ರಮಗಳು ಸ್ತುತ್ಯರ್ಹವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿ, ಸ್ವಾಗತಿಸಿದ್ದಾರೆ. ಕರೊನಾ ವೈರಸ್ ಪಿಡುಗಿನಿಂದ ಜನ-ಜೀವನದ ಮೇಲಾಗುವ ದುಷ್ಪರಿಣಾಮ ತಡೆಯಲು 1.70 ಲಕ್ಷ ಕೋಟಿ ರೂ. ಬಿಡುಗಡೆ ಮಾಡಲು ಕೇಂದ್ರ ನಿರ್ಧರಿಸಿದೆ. ಈ ಕ್ರಮದಿಂದ ಬಡವರು, ರೈತರು, ಮಹಿಳೆಯರು, ಕೂಲಿ ಕಾರ್ವಿುಕರು ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಲಿದ್ದು, ಕರೊನಾ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಂಡ ಕ್ರಮ ಗಳನ್ನು ಹೆಚ್ಚು ಗಂಭೀರ, ಚುರುಕಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮೂಲಕ

    ವಿಶ್ವದಲ್ಲೇ ಅತಿದೊಡ್ಡ ಆರ್ಥಿಕ ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಣ್ಣಿಸಿದ್ದು, ಪ್ರಧಾನಿ ಮೋದಿ, ಸಚಿವರಾದ ನಿರ್ಮಲಾ ಸೀತಾರಾಮನ್, ಅನುರಾಗ್ ಠಾಕೂರ್ ತೆಗೆದುಕೊಂಡ ನಿರ್ಧಾರಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕರೊನಾ ಹೊರತು ಇತರ ಮಾಹಿತಿ ಬೇಕೆ?

    ಕರೊನಾ ಕುರಿತು ಮಾಹಿತಿಗೆ ಸಹಾಯವಾಣಿಯಾಗಿ 104 ಟೋನ್ ಸಂಖ್ಯೆ ಬಳಸಿಕೊಳ್ಳುತ್ತಿರುವ ಸರ್ಕಾರ, ಇದೀಗ ತುರ್ತು ನೆರವಿಗೆ, ಕರೊನಾ ಹೊರತು ಇತರ ಮಾಹಿತಿಗೆ ಮತ್ತೊಂದು ಸಹಾಯವಾಣಿ ಮತ್ತು ವಾಟ್ಸ್​ಆಪ್ ಸೇವೆ ಆರಂಭಿಸಿದೆ. 155214 (ವಾಯ್್ಸ ಕಾಲ್ ಟೋಲ್ ಫ್ರೀ) ಸರ್ಕಾರದಿಂದ ಮಾಹಿತಿ ಪಡೆಯಲು, ತುರ್ತು ನೆರವಿಗಾಗಿ ಈ ಸಂಖ್ಯೆಗೆ ಕರೆ ಮಾಡಬಹುದು. ಜತೆಗೆ ವಾಟ್ಸ್​ಆಪ್ (9333333684, 9777777684) ಬಳಸಿಕೊಳ್ಳಬಹುದು.

    ಮಾಸ್ಕ್ ಕಡ್ಡಾಯವಲ್ಲ

    ಮಾಸ್ಕ್ ಎಲ್ಲರಿಗೂ ಕಡ್ಡಾಯವೇನಲ್ಲ. ಯಾರಿಗೆ ಜ್ವರ, ನೆಗಡಿ, ಕೆಮ್ಮು ಬಂದಿರುವುದೋ ಅಂತಹವರಿಗೆ ಮಾತ್ರ ಮಾಸ್ಕ್ ಅಗತ್ಯವಿದೆ. 60 ವರ್ಷ ಮೀರಿದವರು ದಯವಿಟ್ಟು ಹೊರ ಬರಬೇಡಿ. ಸಕ್ಕರೆ ಕಾಯಿಲೆ, ಮೂತ್ರಪಿಂಡ ದೋಷ, ರಕ್ತದ ಒತ್ತಡ, ಇತರ ಸೂಕ್ಷ್ಮಕಾಯಿಲೆ ಇರುವವರು ಹೆಚ್ಚಿನ ನಿಗಾದಲ್ಲಿರಿ. ಮುದ್ದೆ ತಿಂದೆ, ರೊಟ್ಟಿ ತಿಂದೆ ನನಗೆ ಬರಲ್ಲ ಎಂಬ ಉಡಾಫೆ ಬೇಡ ಎಂದು ಸುಧಾಕರ್ ಹೇಳಿದರು.

    ಯಾವ ರಕ್ತದ ಗುಂಪಿನ ಮೇಲೆ ಕರೊನಾ ಹೆಚ್ಚು ಪರಿಣಾಮ ಬೀರಲಿದೆ? ಹೊಸ ಅಧ್ಯಯನದಲ್ಲಿ ಸ್ಪೋಟಕ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts