More

    ಕರೊನಾ ನಿರ್ವಹಣೆಗೆ ಆಪ್ ಸೋಂಕಿತರ ಪತ್ತೆಗೆ ಮ್ಯಾಪ್: ಕರೊನಾ ವಾಚ್ ಹೆಸರಿನ ಮೊಬೈಲ್ ಅಪ್ಲಿಕೇಷನ್ ಶೀಘ್ರದಲ್ಲೇ ಲಭ್ಯ 

    ಬೆಂಗಳೂರು: ಕರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಲಾಕ್​ಡೌನ್ ಏಕೈಕ ಮಾರ್ಗ ಎಂದು ವೈದ್ಯಕೀಯ ತಜ್ಞರು ಸಲಹೆ ಮಾಡಿದ್ದಾರೆ. ಈ ಕಾರಣಕ್ಕಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮನೆಯಲ್ಲೇ ಉಳಿದುಕೊಳ್ಳುವಂತೆ ಜನರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೂ ನಾನು ಮನೆಯಲ್ಲಿದ್ದೇನೆ, ಸುರಕ್ಷತವೇ? ನನ್ನ ಸುತ್ತಮುತ್ತ ಕರೊನಾ ರೋಗಿಗಳಿಲ್ಲವೇ? ಎಂಬ ಅನುಮಾನ ಅನೇಕರನ್ನು ಕಾಡುತ್ತಿದೆ. ಇಡೀ ದೇಶದಲ್ಲೇ ಕರ್ಫ್ಯೂ ಇರುವಾಗ ಶೀತ, ಜ್ವರ, ಕೆಮ್ಮು, ನೆಗಡಿ ಬಂದರೆ ಯಾರನ್ನು ಭೇಟಿ ಮಾಡಲಿ ಎಂಬ ಆತಂಕವೂ ಜನರಲ್ಲಿ ಮನೆ ಮಾಡಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ರಾಜ್ಯ ಸರ್ಕಾರ ಕರೊನಾ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸುತ್ತಿದ್ದು, 1-2 ದಿನಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.

    ಮೊಬೈಲ್ ಆಪ್ ಆಧಾರಿತ ತಂತ್ರಜ್ಞಾನದಿಂದ ಕರೊನಾ ಪಾಸಿಟಿವ್ ಇರುವ ವ್ಯಕ್ತಿಯ 14 ದಿನಗಳ ಹಿಂದಿನ ಚಲನವಲನಗಳನ್ನು ತಿಳಿಯಬಹುದು. ಆತ ಎಲ್ಲಿದ್ದ? ಎಲ್ಲೆಲ್ಲಿ ಓಡಾಡಿದ್ದ? ಯಾರ ಸಂಪರ್ಕಕ್ಕೆ ಬಂದಿದ್ದ? ಎಲ್ಲಿ ಯಾರನ್ನು ಭೇಟಿ ಮಾಡಿದ್ದ ಎಂಬುದನ್ನು ಕರಾರುವಾಕ್ಕಾಗಿ ತಿಳಿಸುತ್ತದೆ. ಇದರಿಂದ ಆತನ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಲು ಅನುಕೂಲವಾಗುತ್ತದೆ. ಈ ಆಪ್​ಗೆ ಗೂಗಲ್ ಮ್ಯಾಪ್ ಅಳವಡಿಕೆ ಮಾಡುವುದರಿಂದ ಸುತ್ತಮುತ್ತ ಯಾರಾದರೂ ಕರೊನಾ ಪಾಸಿಟಿವ್ ಇರುವವರು ಇದ್ದಾರೆಯೇ? ಇದ್ದರೆ ಎಷ್ಟು ದೂರದಲ್ಲಿದ್ದಾರೆ ಎಂಬ ಮಾಹಿತಿ ಕೂಡ ದೊರೆಯುತ್ತದೆ. ಆದರೆ, ರೋಗಿಯ ವೈಯಕ್ತಿಕ ಮಾಹಿತಿ ಸಿಗುವುದಿಲ್ಲ. ಅದನ್ನು ಗೌಪ್ಯವಾಗಿಡಲಾಗುತ್ತಿದೆ. ಹೋಮ್ ಕ್ವಾರಂಟೈನ್​ನಲ್ಲಿ ಇರುವವರ ಮಾಹಿತಿಯನ್ನು ಈ ಮೊಬೈಲ್ ಆಪ್ ಮೂಲಕ ಪಡೆಯಬಹುದು. ಇದು ದೇಶದಲ್ಲೇ ಮೊದಲ ಪ್ರಯತ್ನವಾಗಿದ್ದು, ಅನ್ಯರಿಗೆ ಮಾದರಿಯಾಗಬಹುದಾಗಿದೆ.

    ಕರೊನಾ ಮೊಬೈಲ್ ಅಪ್ಲಿಕೇಶನ್ ಆಪ್​ನಿಂದ ಸಾರ್ವಜನಿಕರಿಗೆ ಮತ್ತು ಆರೋಗ್ಯ ಇಲಾಖೆ ಸಾಗಬೇಕಾದ ಹಾದಿ ಸುಲಭವಾಗಿ ತಿಳಿಯುತ್ತದೆ. ದಿಗ್ಬಂಧಿತರ ಮಾಹಿತಿ ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲು ಅನುಕೂಲವಾಗುತ್ತದೆ.

    | ಮುನೀಶ್ ಮೌದ್ಗಿಲ್ ಕರೊನಾ ವಾರ್ ರೂಂ ಉಸ್ತುವಾರಿ ಅಧಿಕಾರಿ

    ಸರ್ಕಾರಿ ಆಸ್ಪತ್ರೆ ಮಾಹಿತಿ

    ಕರ್ಫ್ಯೂ ಅವಧಿಯಲ್ಲಿ ಏನಾದರೂ ಆದರೆ ಯಾರನ್ನು ಸಂರ್ಪಸಬೇಕು, ಎಲ್ಲೆಲ್ಲಿ ಸರ್ಕಾರಿ ಆಸ್ಪತ್ರೆಗಳಿವೆ ಎಂಬುದನ್ನು ಗೂಗಲ್ ಮ್ಯಾಪ್ ಆಧಾರಿಸಿ ಮಾಹಿತಿ ಪಡೆವ ವ್ಯವಸ್ಥೆ ಆಪ್​ನಲ್ಲಿದೆ.

    ಇಲಾಖೆಗೆ ಅನುಕೂಲಗಳು

    • ರೋಗಿಗಳು, ರೋಗಿಗಳ ಸಂಪರ್ಕಕ್ಕೆ ಬಂದವರ ತಕ್ಷಣ ಪತ್ತೆ
    • ರೋಗ ಲಕ್ಷಣ ಇರುವ ವರಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ
    • ಸೋಂಕಿತರು, ಸಂಭವನೀಯ ಸೋಂಕಿತರ ಪ್ರತ್ಯೇಕೀಕರಣ
    • ರೋಗ ಹರಡದಂತೆ ತಕ್ಷಣ ಮುನ್ನೆಚ್ಚರಿಕೆ ಕ್ರಮ

    ಸಾರ್ವಜನಿಕರಿಗೆ ಪ್ರಯೋಜನ

    • ಸೋಂಕಿತರು ಸಮೀಪದಲ್ಲಿದ್ದಾರೆಯೇ ಎಂಬುದು ತಿಳಿಯುವುದರಿಂದ ಎಚ್ಚರಿಕೆ ಹೆಜ್ಜೆ
    • ಒಬ್ಬರಿಂದ ಒಬ್ಬರಿಗೆ ಹರಡುವು ದಕ್ಕೆ ತಡೆ
    • ರೋಗದ ಬಗೆಗಿನ ಭಯ ಕಡಿಮೆ
    • ಸರ್ಕಾರದ ಮೇಲೆ ವಿಶ್ವಾಸ ಹೆಚ್ಚಳ

    | ವಿಲಾಸ ಮೇಲಗಿರಿ

    ಧೂಮಪಾನ ಮಾಡುವವರಿಗೆ ಕರೊನಾ ವೈರಸ್​ ತುಂಬಾ ಪರಿಣಾಮ ಬೀರಲಿದೆಯೇ? ಸಂಶೋಧನೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts